ADVERTISEMENT

ಕೆರೆ ನುಂಗಿ ಅನಧಿಕೃತ ಬಡಾವಣೆ ನಿರ್ಮಾಣ!

ಕೆರೆಯಂಗಳದಿಂದ... ಸರಣಿ-20: ವಿಜನಾಪುರ ಕೆರೆಯೇ ಮಾಯ * 2500 ಮನೆಗಳ ನಿರ್ಮಾಣ * ಅನಧಿಕೃತ ವಿದ್ಯುತ್‌, ನೀರು ಸಂಪರ್ಕ * ಅಕ್ರಮ–ಸಕ್ರಮಕ್ಕೆ ಒತ್ತುವರಿದಾರರಿಂದ ಅರ್ಜಿ

ಸಂತೋಷ ಜಿಗಳಿಕೊಪ್ಪ
Published 24 ಮೇ 2016, 20:01 IST
Last Updated 24 ಮೇ 2016, 20:01 IST
ವಿಜನಾಪುರ ಕೆರೆ ಜಾಗದಲ್ಲಿ ನಿರ್ಮಾಣಗೊಂಡಿರುವ ಮನೆಗಳು
ವಿಜನಾಪುರ ಕೆರೆ ಜಾಗದಲ್ಲಿ ನಿರ್ಮಾಣಗೊಂಡಿರುವ ಮನೆಗಳು   

ಬೆಂಗಳೂರು: ‘ಏನ್ರಿ. ಇಲ್ಲಿ ಕೆರೆನೇ ಕಾಣುತ್ತಿಲ್ಲ. ನಾವು ಬೇರೆ ಕಡೆ ಬಂದಿರಬಹುದು? ಒಮ್ಮೆ ದಾಖಲೆ ಪರಿಶೀಲಿಸಿ’... ಇದು ವಿಜನಾಪುರ ಕೆರೆಗೆ ಭೇಟಿ ನೀಡಿದ್ದ ‘ಕೆರೆ ಒತ್ತುವರಿ ಪತ್ತೆ ಸದನ ಸಮಿತಿ’ ಸದಸ್ಯರ ಮಾತು.

ರಾಮಮೂರ್ತಿನಗರ ಸಮೀಪದ ವಿಜನಾಪುರ ಕೆರೆಯು ಸಂಪೂರ್ಣ ಒತ್ತುವರಿಯಾಗಿದ್ದು, ಕೆರೆ ಇತ್ತು ಎನ್ನುವುದನ್ನು ಸಾಬೀತುಪಡಿಸುವ ಸಣ್ಣ ಕುರುಹು ಸಹ ಸ್ಥಳದಲ್ಲಿಲ್ಲ.

ಪಾಲಿಕೆಯ ವಾರ್ಡ್‌ ನಂಬರ್‌ 51ರ ವ್ಯಾಪ್ತಿಯಲ್ಲಿರುವ ಕೆರೆಯ ವಿಸ್ತೀರ್ಣ 29 ಎಕರೆ 15 ಗುಂಟೆ ಇದೆ ಎಂದು ದಾಖಲೆ ಹೇಳುತ್ತದೆ. ಕೆರೆ ವೀಕ್ಷಣೆಗೆ ಹೊರಟರೆ ದಾಖಲೆಗೂ ವಾಸ್ತವಾಂಶಕ್ಕೂ ಸಾಕಷ್ಟು ವ್ಯತ್ಯಾಸ ಕಂಡುಬರುತ್ತದೆ.

ಕೆರೆಗೆ ಹೊಂದಿಕೊಂಡಂತೆ ಆರ್‌.ಆರ್‌. ಬಡಾವಣೆ, ದೂರವಾಣಿ  ನಗರ ಇವೆ. ಅಲ್ಲಿನ ನಿವಾಸಿಗಳಿಗೆಲ್ಲ ವಾಯುವಿಹಾರಕ್ಕೆ ಈ ಕೆರೆಯೇ ಮೂಲವಾಗಿತ್ತು.

‘ತಾತ್ಕಾಲಿಕ’ದಿಂದ ಶಾಶ್ವತ: ‘ಇಪ್ಪತ್ತು ವರ್ಷಗಳ ಹಿಂದೆ ಕೆರೆಯಲ್ಲಿ ಈಜಾಡುತ್ತಿದ್ದೆವು. ಸ್ನೇಹಿತರೊಂದಿಗೆ ಸೇರಿ ಮೀನು ಹಿಡಿಯುತ್ತಿದ್ದೆವು. ಕ್ರಮೇಣ ನೀರು ಕಡಿಮೆಯಾಯಿತು. ಆಗಲೇ ಎಲ್ಲಿಂದಲೋ ಬಂದವರು ಕೆರೆ ಜಾಗದಲ್ಲಿ ಮನೆ ಕಟ್ಟಿಕೊಂಡರು’ ಎಂದು ಸ್ಥಳೀಯ ನಿವಾಸಿ ರೆಹಮಾನ್‌  ದೂರಿದರು.

‘ಕೆರೆ ದಡೆ ಮೇಲೆ ನೀಲಗಿರಿ, ಬೇವು ಹಾಗೂ ತೆಂಗಿನ ಮರಗಳಿದ್ದವು. ದಡೆಯಲ್ಲಿ ಕಸ ಬೆಳೆದಿದ್ದರೂ ಓಡಾಡುವುದಕ್ಕೆ ತೊಂದರೆ ಇರಲಿಲ್ಲ’ ಎಂದರು.

‘ಒಂದು ದಿನ ಕಾರ್ಮಿಕರೊಬ್ಬರ ಕುಟುಂಬವು ದಡದಲ್ಲಿ ಚಿಕ್ಕದೊಂದು ಶೆಡ್‌ ಹಾಕಿಕೊಂಡು ವಾಸವಾಗಿತ್ತು. ತಮಿಳುನಾಡಿನಿಂದ ಬಂದಿದ್ದ ಅವರು ಜಾಗವಿಲ್ಲದೆ ವಾಸವಿರಬಹುದು ಎಂದು ಸ್ಥಳೀಯರು ಸುಮ್ಮನಾಗಿದ್ದರು. ನಂತರ ಮತ್ತಿಬ್ಬರ ಕುಟುಂಬಗಳನ್ನು ಕರೆದುಕೊಂಡು ಬಂದ ಅವರು, ಮತ್ತೆ ಶೆಡ್‌ ಹಾಕಿಕೊಂಡರು. ಅದಕ್ಕೆ ಸ್ಥಳೀಯರು ತಕರಾರು  ತೆಗೆದಿದ್ದರು’ ಎಂದು ನೆನಪು ಮಾಡಿಕೊಂಡರು.

‘ಸ್ಥಳೀಯರನ್ನೇ ಬೆದರಿಸಿದ ಕಾರ್ಮಿಕರು, ಕೆರೆ ದಡದಿಂದ ಮಣ್ಣು ಮುಚ್ಚುತ್ತ ಸಾಗಿದರು. ಪೂರ್ತಿ ಕೆರೆಯನ್ನೇ ಮಣ್ಣಿನಿಂದ ಮುಚ್ಚಿಬಿಟ್ಟರು. ಜತೆಗೆ ಖಾಲಿ ಜಾಗದಲ್ಲೆಲ್ಲ ಬೇಲಿ ಹಾಕಿ, ತಾತ್ಕಾಲಿಕ ಶೆಡ್‌ ನಿರ್ಮಿಸಿಕೊಂಡರು. ಅದೇ ಶೆಡ್‌ಗಳು ಶಾಶ್ವತ ಮನೆಗಳಾಗಿ ಮಾರ್ಪಡುತ್ತಿವೆ’ ಎಂದು ತಿಳಿಸಿದರು.

ಅನಧಿಕೃತ ಸಂಪರ್ಕ: ಒತ್ತುವರಿ ಜಾಗದಲ್ಲಿ ನಿರ್ಮಾಣ ಆಗಿರುವ ಸಾವಿರಕ್ಕೂ ಹೆಚ್ಚು ಮನೆಗಳು ಅಕ್ರಮ ಎಂಬುದು ಗೊತ್ತಿದ್ದರೂ ಅಧಿಕಾರಿಗಳು ವಿದ್ಯುತ್‌, ನೀರು ಸಂಪರ್ಕ ಕಲ್ಪಿಸಿದ್ದಾರೆ. ಜತೆಗೆ ಸುಸಜ್ಜಿತ ರಸ್ತೆಯನ್ನೂ ಮಾಡಿಕೊಟ್ಟಿದ್ದಾರೆ. ಬಡಾವಣೆಗೆ ಭೇಟಿ ನೀಡಿದ ವೇಳೆ ವಿದ್ಯುತ್‌ ಸಂಪರ್ಕ ತಂತಿ, ನಲ್ಲಿ, ರಸ್ತೆ ಹಾಗೂ ಇತರೆ ಸೌಲಭ್ಯಗಳು ಕಂಡುಬಂದವು. 

‘ಕೆರೆ ಜಾಗದಲ್ಲಿ ವಾಸ ಇರುವವರಿಂದ ಹಣ ಪಡೆದ ಕೆಲವರು, ಗುರುತಿನ ಚೀಟಿ, ಆಧಾರ್‌ ಮಾಡಿಸಿಕೊಟ್ಟಿದ್ದಾರೆ. ಅನೇಕ ದಾಖಲೆ ಸೃಷ್ಟಿಸಿಕೊಂಡಿಉರವ ಒತ್ತುವರಿದಾರರು ಜಾಗ ತಮ್ಮದೆಂದು ವಾದಿಸುತ್ತಿದ್ದಾರೆ’ ಎಂದು ಸ್ಥಳೀಯರು ದೂರಿದರು. 

ಅನಧಿಕೃತ ಬಡಾವಣೆಯಲ್ಲಿ ನಾಲ್ಕು ದೇವಾಲಯಗಳಿದ್ದು, ಪ್ರಾರ್ಥನಾ ಮಂದಿರವೂ ಇದೆ. ತೆರವು ಕಾರ್ಯಾಚರಣೆ ತಪ್ಪಿಸುವ ಉದ್ದೇಶದಿಂದ ದೇವಸ್ಥಾನ ಕಟ್ಟಲಾಗಿದೆ ಎಂದು ಅವರು ತಿಳಿಸಿದರು.

ಸದನ ಸಮಿತಿಗೆ ವರದಿ ಸಲ್ಲಿಕೆ: ಸದನ ಸಮಿತಿ ಸೂಚನೆಯಂತೆ ಕೆರೆ ಸರ್ವೆ ನಡೆಸಿದ ಕೆ.ಆರ್‌.ಪುರ ತಹಶೀಲ್ದಾರ್‌ ನೇತೃತ್ವದ ಸಮಿತಿಯು ಕೆರೆ ಒತ್ತುವರಿ ಪತ್ತೆ ಹಚ್ಚಿದೆ.

‘ವಿಜನಾಪುರದ ಸರ್ವೆ ನಂಬರ್‌ 42ರಲ್ಲಿ 29 ಎಕರೆ 15 ಗುಂಟೆ ಜಾಗದಲ್ಲಿ ಕೆರೆ ಇರುವ ಬಗ್ಗೆ ದಾಖಲೆ ಇದೆ. ಆದರೆ ಕೆರೆ ಜಾಗ ಪೂರ್ತಿ ಒತ್ತುವರಿ ಆಗಿದೆ’ ಎಂದು ಕೆ.ಆರ್‌. ಪುರ ತಹಶೀಲ್ದಾರ್‌ ಹರೀಶ್ ನಾಯಕ ತಿಳಿಸಿದರು.

‘ಒತ್ತುವರಿ ಜಾಗದಲ್ಲಿ 2,500 ಮನೆಗಳಿವೆ.  ತಮಿಳುನಾಡು, ಆಂಧ್ರ ಪ್ರದೇಶ, ಕೇರಳದ ಜನ ಇಲ್ಲಿದ್ದಾರೆ. ಎಲ್ಲರೂ ಕೂಲಿ ಕಾರ್ಮಿಕರು. ಉದ್ಯೋಗ ಅರಸಿ ನಗರಕ್ಕೆ ಬಂದ ಅವರೆಲ್ಲ ಕಾಯಂ ಆಗಿ ನೆಲೆಸಿದ್ದಾರೆ’ ಎಂದು ಹೇಳಿದರು.

‘20 ವರ್ಷಗಳ ಹಿಂದೆ ಕೆರೆಯಲ್ಲಿ ನೀರು ಇತ್ತು. ವರ್ಷ ಕಳೆದಂತೆ ಕೆರೆಯನ್ನು ಮಣ್ಣಿನಿಂದ ಮುಚ್ಚುತ್ತ ಮನೆ ಕಟ್ಟಿಕೊಂಡಿದ್ದಾರೆ. ಇಂದು ಒಂದಿಂಚೂ ಜಾಗವನ್ನು ಬಿಟ್ಟಿಲ್ಲ. ಒತ್ತುವರಿದಾರರು 94 ಸಿ ಅಡಿ ಅಕ್ರಮ–ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಕೆರೆ ಜಾಗವಾಗಿದ್ದರಿಂದ ಅಕ್ರಮ–ಸಕ್ರಮ ಮಾಡಲು ಬರುವುದಿಲ್ಲ. ಆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ’ ಎಂದು ಹರೀಶ್‌ ನಾಯಕ ವಿವರಿಸಿದರು.

ಕೆರೆ ಜಾಗದಲ್ಲಿ ಕಾಂಪೌಂಡ್‌: ಅನಧಿಕೃತ ಬಡಾವಣೆ ಅಷ್ಟೇ ಅಲ್ಲದೆ ಇತರೆ ಉದ್ದೇಶಕ್ಕೂ ಕೆರೆ ಜಾಗವು ಒತ್ತುವರಿಯಾಗಿದೆ. 26 ಎಕರೆ 21 ಗುಂಟೆ ಜಾಗದಲ್ಲಿ ಅನಧಿಕೃತ ಮನೆಗಳು ನಿರ್ಮಾಣಗೊಂಡಿವೆ. ಅದರೊಂದಿಗೆ ಐಟಿಐ ಎಂಪ್ಲಾಯಿಸ್ ಹೌಸಿಂಗ್‌ ಕಾಲೊನಿಯ ಕಾಂಪೌಂಡ್‌ ನಿರ್ಮಾಣಕ್ಕೆ 2 ಎಕರೆ 34 ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬುದನ್ನು ತಹಶೀಲ್ದಾರ್‌ ಅವರ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ಅಂದು ಕೆರೆಗೆ ನೀರು ಸೇರಲು ಇದ್ದ ಕಾಲುವೆಗಳು ಸಹ ಒತ್ತುವರಿಯಾಗಿವೆ. ಇಂದಿಗೂ ಮಳೆಯಾದರೆ ಈ ಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗುವುದು ಸಾಮಾನ್ಯವಾಗಿಬಿಟ್ಟಿದೆ’ ಎಂದು ಸ್ಥಳೀಯರು ತಿಳಿಸಿದರು.

ಕೆರೆ ಜಾಗ ಮಾರಿದರು!
ಒತ್ತುವರಿ ಮಾಡಿಕೊಂಡ ಜಾಗ ಹಾಗೂ ಅಲ್ಲಿ ನಿರ್ಮಿಸಿದ್ದ ಮನೆಗಳನ್ನು ಮೂಲ ಒತ್ತುವರಿದಾರರು ಬೇರೊಬ್ಬರಿಗೆ ಮಾರಾಟ ಮಾಡಿದ್ದಾರೆ. ತೆರವು ಭೀತಿಯಲ್ಲಿ 20ಕ್ಕೂ ಹೆಚ್ಚು ಒತ್ತುವರಿದಾರರು, ಲಕ್ಷಾಂತರ ರೂಪಾಯಿಗೆ ಜಾಗ ಮಾರಾಟ ಮಾಡಿದ್ದಾರೆ. ಜತೆಗೆ ನಗರದ ಬೇರೆಡೆ ಹೊಸ ಮನೆ ಖರೀದಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದರು.‘ಜಾಗದ ವಿಷಯವಾಗಿಯೇ ಬಡಾವಣೆಯಲ್ಲಿ ನಿರಂತರವಾಗಿ ಜಗಳ ನಡೆಯುತ್ತದೆ. ಸೂಕ್ತ ದಾಖಲೆ ಇಲ್ಲದಿರುವುದರಿಂದ ಜಗಳವೂ ಅಂತ್ಯವಾಗುತ್ತಿಲ್ಲ’ ಎಂದು ಅವರು ತಿಳಿಸಿದರು.

‘ಇದುವೇ ಜಾಗ’ 
‘ನಾವು ಬಡವರು. ಉದ್ಯೋಗ ಅರಸಿ ನಗರಕ್ಕೆ ಬಂದು 20 ವರ್ಷಗಳಿಂದ ಇಲ್ಲಿ ವಾಸವಾಗಿದ್ದೇವೆ. ನಮಗೆ ಇದುವೇ ಜಾಗ’ ಎಂದು ಕೆರೆ ಜಾಗದ ನಿವಾಸಿ ರಘುರಾಮ್‌ ಅವರು ತಿಳಿಸಿದರು.

‘ಎಲ್ಲರೂ ಮನೆ ಕಟ್ಟಿಕೊಳ್ಳುತ್ತಿದ್ದರು. ನಾವು ಕಟ್ಟಿಕೊಂಡೆವು. ಸರ್ಕಾರ ಇವತ್ತಲ್ಲ ನಾಳೆ ಮನೆಯನ್ನು ನಮ್ಮ ಹೆಸರಿಗೆ ಮಾಡುತ್ತದೆ ಎಂಬ ಭರವಸೆಯಿಂದ ಕಾಯುತ್ತಿದ್ದೇವೆ. ಇತ್ತೀಚೆಗೆ ಬಡಾವಣೆಗೆ ಭೇಟಿ ನೀಡಿದ್ದ ಅಧಿಕಾರಿಗಳು, ಕೆರೆ ಒತ್ತುವರಿ ಮಾಡಿಕೊಂಡಿದ್ದೀರಿ. ತೆರವು ಮಾಡುತ್ತೇವೆ ಎಂದು ಹೇಳಿ ಹೋಗಿದ್ದಾರೆ’ ಎಂದು ಅವರು ತಿಳಿಸಿದರು.

‘ಅಕ್ರಮ–ಸಕ್ರಮ ಅಡಿ ಅರ್ಜಿ ಸಲ್ಲಿಸಿದ್ದೇವೆ. ಜಾಗವನ್ನು ಸರ್ಕಾರ ನಮ್ಮ ಹೆಸರಿಗೆ ಮಾಡಬೇಕು. ಆಕಸ್ಮಾತ್‌್ ತೆರವು ಮಾಡಿದರೆ ಗಂಭೀರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ಅವರು ತಿಳಿಸಿದರು.

ನೀವೂ ಮಾಹಿತಿ ನೀಡಿ
ನಗರದ ಕೆರೆಗಳ ಹಾಗೂ ರಾಜಕಾಲುವೆ ಸುತ್ತ ತಲೆ ಎತ್ತಿರುವ ಕಟ್ಟಡಗಳನ್ನು ನಿರ್ದಾಕ್ಷಿಣ್ಯವಾಗಿ ಕೆಡವಬೇಕು ಎಂದು ಹಸಿರು ನ್ಯಾಯಮಂಡಳಿ ಆದೇಶ ಹೊರಡಿಸಿದೆ. ನಗರದ ಹತ್ತಾರು ಕೆರೆಗಳ ಮೇಲೆ ಭೂಮಾಫಿಯಾಗಳು, ಬಿಲ್ಡರ್‌ಗಳ ಕಣ್ಣು ಬಿದ್ದು ಕೆರೆಗಳು ಮಾಯವಾಗಿವೆ. ಕೆರೆ, ರಾಜಕಾಲುವೆ  ಒತ್ತುವರಿ ಮಾಡಿರುವವರ ಬಗ್ಗೆ ಸಾರ್ವಜನಿಕರು ಪೂರಕ ದಾಖಲೆಗಳೊಂದಿಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಬಹುದು. ಅವುಗಳನ್ನು ಪ್ರಕಟಿಸುತ್ತೇವೆ.

ಮಾಹಿತಿ ನೀಡಲು 080–25880607, 25880643, 9916240432, 9740231381 ಸಂಪರ್ಕಿಸಬಹುದು. ವಾಟ್ಸ್ ಆ್ಯಪ್‌ ಮೂಲಕವೂ ದಾಖಲೆ ಕಳಿಹಿಸಬಹುದು ಇಮೇಲ್‌ ವಿಳಾಸ: bangalore@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.