ADVERTISEMENT

ಖರೀದಿ, ಬಾಡಿಗೆ ನೆಪದಲ್ಲಿ ಕಾರು ಕಳ್ಳತನ

ಆರೋಪಿ ಬಂಧನ: ₹52 ಲಕ್ಷ ಮೌಲ್ಯದ 7 ಕಾರುಗಳ ಜಪ್ತಿ

​ಪ್ರಜಾವಾಣಿ ವಾರ್ತೆ
Published 4 ಮೇ 2016, 19:35 IST
Last Updated 4 ಮೇ 2016, 19:35 IST

ಬೆಂಗಳೂರು: ಕಾರು ಖರೀದಿಸುವುದಾಗಿ ಹೇಳಿ ಮಾಲೀಕರನ್ನು ನಂಬಿಸಿ ಅವರ ಕಾರು ಹಾಗೂ ಬಾಡಿಗೆ ಪಡೆದ ಕಾರುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪದಡಿ ಮಾಗಡಿ ರಸ್ತೆಯ ಎಸ್‌. ಪ್ರವೀಣ್‌ ಕುಮಾರ್‌ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಖಾಸಗಿ ಕಂಪೆನಿಯಲ್ಲಿ ಪ್ರವೀಣ್‌ ಕುಮಾರ್‌ ಲೆಕ್ಕಾಧಿಕಾರಿ ಆಗಿದ್ದಾನೆ. ಆತನಿಂದ ಒಂದು ಎಲೈಟ್‌ ಐ–20, ಎರಡು ಸ್ವಿಫ್ಟ್‌, ಫೋರ್ಡ್‌ ಫಿಗೋ, ಟೊಯೆಟಾ ಇನ್ನೋವಾ ಕಾರುಗಳನ್ನು (ಒಟ್ಟು ₹ 52 ಲಕ್ಷ ಮೌಲ್ಯ) ಜಪ್ತಿ ಮಾಡಲಾಗಿದೆ. ಕಳ್ಳತನದಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ತಿಳಿಸಿದ್ದಾರೆ. 

ಜಮಾಲುದ್ದೀನ್‌ ಎಂಬುವವರು ತಮ್ಮ ಕಾರನ್ನು ₹ 4.80 ಲಕ್ಷಕ್ಕೆ ಮಾರಾಟ ಮಾಡುತ್ತಿರುವುದಾಗಿ ಒಎಲ್‌ಎಕ್ಸ್‌ನಲ್ಲಿ ಜಾಹೀರಾತು ಹಾಕಿದ್ದರು. ಅದನ್ನು ನೋಡಿದ ಪ್ರವೀಣ್‌ ಅವರ ಮನೆಗೆ ಹೋಗಿ ಕಾರು ಖರೀದಿಗೆ ಮಾತುಕತೆ ನಡೆಸಿದ್ದ. ತನ್ನ ಗುರುತಿನ ಚೀಟಿ ನೀಡಿ ₹ 10 ಸಾವಿರ ಮುಂಗಡ ಹಣ ಕೊಟ್ಟಿದ್ದ. ಬಳಿಕ ಎಟಿಎಂಗೆ ಹೋಗಿ ಉಳಿದ ಹಣ ಡ್ರಾ ಮಾಡಿಕೊಂಡು ಬರುತ್ತೇನೆ ಎಂದು  ಅದೇ ಕಾರಿನಲ್ಲಿ ಹೋಗಿದ್ದ. ಗಂಟೆ ಕಳೆದರೂ ಆತ ವಾಪಸ್‌ ಬಾರದಿದ್ದಾಗ ಜಮಾಲುದ್ದೀನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದರು.

ಗುರುತಿನ ಚೀಟಿ ವಿಳಾಸದಲ್ಲಿ ಪರಿಶೀಲನೆ ನಡೆಸಿದಾಗ ಪ್ರವೀಣ್‌್ ಅಲ್ಲಿರಲಿಲ್ಲ.  ಮೊಬೈಲ್‌ ಕರೆಗಳ ಜಾಡು ಹಿಡಿದು ಆರೋಪಿಯನ್ನು ಬಂಧಿಸಲಾಗಿದೆ. ಕದ್ದ ಕಾರನ್ನು ಪ್ರವೀಣ್‌ ಮಾಗಡಿ ರಸ್ತೆಯ ವ್ಯಕ್ತಿಯೊಬ್ಬರ ಬಳಿ ಅಡವಿಟ್ಟು, ತನ್ನ ತಾಯಿಗೆ ಹುಷಾರಿಲ್ಲವೆಂದು ಹೇಳಿ ಹಣ ಪಡೆದಿದ್ದ ಎಂದು ಅವರು ವಿವರಿಸಿದರು.

ನಾಲ್ಕನೇ ಆರೋಪಿ ಪ್ರವೀಣ್‌: ಕಾರು ಕಳ್ಳತನ ಪ್ರಕರಣದಲ್ಲಿ ಪ್ರವೀಣ್‌ ನಾಲ್ಕನೇ ಆರೋಪಿಯಾಗಿದ್ದು, ಆತನ ಸ್ನೇಹಿತರಾದ ಹರ್ಷವರ್ಧನ್‌, ಅಶೋಕ್‌, ನಾಗರಾಜ್‌ ಪ್ರಮುಖ ಆರೋಪಿಗಳು ಎಂದು ಪೊಲೀಸರು ತಿಳಿಸಿದರು.

ಪ್ರವೀಣ್‌ನಿಗೆ ಸಂಬಳ ನೀಡುವುದಾಗಿ ಹೇಳಿದ್ದ ಹರ್ಷವರ್ಧನ್‌ ಹಾಗೂ ಇತರರು ಕಾರಿನ ಗ್ರಾಹಕನಾಗಿ ಹೋಗುವಂತೆ ಒಪ್ಪಿಸಿದ್ದರು. ಪ್ರವೀಣ್‌ ಕಾರು ತಂದ ಬಳಿಕ ಅದನ್ನು ತೆಗೆದುಕೊಂಡು ಪರಾರಿಯಾಗುತ್ತಿದ್ದರು. ಆದರೆ ಜಮಾಲುದ್ದೀನ್‌ ಅವರ ಕಾರನ್ನು ಪ್ರವೀಣ್‌ನೇ ಅಡವಿಟ್ಟಿದ್ದ. ಆತನ ಮಾಹಿತಿ ಮೇರೆಗೆ ಉಳಿದ ಎಲ್ಲ ಕಾರುಗಳನ್ನು ಜಪ್ತಿ ಮಾಡಲಾಗಿದೆ. ಇದೇ ನಾಲ್ವರ ತಂಡ ಟ್ಯಾಕ್ಸಿ ಕಂಪೆನಿಗಳ ಕಾರುಗಳನ್ನು ಬಾಡಿಗೆ ಪಡೆದು  ಅವುಗಳನ್ನು ಹಿಂದಿರುಗಿಸದೆ ಕಳ್ಳತನ ಮಾಡುತ್ತಿದ್ದರು  ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.