ADVERTISEMENT

ಚರ್ಚ್‌ ಸ್ಟ್ರೀಟ್‌ ರಸ್ತೆಗೆ ನವೀನ ವಿನ್ಯಾಸ?

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2015, 19:40 IST
Last Updated 29 ನವೆಂಬರ್ 2015, 19:40 IST

ಬೆಂಗಳೂರು: ಸದಾ ರಸ್ತೆ ಮೇಲೆ ಹರಿಯುವ ಚರಂಡಿ ನೀರು, ಬಾಯ್ತೆರೆದಿರುವ ಮ್ಯಾನ್‌ಹೋಲ್‌ಗಳು, ಹಾಳಾಗಿರುವ ಪಾದಚಾರಿ ಮಾರ್ಗ...ಇದು ನಗರದ ಪ್ರತಿಷ್ಠಿತ ಚರ್ಚ್‌ಸ್ಟ್ರೀಟ್‌ ರಸ್ತೆಯ ಸದ್ಯದ ಪರಿಸ್ಥಿತಿ.

ದುಸ್ಥಿತಿಯಿಂದ ಕೂಡಿರುವ ಚರ್ಚ್‌ಸ್ಟ್ರೀಟ್‌ ರಸ್ತೆಗೆ ಶೀಘ್ರವೇ ಹೊಸ ರೂಪ ಸಿಗಲಿದ್ದು, ಪ್ಯಾರಿಸ್‌ನ ರಸ್ತೆಗಳ ಮಾದರಿಯಲ್ಲಿ ಅಭಿವೃದ್ಧಿಯಾಗಲಿದೆ. ಅಲ್ಲದೇ, ಚರ್ಚ್‌ಸ್ಟ್ರೀಟ್‌ನಲ್ಲಿ ಸಂಗೀತವೂ ಕೇಳಿಬರಲಿದೆ.

ಇದಕ್ಕಾಗಿ ನಗರದ ವಾಸ್ತು ಶಿಲ್ಪಿ ನರೇಶ್‌ ನರಸಿಂಹನ್‌ ಅವರು  ವಿನ್ಯಾಸವನ್ನು ಸಿದ್ಧಪಡಿಸಿ, ಅದನ್ನು ಪಾಲಿಕೆಗೆ ಸಲ್ಲಿಸಿದ್ದಾರೆ.
ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ನರೇಶ್ ನರಸಿಂಹನ್, ‘ನಗರದ ಪ್ರತಿಷ್ಠಿತ ರಸ್ತೆಗಳಲ್ಲಿ ಚರ್ಚ್‌ಸ್ಟ್ರೀಟ್‌ ರಸ್ತೆಯೂ ಒಂದು. ಈ ರಸ್ತೆಯಲ್ಲಿ 40ಕ್ಕೂ ಹೆಚ್ಚು ರೆಸ್ಟೋರೆಂಟ್, ಹೋಟೆಲ್‌, ಪುಸ್ತಕ ಮಳಿಗೆಗಳಿವೆ. ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಯರು ಈ ರಸ್ತೆಗೆ ಬರುತ್ತಾರೆ. ಹೀಗಾಗಿ ರಸ್ತೆಯನ್ನು ಅಭಿವೃದ್ಧಿಪಡಿಸಬೇಕಾದ ಅಗತ್ಯವಿದೆ’ ಎಂದರು.

ಚರ್ಚ್‌ ಸ್ಟ್ರೀಟ್ ರಸ್ತೆ 750 ಮೀಟರ್ ಉದ್ದವಿದೆ.  ಮುಖ್ಯವಾಗಿ ಪಾದಚಾರಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ರಸ್ತೆಯ ವಿನ್ಯಾಸವನ್ನು ರೂಪಿಸಲಾಗಿದೆ. ಹೊಸ ವಿನ್ಯಾಸದ ರಸ್ತೆಯು ಟೆಂಡರ್ ಶ್ಯೂರ್‌ ಮಾದರಿಯಲ್ಲಿ ಇರಲಿದೆ ಎಂದು ಮಾಹಿತಿ ನೀಡಿದರು.
ಮಧ್ಯದಲ್ಲಿ 5 ಮೀಟರ್ ಅಗಲದ ರಸ್ತೆಯನ್ನು ನುಣುಪು ಕಲ್ಲು ಮತ್ತು ಸಿಮೆಂಟ್‌ನಿಂದ ನಿರ್ಮಾಣ ಮಾಡಲಾಗುವುದು. ರಸ್ತೆಯ ಎರಡೂ ಬದಿ 2 ಮೀಟರ್ ಅಗಲ ಪಾದಚಾರಿ ಮಾರ್ಗ ಇರಲಿದೆ. ಪಾದಚಾರಿ ಮಾರ್ಗಕ್ಕೆ ಗ್ರಾನೈಟ್‌ ಕಲ್ಲು ಅಳವಡಿಸುವಂತೆ ವಿನ್ಯಾಸ ರೂಪಿಸಲಾಗಿದೆ ಎಂದರು.

ಅಲ್ಲದೆ, ವಾಹನಗಳ ನಿಲುಗಡೆಗೂ ಅವಕಾಶ ಕಲ್ಪಿಸಲಾಗಿದೆ. 32 ಕಾರುಗಳು ಮತ್ತು 200 ಬೈಕ್‌ಗಳನ್ನು ನಿಲುಗಡೆ ಮಾಡಬಹುದಾಗಿದೆ ಎಂದು ತಿಳಿಸಿದರು. ಕುಡಿಯುವ ನೀರಿನ ಕೊಳವೆ, ಒಳಚರಂಡಿ ಮಾರ್ಗ, ಬೆಸ್ಕಾಂ ಸಂಪರ್ಕ ಜಾಲ, ಆಪ್ಟಿಕಲ್‌ ಫೈಬರ್‌ ಕೇಬಲ್‌ (ಒಎಫ್‌ಸಿ), ಬೀದಿದೀಪ, ಸಿ.ಸಿ ಟಿ.ವಿ ಕೇಬಲ್‌ಗೆ ರಸ್ತೆಯಲ್ಲಿ ಯುಟಿಲಿಟಿ ಡಕ್ಟ್‌ ವ್ಯವಸ್ಥೆ ರೂಪಿಸಲಾಗುತ್ತದೆ. ಇದರಿಂದ ರಸ್ತೆಯನ್ನು ಪದೆ ಪದೆ ಅಗೆಯುವುದನ್ನು ತಪ್ಪಿಸಬಹುದಾಗಿದೆ ಎಂದರು.

ಸ್ಪೀಕರ್‌ನಲ್ಲಿ ಸಂಗೀತ: ಇದೇ ರಸ್ತೆಯಲ್ಲಿ ಬಿಪಿಎಲ್‌ ಕಂಪೆನಿ ಕಚೇರಿ ಇದೆ. ಹೊಸ ವಿನ್ಯಾಸದ ರಸ್ತೆ ನಿರ್ಮಾಣಗೊಂಡ ನಂತರ ಅಲ್ಲಲ್ಲಿ ಸ್ಪೀಕರ್ ಅಳವಡಿಸಿ, ಸಂಗೀತ ಪ್ರಸಾರ ಮಾಡಲು ಕಂಪೆನಿ ಮುಂದೆ ಬಂದಿದೆ ಎಂದು ತಿಳಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್ ಬಿ.ಎನ್.ಮಂಜುನಾಥ್‌ರೆಡ್ಡಿ, ‘ಚರ್ಚ್‌ ಸ್ಟ್ರೀಟ್‌ ರಸ್ತೆ ಅಭಿವೃದ್ಧಿ ಸಂಬಂಧ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗಿದೆ. ನರೇಶ್ ಸಿದ್ಧಪಡಿಸಿರುವ ವಿನ್ಯಾಸಕ್ಕೆ ₹ 6–7 ಕೋಟಿ ಬೇಕಾಗುತ್ತದೆ. ಅಷ್ಟು ಹಣ ವ್ಯಯಿಸಲು ಪಾಲಿಕೆಗೆ ಸಾಧ್ಯವಾಗದು’ ಎಂದರು.

ಹೀಗಾಗಿ ಚರ್ಚ್‌ ಸ್ಟ್ರೀಟ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದವರಿಂದ ಆರ್ಥಿಕ ನೆರವು ಕೇಳಲಾಗಿದೆ. ಅವರು ನೆರವು ನೀಡಲು ಒಪ್ಪಿದ್ದಾರೆ. ಹಣ ಬಂದ ನಂತರ ಡಿಸೆಂಬರ್‌ನಲ್ಲಿ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು. ಚರ್ಚ್‌ ಸ್ಟ್ರೀಟ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯೆ ಅನುರಾಧಾ ಸರೀನ್‌, ‘ಈಗಾಗಲೇ ಸಂಘದ ವತಿಯಿಂದ ವಿವಿಧ ಕಂಪೆನಿಗಳಿಂದ ಹಣ ಸಂಗ್ರಹಿಸಲಾಗುತ್ತಿದೆ. ಅದನ್ನು ಯೋಜನೆಗೆ ಬಳಸುವಂತೆ ಪಾಲಿಕೆಗೆ ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.