ADVERTISEMENT

ಗರ್ಭಪಾತ ಮಾಡಿಸಿದ ಎಇಇ: ದೂರು

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 19:45 IST
Last Updated 18 ಜನವರಿ 2017, 19:45 IST

ಬೆಂಗಳೂರು: ಯುವತಿಯೊಬ್ಬಳನ್ನು ಮದುವೆಯಾಗಿ, ನಂತರ ಅವರಿಗೆ ಎರಡು ಸಲ ಗರ್ಭಪಾತ ಮಾಡಿಸಿದ ಆರೋಪದ ಮೇಲೆ ಬಿಬಿಎಂಪಿ ಮಹದೇವಪುರ ವಲಯದ  ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ದೇವರಾಜ್ ವಿರುದ್ಧ ಸಂಜಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಲ್ಲದೆ, ಪತಿಯಿಂದ ದೂರ ಇರುವಂತೆ ದೇವರಾಜ್ ಪತ್ನಿ ಪ್ರೀತಿ ಅವರು ಸಹ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಯುವತಿ ದೂರಿನಲ್ಲಿ ಹೇಳಿದ್ದಾರೆ. ಹೀಗಾಗಿ, ದೇವರಾಜ್ ವಿರುದ್ಧ ಗರ್ಭಪಾತ (ಐಪಿಸಿ 312) ಹಾಗೂ ನಂಬಿಕೆ ದ್ರೋಹ (ಐಪಿಸಿ 406) ಆರೋಪಗಳಡಿ ಪ್ರಕರಣ ದಾಖಲಿಸಿ, ಅವರ ಪತ್ನಿ ವಿರುದ್ಧ ಹಲ್ಲೆ (ಐಪಿಸಿ 323) ಆರೋಪದಡಿ ಎಫ್‌ಐಆರ್ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ದೇವಸ್ಥಾನದಲ್ಲಿ ಮದುವೆ: ‘ಹಾಸನ ಮೂಲದ ನಾನು, ನಾಲ್ಕು ವರ್ಷಗಳಿಂದ ನಗರದ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಎರಡು ವರ್ಷಗಳ ಹಿಂದೆ ಗೆಳೆಯನೊಬ್ಬನ ಮುಖಾಂತರ ದೇವರಾಜ್‌ ಅವರ ಪರಿಚಯವಾಯಿತು. ಕ್ರಮೇಣ ಆ ಸ್ನೇಹ ಪ್ರೀತಿಗೆ ತಿರುಗಿತು. ಎಚ್‌ಎಸ್‌ಆರ್‌ ಲೇಔಟ್‌ನ ದೇವಸ್ಥಾನವೊಂದರಲ್ಲಿ ಅವರು ನನ್ನನ್ನು ಮದುವೆ ಆಗಿದ್ದರು’ ಎಂದು ಯುವತಿ ದೂರಿದ್ದಾರೆ.

ADVERTISEMENT

‘ವಿವಾಹದ ನಂತರ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಮನೆ ಬಾಡಿಗೆ ಪಡೆದು, ಒಟ್ಟಿಗೆ ವಾಸವಾಗಿದ್ದೆವು. ಇಬ್ಬರೂ ಗೋವಾ, ತಮಿಳುನಾಡು, ಕೇರಳ ಮಾತ್ರವಲ್ಲದೆ, ಕರ್ನಾಟಕದ ವಿವಿಧ ಪ್ರವಾಸಿ ತಾಣಗಳಿಗೆ ಹೋಗಿ ಬಂದಿದ್ದೆವು. ಅವರಿಂದ ನಾನು ಎರಡು ಬಾರಿ ಗರ್ಭವತಿಯಾದೆ. ಏನೇನೋ ಕಾರಣ ಹೇಳಿ ಗರ್ಭಪಾತ ಮಾಡಿಸಿದ ಅವರು, ಈಗ ನನ್ನಿಂದ ದೂರವಾಗಿದ್ದಾರೆ.’

‘ಇತ್ತೀಚೆಗೆ ಅವರನ್ನು ಹುಡುಕಿಕೊಂಡು ಮನೆಗೆ ಹೋಗಿದ್ದಾಗ ಮೊದಲ ಪತ್ನಿ ಪ್ರೀತಿ ಅವರು ಹಲ್ಲೆ ಮಾಡಿದರು. ಅಪರಿಚಿತ ವ್ಯಕ್ತಿಯಂತೆ ವರ್ತಿಸಿದ  ದೇವರಾಜ್, ಇನ್ನೊಮ್ಮೆ ಮನೆ ಹತ್ತಿರ ಬರದಂತೆ ತಾಕೀತು ಮಾಡಿದರು. ನಾವಿಬ್ಬರೂ ಮದುವೆ ಆಗಿರುವುದಕ್ಕೆ ಹಾಗೂ ಅವರು ಗರ್ಭಪಾತ ಮಾಡಿಸಿರುವುದಕ್ಕೆ ನನ್ನ ಬಳಿ ಸೂಕ್ತ ದಾಖಲೆಗಳಿವೆ. ಹೀಗಾಗಿ, ದೇವರಾಜ್ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಯುವತಿ ದೂರಿನಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.