ADVERTISEMENT

ಗಂಡನ ಕೊಂದು 2 ತಿಂಗಳ ಬಳಿಕ ಸಿಕ್ಕಿಬಿದ್ದಳು!

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 19:32 IST
Last Updated 21 ಮಾರ್ಚ್ 2018, 19:32 IST

ಬೆಂಗಳೂರು: ಮದ್ಯವ್ಯಸನಿ ಪತಿಯನ್ನು ಕೊಲೆಗೈದು, ಪೊಲೀಸರಿಗೆ ಸುಳ್ಳು ದೂರು ಕೊಟ್ಟಿದ್ದ ಜಿ.ಉಮಾ (37) ಎಂಬುವರು ವಿಜಯನಗರ ಪೊಲೀಸರ ಅತಿಥಿಯಾಗಿದ್ದಾರೆ.

ಮೂಡಲಪಾಳ್ಯ ಸಮೀಪದ ಪಂಚಶೀಲನಗರದಲ್ಲಿ ಜ.18ರಂದು ರಿಯಲ್ ಎಸ್ಟೇಟ್ ಏಜೆಂಟ್ ಗಣೇಶ್ (47) ಅವರ ಹತ್ಯೆಯಾಗಿತ್ತು. ‘ನಾನು ಹಾಗೂ ಮಗ ಶಿವಮೊಗ್ಗಕ್ಕೆ ಹೋಗಿದ್ದಾಗ ಯಾರೋ ಮನೆಗೆ ನುಗ್ಗಿ ಪತಿಯನ್ನು ಕೊಂದಿದ್ದಾರೆ’ ಎಂದು ಮೃತರ ಪತ್ನಿ ಉಮಾ ದೂರು ಕೊಟ್ಟಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು, ಎರಡು ತಿಂಗಳ ನಂತರ ಕೊಲೆ ರಹಸ್ಯ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಮಾ ಅವರನ್ನು ಬಂಧಿಸುವುದರ ಜತೆಗೆ, ಸಾಕ್ಷ್ಯನಾಶಕ್ಕೆ ಸಹಕರಿಸಿದ್ದಕ್ಕಾಗಿ ಅವರ 17 ವರ್ಷದ ಮಗ ಹಾಗೂ ತಂದೆ ಕೆ.ರಾಜು (65) ಅವರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ADVERTISEMENT

‘ಪತಿ ಪ್ರತಿದಿನ ಪಾನಮತ್ತರಾಗಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದರು. ಅವರನ್ನು ಸುಮ್ಮನೆ ಬಿಟ್ಟರೆ ನನಗೆ ಹಾಗೂ ಮಗನಿಗೆ ಉಳಿಗಾಲವಿಲ್ಲ ಎನಿಸಿತು. ಹೀಗಾಗಿ, ಮಚ್ಚಿನಿಂದ ಹೊಡೆದು ಕೊಂದೆ’ ಎಂದು ಉಮಾ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.

ಶಿವಮೊಗ್ಗದ ಉಮಾ, ತಮ್ಮ ಊರಿನವರೇ ಆದ ಗಣೇಶ್ ಅವರನ್ನು 20 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಈ ಕುಟುಂಬ ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದೆ. ಹಿರಿಯ ಮಗಳು 18ನೇ ವಯಸ್ಸಿನಲ್ಲೇ ಮದುವೆಯಾಗಿ ಗಂಡನ ಮನೆ ಸೇರಿದ್ದಾರೆ.

ನಗರಕ್ಕೆ ಬಂದ ಆರಂಭದಲ್ಲಿ ಮೆಕ್ಯಾನಿಕ್ ಆಗಿದ್ದ ಗಣೇಶ್, ಪಟ್ಟೆಗಾರಪಾಳ್ಯದಲ್ಲಿ ಗ್ಯಾರೇಜ್ ಇಟ್ಟುಕೊಂಡಿದ್ದರು. ಆರು ವರ್ಷಗಳ ಹಿಂದೆ ಗ್ಯಾರೇಜ್ ಬಂದ್ ಮಾಡಿ, ರಿಯಲ್ ಎಸ್ಟೇಟ್ ವ್ಯವಹಾರ ಪ್ರಾರಂಭಿಸಿದ್ದರು.

ಸಂಪಾದನೆ ಹೆಚ್ಚಾದಂತೆ ಚಟಗಳೂ ಹೆಚ್ಚಾಗತೊಡಗಿದವು. ಮದ್ಯದ ದಾಸರಾದ ಅವರು, ಜೂಜಾಟಕ್ಕೂ ಹಣ ಸುರಿಯಲಾರಂಭಿಸಿ
ದರು. ಇದರಿಂದ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಆ ನಂತರ ಉಮಾ ಮನೆಯಲ್ಲೇ ಟೈಲರಿಂಗ್ ಮಾಡುತ್ತ, ಕುಟುಂಬ ನಿರ್ವಹಣೆ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

₹ 1,500ಕ್ಕೆ ತಾರಕಕ್ಕೇರಿದ ಜಗಳ: ಜ.18ರ ಬೆಳಿಗ್ಗೆ ಉಮಾ ಗಂಡನ ಅಂಗಿ ಜೇಬಿನಿಂದ ₹ 1,500 ತೆಗೆದುಕೊಂಡಿದ್ದರು. ರಾತ್ರಿ ಆ ವಿಚಾರ ತಿಳಿದ ಗಣೇಶ್, ಕುಡಿದ ಮತ್ತಿನಲ್ಲಿ ಹೆಂಡತಿ ಜತೆ ಗಲಾಟೆ ಶುರು ಮಾಡಿದ್ದರು. ಜಗಳ ಬಿಡಿಸಲು ಮುಂದಾದ ಮಗನ ಮೇಲೂ ಹಲ್ಲೆ ನಡೆಸಿದ್ದರು. ಇದರಿಂದ ಬೇಸರಗೊಂಡ ಮಗ, ‘ಏನಾದರೂ ಮಾಡಿಕೊಳ್ಳಿ’ ಎಂದು ಸಿಟ್ಟಿನಲ್ಲೇ ಕೋಣೆ ಸೇರಿಕೊಂಡಿದ್ದ.

ಇತ್ತ ದಂಪತಿ ನಡುವಿನ ಜಗಳ ತಾರಕಕ್ಕೇರಿತ್ತು. ಗಣೇಶ್ ದೊಣ್ಣೆಯಿಂದ ಪತ್ನಿಗೆ ಹೊಡೆಯಲಾರಂಭಿಸಿದ್ದರು. ಈ ಹಂತದಲ್ಲಿ ಬೆಡ್‌ಶೀಟನ್ನು ಗಂಡನ ಮುಖದ ಮೇಲೆ ಎಸೆದ ಉಮಾ, ಬಳಿಕ ಅಲ್ಲೇ ಇದ್ದ ಮಚ್ಚಿನಿಂದ 12 ಬಾರಿ ಹೊಡೆದಿದ್ದರು. ತಲೆ ಹಾಗೂ ಕುತ್ತಿಗೆಗೆ ಏಟು ಬಿದ್ದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಗಣೇಶ್ ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ನಸುಕಿನ ವೇಳೆ (3 ಗಂಟೆಗೆ) ಮಗನನ್ನು ಎದ್ದೇಳಿಸಿದ ಉಮಾ, ‘ನಿನ್ನ ಅಪ್ಪನನ್ನು ಸಾಯಿಸಿಬಿಟ್ಟೆ. ಇಲ್ಲೇ ಇದ್ದರೆ ಪೊಲೀಸರಿಗೆ ಸಿಕ್ಕಿ ಬೀಳುತ್ತೇವೆ. ಶಿವಮೊಗ್ಗಕ್ಕೆ ಹೋಗಿಬಿಡೋಣ ಬಾ’ ಎಂದಿದ್ದರು. ಆ ರಕ್ತಸಿಕ್ತ ಬೆಡ್‌ಶೀಟ್ ಹಾಗೂ ಮಚ್ಚನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ಹೊರಟ ತಾಯಿ –ಮಗ, ಬೆಳಿಗ್ಗೆ 8 ಗಂಟೆ ಸುಮಾರಿಗೆ ಪಟ್ಟೆಗಾರಪಾಳ್ಯದ ಸಂಬಂಧಿಕರ ಮನೆಗೆ ತೆರಳಿದರು. ಅಲ್ಲಿ ಸೀಮಂತ ಕಾರ್ಯ ಮುಗಿಸಿಕೊಂಡು, 11 ಗಂಟೆಗೆ ಮೆಜೆಸ್ಟಿಕ್‌ನಿಂದ ಬಸ್‌ನಲ್ಲಿ ಶಿವಮೊಗ್ಗದತ್ತ ಹೊರಟರು.

ಶಿವಮೊಗ್ಗದ ಶಿವನಗರದಲ್ಲಿ ಉಮಾ ಪೋಷಕರು ನೆಲೆಸಿದ್ದಾರೆ. ಸಂಜೆ 7 ಗಂಟೆಗೆ ತವರು ಮನೆ ತಲುಪಿದ ಅವರು, ಗಂಡನನ್ನು ಕೊಲೆಗೈದ ವಿಚಾರ
ವನ್ನು ಹೇಳಿದ್ದರು. ಆಗ ಮಗಳನ್ನು ಸಮಾಧಾನಪಡಿಸಿದ್ದ ತಂದೆ, ಆ ಬೆಡ್‌ ಶೀಟನ್ನು ನೀರು ಕಾಯಿಸುವ ಒಲೆಯಲ್ಲಿ ಸುಟ್ಟು ಹಾಕಿದ್ದರು. ನಂತರ ಮಚ್ಚನ್ನು ರಾತ್ರಿಯೇ ಶಂಕರ್ ಪಾರ್ಕ್ ಸಮೀಪದ ಪೊದೆಯೊಂದರಲ್ಲಿ ಎಸೆದು ಬಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಕತೆ ಹೆಣೆದ ಉಮಾ: ‘ಪೊಲೀಸರು ಎಷ್ಟೇ ಕೇಳಿದರೂ, ವಾಸ್ತವ ಸಂಗತಿಯನ್ನು ಬಾಯ್ಬಿಡಬೇಡ’ ಎಂದು ಮಗನಿಗೆ ಹೇಳಿಕೊಟ್ಟ ಉಮಾ, ಜ.20ರ ರಾತ್ರಿ ರೈಲಿನಲ್ಲಿ ನಗರಕ್ಕೆ ವಾಪಸಾದರು. 12.30ರ ಸುಮಾರಿಗೆ ಮನೆ ಹತ್ತಿರ ಬಂದ ಅವರು ನಾಟಕ ಶುರು ಮಾಡಿದರು.

ಮನೆಯೊಳಗೆ ಹೋಗುತ್ತಿದ್ದಂತೆಯೇ ತಾಯಿ–ಮಗ ಜೋರಾಗಿ ಚೀರಿಕೊಂಡಿದ್ದರು. ಆ ಸದ್ದು ಕೇಳಿ ನೆರೆಹೊರೆಯವರು ಕೂಡಲೇ ಮನೆಗೆ ಹೋಗಿದ್ದರು. ‘ಯಾರೋ ನನ್ನ ಗಂಡನನ್ನು ಸಾಯಿಸಿದ್ದಾರೆ’ ಎಂದು ಉಮಾ ಮನೆ ಮುಂದೆ ಉರುಳಾಡಿ ಅತ್ತಿದ್ದರು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಸ್ಥಳೀಯರ ಹೇಳಿಕೆ ದಾಖಲಿಸಿಕೊಂಡಿದ್ದರು.

ಉಮಾ ದೂರು ಹೀಗಿತ್ತು: ‘ತವರು ಮನೆಯಲ್ಲಿ ಪೂಜೆ ಇತ್ತು. ಹೀಗಾಗಿ, ಎಲ್ಲರೂ ಶಿವಮೊಗ್ಗಕ್ಕೆ ಹೋಗಲು ನಿರ್ಧರಿಸಿದ್ದೆವು. ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಿದ ಪತಿ, ‘ನಾನು ನಿವೇಶನ ನೋಡಲು ಚಿತ್ತೂರಿಗೆ ಹೋಗಬೇಕು. ನೀನು ಮಗನನ್ನು ಕರೆದುಕೊಂಡು ಊರಿಗೆ ಹೋಗಿರು. ನಾನು ಆದಷ್ಟು ಬೇಗ ಬಂದು ಬಿಡುತ್ತೇನೆ’ ಎಂದು ಹೇಳಿ ನಮ್ಮಿಬ್ಬರನ್ನೇ ಕಳುಹಿಸಿದ್ದರು’ ಎಂದು ಉಮಾ ದೂರು ಕೊಟ್ಟಿದ್ದರು.

‘ಮರುದಿನ ಮ‌ಧ್ಯಾಹ್ನ ಕರೆ ಮಾಡಿದರೆ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಚಿತ್ತೂರಿಗೆ ಹೋಗಿರಬಹುದೆಂದು ಸುಮ್ಮನಾದೆ. ಜ.20ರ ಬೆಳಿಗ್ಗೆಯಿಂದ ನಿರಂತರವಾಗಿ ಕರೆ ಮಾಡಿದರೂ ಪ್ರತಿಕ್ರಿಯೆ ಇರಲಿಲ್ಲ. ಹೀಗಾಗಿ, ಪೂಜೆ ಮುಗಿಸಿಕೊಂಡು ನಾನು ಮಗ ಮಧ್ಯಾಹ್ನವೇ ಅಲ್ಲಿಂದ ಹೊರಟುಬಿಟ್ಟೆವು. ರಾತ್ರಿ ಬಂದಾಗ ಮನೆಗೆ ಹೊರಗಿನಿಂದ ಚಿಲಕ ಹಾಕಲಾಗಿತ್ತು. ಒಳಗೆ ಹೋಗಿ ನೋಡಿದಾಗ ಪತಿ ರಕ್ತದ ಮಡುವಿನಲ್ಲಿ ಸತ್ತು ಬಿದ್ದಿದ್ದರು.’

‘ಯಾರೋ ಮೂವರು ಆಗಾಗ್ಗೆ ಮನೆ ಹತ್ತಿರ ಬರುತ್ತಿದ್ದರು. ರಸ್ತೆಯಲ್ಲೇ ನಿಂತು ಪತಿಯೊಂದಿಗೆ ಮಾತನಾಡಿ ಹೋಗುತ್ತಿದ್ದರು. ಹಣಕಾಸಿನ ವಿಚಾರಕ್ಕೆ ಅವರೇ ಹತ್ಯೆಗೈದಿರಬಹುದು ಎಂಬ ಅನುಮಾನವಿದೆ’ ಎಂದು ಉಮಾ ದೂರಿನಲ್ಲಿ ವಿವರಿಸಿದ್ದರು. ಅದರ ಅನ್ವಯ ವಿಜಯನಗರ ಠಾಣೆಯಲ್ಲಿ ಕೊಲೆ (ಐಪಿಸಿ 302) ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳೂ ರಚನೆಯಾಗಿದ್ದವು.

***

ಮನೆ ಮಾಲೀಕರಿಂದ ಸುಳಿವು
‘ಎಷ್ಟೇ ವಿಚಾರಣೆ ನಡೆಸಿದರೂ ತಾಯಿ–ಮಗ ಸಣ್ಣ ಸುಳಿವನ್ನೂ ಬಿಟ್ಟು ಕೊಡಲಿಲ್ಲ. ಇತ್ತೀಚೆಗೆ ಅವರ ಮನೆ ಮಾಲೀಕರನ್ನು ವಿಚಾರಿಸಿದಾಗ, ‘ದಂಪತಿ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಪತ್ನಿಯೇ ಕೊಂದಿರಬಹುದು ಎಂಬ ಅನುಮಾನವಿದೆ. ಇತ್ತೀಚೆಗೆ ಅವರ ವರ್ತನೆಯಲ್ಲೂ ಬದಲಾವಣೆ ಆಗಿದೆ’ ಎಂದು ಹೇಳಿದ್ದರು. ಆ ಸುಳಿವು ಆಧರಿಸಿ ಉಮಾ ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಕೊಲೆ ರಹಸ್ಯ ಬಾಯ್ಬಿಟ್ಟರು’ ಎಂದು ತನಿಖಾಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಯುಗಾದಿ ಸಡಗರದಲ್ಲಿದ್ದ ತಾತ–ಮಗ

ವಾರಾಂತ್ಯ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಕಾಲೇಜಿಗೆ ರಜೆ ಇದ್ದುದರಿಂದ ಉಮಾ ಅವರ ಮಗ ಮಾರ್ಚ್ 15ರಂದೇ ಶಿವಮೊಗ್ಗಕ್ಕೆ ತೆರಳಿ ತಾತನ ಮನೆಯಲ್ಲಿದ್ದ. ಇತ್ತ ಮಾರ್ಚ್ 17ರಂದು ಉಮಾ ಅವರನ್ನು ಬಂಧಿಸಿ ವಿಚಾರಣೆ ಪೂರ್ಣಗೊಳಿಸಿದ ಪೊಲೀಸರು, ಮರುದಿನ ಬೆಳಿಗ್ಗೆಯೇ ಅವರನ್ನೂ ಶಿವಮೊಗ್ಗಕ್ಕೆ ಕರೆದೊಯ್ದರು. ಅಲ್ಲೇ ತಾತ–ಮೊಮ್ಮಗನನ್ನೂ ವಶಕ್ಕೆ ಪಡೆದುಕೊಂಡರು. ಅಲ್ಲದೆ, ಪೊದೆಯಲ್ಲಿ ಎಸೆದಿದ್ದ ಮಚ್ಚನ್ನೂ ಜಪ್ತಿ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.