ADVERTISEMENT

ಕ್ರಮಕ್ಕೆ ಲೋಕಾಯುಕ್ತ ನಿರ್ದೇಶನ

ಸಿವಿಲ್‌ ವ್ಯಾಜ್ಯದಲ್ಲಿ ಪೊಲೀಸ್‌ ಹಸ್ತಕ್ಷೇಪ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2014, 19:30 IST
Last Updated 2 ಸೆಪ್ಟೆಂಬರ್ 2014, 19:30 IST

ಬೆಂಗಳೂರು: ನಗರದ ಕೆಲವು ಪೊಲೀಸ್‌ ಅಧಿಕಾರಿಗಳು ಸಿವಿಲ್‌ ವ್ಯಾಜ್ಯಗಳಲ್ಲಿ ಮಧ್ಯಪ್ರವೇಶಿಸಿ ಪ್ರಭಾವ ಬೀರುತ್ತಿದ್ದಾರೆ ಮತ್ತು ನಿವೇಶನಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಜರುಗಿಸುವಂತೆ ನಗರ ಪೊಲೀಸ್‌ ಕಮಿಷನರ್‌ ಎಂ.ಎನ್‌.ರೆಡ್ಡಿ ಅವರಿಗೆ ಲೋಕಾಯುಕ್ತ ನ್ಯಾಯಮೂರ್ತಿ ಡಾ.ವೈ.ಭಾಸ್ಕರ್‌ ರಾವ್‌ ನಿರ್ದೇಶನ ನೀಡಿದ್ದಾರೆ.

ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿನ ಸಮಸ್ಯೆಗಳು, ದೂರುಗಳ ಕುರಿತು ಲೋಕಾಯುಕ್ತರು ಹಿಂದೆ ಕೆಲವು ಸೂಚನೆಗಳನ್ನು ನೀಡಿದ್ದರು. ಮಂಗಳವಾರ ಲೋಕಾಯುಕ್ತ ಕಚೇರಿಗೆ ಹಾಜರಾದ ರೆಡ್ಡಿ ಅವರು ಈ ಸಂಬಂಧ ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರ ಜೊತೆ ಚರ್ಚೆ ನಡೆಸಿದರು.

ಕೆಲವು ಪೊಲೀಸ್‌ ಅಧಿಕಾರಿಗಳು ಸಿವಿಲ್‌ ವ್ಯಾಜ್ಯಗಳ ಇತ್ಯರ್ಥಕ್ಕೆ ಪ್ರಭಾವ ಬೀರುತ್ತಿದ್ದಾರೆ ಮತ್ತು ಪ್ರಭಾವ ಬೀರಿ ನಿವೇಶನಗಳನ್ನು ಪಡೆದು ಕೊಳ್ಳುತ್ತಿದ್ದಾರೆ ಎಂಬ ದೂರುಗಳನ್ನು ಲೋಕಾ­ಯುಕ್ತರು ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ‘ಪೊಲೀಸ್‌ ಅಧಿಕಾರಿಗಳ ಇಂತಹ ನಡವಳಿಕೆಯನ್ನು ಸಹಿಸಿ­ಕೊಳ್ಳಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಇಂತಹ ದೂರುಗಳು ಬರದ ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು’ ಎಂಬ ನಿರ್ದೇಶನ ನೀಡಿದ್ದಾರೆ ಎಂದು ಲೋಕಾಯುಕ್ತದ ಪ್ರಕಟಣೆ ತಿಳಿಸಿದೆ.

ನಗರದಲ್ಲಿ ಕೆಲವು ವ್ಯಕ್ತಿಗಳು ಕಾನೂನುಬಾಹಿರ ವಾಗಿ ವಾಹನ ನಿಲುಗಡೆ (ಪಾರ್ಕಿಂಗ್‌) ಶುಲ್ಕ ವಸೂಲಿ ಮಾಡುತ್ತಿದ್ದು, ತಕ್ಷಣವೇ ಅದಕ್ಕೆ ಕಡಿವಾಣ ಹಾಕಬೇಕು. ನಗರದ ಅಂದ ಹಾಳು ಮಾಡುತ್ತಿರುವ ಅನಧಿಕೃತ ಫ್ಲೆಕ್ಸ್‌ಗಳನ್ನು ಅಳವಡಿಸಿರುವವರ ವಿರುದ್ಧ ಮೊಕದ್ದಮೆ ದಾಖಲು ಮಾಡಿ, ಕಠಿಣ ಕ್ರಮ ಜರುಗಿಸಬೇಕು.

ನಗರದಲ್ಲಿ ಅಪರಾಧ ನಿಯಂತ್ರಣ, ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಮತ್ತು ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ನಿರ್ದೇಶನ­ಗಳನ್ನೂ ಲೋಕಾಯುಕ್ತರು ನೀಡಿದ್ದಾರೆ. ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಎಸ್‌.ಬಿ.ಮಜಗೆ, ಸುಭಾಷ್‌ ಬಿ.ಅಡಿ, ಲೋಕಾ ಯುಕ್ತದ ರಿಜಿಸ್ಟ್ರಾರ್‌ ಎಚ್‌.ಆರ್‌.ದೇಶಪಾಂಡೆ, ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಎಚ್‌.ಎನ್‌. ಸತ್ಯನಾರಾಯಣ ರಾವ್‌ ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT