ADVERTISEMENT

ಗಮನ ಸೆಳೆದ ಶ್ವಾನ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2016, 19:51 IST
Last Updated 3 ಡಿಸೆಂಬರ್ 2016, 19:51 IST
ಯುವಕನ ಮೇಲೆ ಗ್ರೇಟ್‌ ಡೇನ್ ತಳಿಯ ನಾಯಿ ಜಿಗಿದ ಪರಿ ಇದು.
ಯುವಕನ ಮೇಲೆ ಗ್ರೇಟ್‌ ಡೇನ್ ತಳಿಯ ನಾಯಿ ಜಿಗಿದ ಪರಿ ಇದು.   

ಬೆಂಗಳೂರು: ವಿವಿಧ ರಾಜ್ಯಗಳ 45 ತಳಿಗಳ 450ಕ್ಕೂ ಅಧಿಕ ಶ್ವಾನಗಳನ್ನು ಒಂದೇ ಕಡೆ ನೋಡುವ ಅವಕಾಶ  ನಗರದ ಶ್ವಾನಪ್ರಿಯರ ಪಾಲಿಗೆ ಶನಿವಾರ ಒದಗಿಬಂದಿತ್ತು.

ಬೆಂಗಳೂರು ಕೆನೈನ್ ಕ್ಲಬ್ ಶನಿವಾರ ನಗರದ ಕಮರ್ಷಿಯಲ್‌ ಸ್ಟ್ರೀಟ್‌ ಬಳಿಯ ಆರ್‌ಬಿಎಎನ್‌ಎಂ ಚಾರಿಟಬಲ್ ಟ್ರಸ್ಟ್‌ನ ಮೈದಾನದಲ್ಲಿ ಏರ್ಪಡಿಸಿದ್ದ ಶ್ವಾನ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಬಾಕ್ಸರ್ ಬ್ರೀಡ್, ಬುಲ್‌ಡಾಗ್, ಮುಧೋಳ, ಡಾಬರ್‌ ಮನ್, ರಾಜಪಾಳ್ಯ, ಅಕಿತಾ, ಮಿನಿಯೇಚರ್  ಸೇರಿದಂತೆ ದೇಶ ವಿದೇಶದ ಹಲವಾರು ತಳಿಗಳ ಶ್ವಾನಗಳು ಪಾಲ್ಗೊಂಡವು. ಚಿಕ್ಕಗಾತ್ರದ ಶ್ವಾನಗಳಿಂದ   ಹಿಡಿದು ದೈತ್ಯಾಕಾರದ ಶ್ವಾನಗಳ ಚಟುವಟಿಕೆ ಪ್ರೇಕ್ಷಕರ ಮನಸೂರೆಗೊಂಡಿತು.

ಪ್ರದರ್ಶನಕ್ಕೂ ಮುನ್ನ ನಾಯಿಗಳ ಆರೋಗ್ಯ ತಪಾಸಣೆ ನಡೆಸಲಾಯಿತು. ಅವುಗಳ ಸ್ವಭಾವ, ಚುರುಕುತನ, ಭಾಷೆ ಅನುಕರಣೆ ಆಧಾರದ ಮೇಲೆ ಸ್ಪರ್ಧೆ ನಡೆಸಲಾಯಿತು.

ಮೈತುಂಬಾ ದಟ್ಟವಾದ ಕೂದಲು ಹೊಂದಿರುವ ಹಾಗೂ ದುಬಾರಿ ಬೆಲೆಯ ಆಫ್ಘನ್ ಹೌಂಡ್, ಪಗ್, ಶಿಹಾತುಜ್, ಚೌಚೌ, ಅಮೆರಿಕನ್ ಕೂಕರ್ ಸ್ಪ್ಯಾನಿ ಯಲ್, ಪಮೇರಿಯನ್ ತಳಿಯ ಶ್ವಾನಗಳು  ಚುರುಕಿನ ಪ್ರದರ್ಶನ ನೀಡಿ ನೋಡುಗರಿಂದ ಚಪ್ಪಾಳೆ ಗಿಟ್ಟಿಸಿಕೊಂಡವು.  ಶ್ವಾನಗಳ ಕುತ್ತಿಗೆಗೆ ಹಾಕುವ ಬೆಲ್ಟ್, ಆಹಾರ, ಔಷಧಿ, ಅಲಂಕಾರಿಕ ವಸ್ತುಗಳ ಮಾರಾಟ ಮಳಿಗೆಗಳು ಇದ್ದವು. ಒಂದೇ ಕಡೆ ಲಭ್ಯವಿದ್ದ ಈ ಸಾಮಗ್ರಿಗಳನ್ನು ಖರೀದಿಸಲು ಶ್ವಾನ ಮಾಲೀಕರು ಮುಗಿಬಿದ್ದರು.

ಅಪರಿಚಿತ ನಾಯಿಗಳನ್ನು  ಕಂಡು ಅವು ಪರಸ್ಪರ ಬೊಗಳುತ್ತಿದ್ದುದರಿಂದ ಮೈದಾನದ ತುಂಬಾ ಶ್ವಾನಗಳ ಕೂಗು ಆವರಿಸಿಕೊಂಡಿತ್ತು. ಹಲವು ಶ್ವಾನಗಳು ಸ್ನೇಹಮಯವಾಗಿ ತಾವು ಕಲಿತ ಕೌಶಲವನ್ನು ಪ್ರದರ್ಶಿಸಲು ಹಾತೊರೆಯುತ್ತಿ ದ್ದವು.

ಇಂಗ್ಲೆಂಡ್‌ನ ಫ್ರಾಂಕ್‌ ಕಾನೆ,  ಆಸ್ಟ್ರೇಲಿಯಾದ ಮಿಷಲ್ ಕ್ಯಾಮಕ್, ನವಾಬ್ ನಜೀರ್ ಯಾರ್ ಜಂಗ್, ನವಾಬ್ ಮುನೀರ್ ಬಿನ್ ಜಂಗ್, ಶ್ಯಾಮ್ ಮೆಹ್ತಾ ಸ್ಪರ್ಧೆಯ ತೀರ್ಪು ಗಾರರಾಗಿ ಭಾಗವಹಿಸಿದ್ದರು. ಸ್ಪರ್ಧೆಯು ಭಾನುವಾರವೂ ನಡೆಯಲಿದ್ದು, ವಿಜೇತ ಶ್ವಾನಗಳಿಗೆ ಪ್ರಶಸ್ತಿ ನೀಡಲಾಗುತ್ತದೆ.

ನಾಯಿ ಜೊತೆ ಸ್ವಂತಿ
ಪ್ರದರ್ಶನ ನೋಡಲು ಬಂದಿದ್ದ ಸಾರ್ವಜನಿಕರು ಮುದ್ದಾದ ನಾಯಿಗಳ ಜತೆ ಸ್ವಂತಿ (ಸೆಲ್ಫಿ) ತೆಗೆದುಕೊಂಡರು. ದಷ್ಟಪುಷ್ಟ ಶ್ವಾನಗಳ ಮೈದಡವಿ ಸಂತಸಪಟ್ಟರು. ಅವುಗಳ ವಿಶೇಷತೆ ಬಗ್ಗೆ ಮಾಲೀಕರಲ್ಲಿ ವಿಚಾರಿಸಿ ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT