ADVERTISEMENT

ಖರ್ಗೆ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಘೋಷಿಸಿ

ನಿಡುಮಾಮಿಡಿ ಮಠದ ವೀರಭದ್ರಚನ್ನಮಲ್ಲ ಸ್ವಾಮೀಜಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಮೇ 2016, 19:30 IST
Last Updated 5 ಮೇ 2016, 19:30 IST
ಎಸ್‌.ಎಂ.ಕೃಷ್ಣ ಅವರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. (ಎಡದಿಂದ) ಹಟ್ಟಿ ಚಿನ್ನದ ಗಣಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ರಾಣಿ ಸತೀಶ್‌, ನಿಡುಮಾಮಿಡಿ ಮಠದ ವೀರಭದ್ರಚನ್ನಮಲ್ಲ ಸ್ವಾಮೀಜಿ, ವಿಧಾನ ಪರಿಷತ್‌ ಸದಸ್ಯೆ ಮೋಟಮ್ಮ, ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್  ಚಿತ್ರದಲ್ಲಿದ್ದಾರೆ    ಪ್ರಜಾವಾಣಿ ಚಿತ್ರ
ಎಸ್‌.ಎಂ.ಕೃಷ್ಣ ಅವರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. (ಎಡದಿಂದ) ಹಟ್ಟಿ ಚಿನ್ನದ ಗಣಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ರಾಣಿ ಸತೀಶ್‌, ನಿಡುಮಾಮಿಡಿ ಮಠದ ವೀರಭದ್ರಚನ್ನಮಲ್ಲ ಸ್ವಾಮೀಜಿ, ವಿಧಾನ ಪರಿಷತ್‌ ಸದಸ್ಯೆ ಮೋಟಮ್ಮ, ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಚಿತ್ರದಲ್ಲಿದ್ದಾರೆ ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮುಂದಿನ ದಿನಗಳಲ್ಲಿ ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎಂದು ಘೋಷಿಸಿ, ಚುನಾವಣೆಗೆ ಹೋಗುವ ಪ್ರಯತ್ನ ಮಾಡಬಹುದು’ ಎಂದು ನಿಡುಮಾಮಿಡಿ ಮಠದ ವೀರಭದ್ರಚನ್ನಮಲ್ಲ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದಲ್ಲಿ ಗುರುವಾರ ನಡೆದ ಅಖಿಲ ಕರ್ನಾಟಕ ಮೋಟಮ್ಮ ಅಭಿಮಾನಿಗಳ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಖರ್ಗೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದರಿಂದ ಉತ್ತರ ಕರ್ನಾಟಕ ಭಾಗದ ಮತ್ತು ದಲಿತ ಹಿರಿಯ ನಾಯಕನೊಬ್ಬ  ಮುಖ್ಯಮಂತ್ರಿಯಾದ ಹಾಗೆ ಆಗುತ್ತದೆ. 

ಇದರಲ್ಲಿ ತಪ್ಪೇನಿಲ್ಲ. ಕಾಂಗ್ರೆಸ್‌ನವರು ಎಲ್ಲರೂ ಒಟ್ಟಾಗಿ ಶ್ರಮಿಸಿದರೆ ಮಾತ್ರ ಇದು ಯಶಸ್ವಿಯಾಗುತ್ತದೆ. ಹೀಗಾಗಿ ಸಿದ್ದರಾಮಯ್ಯ ಅವರು ಇಂತಹ ವಿಚಾರಕ್ಕೆ ಸಹಮತ ವ್ಯಕ್ತಪಡಿಸುತ್ತಾರೆ ಎಂದು ನಾನು ಅಂದುಕೊಂಡಿದ್ದೇನೆ’ ಎಂದು ಹೇಳಿದರು.

‘ದಲಿತರಲ್ಲಿ ಮೋಟಮ್ಮ ಸೇರಿದಂತೆ ಅನೇಕರಿಗೆ ಮುಖ್ಯಮಂತ್ರಿಯಾಗುವ ಹಿರಿತನ, ಅನುಭವ, ಸಾಮರ್ಥ್ಯವಿದೆ. ಆದರೆ ಯೋಗ ಕೂಡಿಬರಬೇಕಷ್ಟೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಮಾತ್ರವಲ್ಲ ಪ್ರಧಾನಿಯಾಗುವ ಯೋಗ್ಯತೆ ಇದೆ. ಅವಕಾಶಗಳು ನಿರ್ಮಾಣವಾಗಬೇಕಷ್ಟೇ’ ಎಂದು ಅವರು ತಿಳಿಸಿದರು.

‘ಈ ನಾಡಿನ ಬಹುದೊಡ್ಡ ಸಮುದಾಯ ತನ್ನ ಪ್ರಾತಿನಿಧ್ಯ ಕೇಳುವುದು ಸಹಜ ಮತ್ತು ನ್ಯಾಯವಾಗಿದೆ. ಇಂತಹ ವಿಚಾರಗಳನ್ನು ಸಹಾನುಭೂತಿಯಿಂದ ನೋಡಬೇಕೇ  ವಿನಾ ಬೇರೆ ರೀತಿ ಅರ್ಥೈಸಬೇಕಿಲ್ಲ. ಸಣ್ಣಪುಟ್ಟ ಕೊರತೆಗಳು ಇರಬಹುದು ಆದರೆ ಈಗಲೂ ಸಿದ್ದರಾಮಯ್ಯ ಅವರಿಗೆ ಹಿಂದುಳಿದವರು, ಬಡವರ ಬಗ್ಗೆ ಹೆಚ್ಚು ಒಳ್ಳೆಯ ಕಾರ್ಯಕ್ರಮ ಕೊಡಲು ಅವಕಾಶ, ಧೈರ್ಯವಿದೆ’ ಎಂದು ಅವರು ಹೇಳಿದರು.

ಸಂಘ ಉದ್ಘಾಟಿಸಿ ಮಾತನಾಡಿದ ಕಾಂಗ್ರೆಸ್‌ ಹಿರಿಯ ಮುಖಂಡ ಎಸ್‌.ಎಂ.ಕೃಷ್ಣ, ‘ಇಂದಿರಾ ಗಾಂಧಿ ಅವರ ಗರಡಿಯಲ್ಲಿ ಪಳಗಿದ ಮೋಟಮ್ಮ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ನಾಡಿನುದ್ದಕ್ಕೂ ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘಗಳ ಮೂಲಕ ತಂದ ಸಾಮಾಜಿಕ ಸುಧಾರಣೆ ಸ್ಮರಣೀಯವಾದ್ದದ್ದು’ ಎಂದು ಶ್ಲಾಘಿಸಿದರು.

ಕಾಂಗ್ರೆಸ್‌ ಮುಖಂಡ ಬಿ.ಎ.ಹಸನಬ್ಬ ಮಾತನಾಡಿ, ‘ದಲಿತ ವರ್ಗಕ್ಕೆ ಸೇರಿದ ಪರಮೇಶ್ವರ್‌, ಖರ್ಗೆ ಅವರು ಮುಖ್ಯಮಂತ್ರಿಯಾಗಬೇಕು ಎಂದು ಕೇಳುವವರು ಅಪ್ಪಿತಪ್ಪಿಯೂ ಮೋಟಮ್ಮನವರ ಹೆಸರು ಹೇಳುವುದಿಲ್ಲ. ಮಹಿಳೆಯರ ಬಾಯಲ್ಲಿ ಕೂಡ ಇದು ಕೇಳಿಬರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಪತ್ರಕರ್ತ ರವೀಂದ್ರ ರೇಷ್ಮೆ ಮಾತನಾಡಿ, ‘ಪರಮೇಶ್ವರ್, ಖರ್ಗೆ ಅವರಂತೆ ಮೋಟಮ್ಮ ಅವರು ಏಕೆ ಮುಖ್ಯಮಂತ್ರಿಯಾಗಬಾರದು? ರಾಜ್ಯದಲ್ಲಿ ಒಬ್ಬ ಮಹಿಳಾ ಮುಖ್ಯಮಂತ್ರಿ ಏಕಾಗಬಾರದು ಎಂಬ ಒಂದು ಚರ್ಚೆ ಶುರುವಾಗಲಿ. ಆ ಸ್ಥಾನ ಮೋಟಮ್ಮನವರಿಗೆ ಸಿಗುವುದಾದರೆ ಅದಕ್ಕಿಂತ ಸಂತೋಷದ ಸಂಗತಿ ಇನ್ನೊಂದಿಲ್ಲ’ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

‘ತಪ್ಪಾಗಿ ಅರ್ಥೈಸಿಕೊಳ್ಳದಿರಿ’
ದಲಿತ ಮುಖ್ಯಮಂತ್ರಿ ಬೇಡಿಕೆ ಅಧಿಕಾರ ದಾಹದ ಮಾತಲ್ಲ.  ಪ್ರಾತಿನಿಧ್ಯದ ವಿಷಯ. ಪ್ರತಿಯೊಂದು ಸಮುದಾಯ ತನ್ನ ಪ್ರಾತಿನಿಧ್ಯ ಕೇಳುವ ಹಕ್ಕು ಹೊಂದಿದೆ. ಅದನ್ನು ಯಾರೂ ತಪ್ಪಾಗಿ ಅರ್ಥೈಸಿಕೊಳ್ಳಬಾರದು.
-ವೀರಭದ್ರಚನ್ನಮಲ್ಲ ಸ್ವಾಮೀಜಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.