ADVERTISEMENT

ಚಾಲಕನಿಗೆ ಎದೆನೋವು: ತಪ್ಪಿದ ಅಪಾಯ

ಚಾಲನೆ ವೇಳೆಯೇ ನಡೆದ ಘಟನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2014, 20:06 IST
Last Updated 22 ಸೆಪ್ಟೆಂಬರ್ 2014, 20:06 IST

ಬೆಂಗಳೂರು: ಚಂದಾಪುರದಿಂದ ಮೆಜೆಸ್ಟಿಕ್‌ಗೆ ಬರುತ್ತಿದ್ದ ಬಿಎಂಟಿಸಿಯ ವೋಲ್ವೊ ಬಸ್‌ನಲ್ಲಿ ಚಾಲಕನಿಗೆ ಸೋಮವಾರ ಮಧ್ಯಾಹ್ನ ಎದೆನೋವು ಕಾಣಿಸಿಕೊಂಡಿತು. ಪ್ರಯಾಣಿಕರು ಕೂಡಲೇ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಸಂಭಾವ್ಯ ಅಪಘಾತವನ್ನು ತಪ್ಪಿಸಿದರು.

ಮಧ್ಯಾಹ್ನ 1.15ಕ್ಕೆ ವಿಲ್ಸನ್‌ ಗಾರ್ಡನ್‌ 10ನೇ ತಿರುವಿನಲ್ಲಿ ಸಂಚಾರ ದಟ್ಟಣೆಯಲ್ಲಿ ಬಸ್‌ ತಿರುಗಿಸುತ್ತಿದ್ದ ವೇಳೆ ಚಾಲಕ ರೇಣುಕಾ ಪ್ರಸಾದ್‌ ಅವರಿಗೆ ಎದೆನೋವು ಕಾಣಿಸಿಕೊಂಡಿತು. ಈ ನೋವಿನಲ್ಲೇ ಅವರು ಕಾರ್ಪೊರೇಷನ್‌ ವೃತ್ತದವರೆಗೆ ಬಸ್‌ ಚಲಾಯಿಸಿದರು. ವೃತ್ತ ದಾಟುತ್ತಿದ್ದಂತೆ ನೋವು ಅಸಹನೀಯವಾಯಿತು. ಅವರು ನಡುಗಲು ಆರಂಭಿಸಿದರು. ಮೊದಲ ಸೀಟಿನಲ್ಲಿ ಕುಳಿತಿದ್ದ ಜಿಲ್ಲಾಧಿಕಾರಿ ಕಚೇರಿಯ ನೌಕರ, ಪ್ರಯಾಣಿಕ ಎಚ್‌.ಎನ್‌.ದೇವರಾಜು ಎಂಬವರು ತಕ್ಷಣ ಈ ಬದಲಾವಣೆಯನ್ನು ಗಮನಿಸಿ ಚಾಲಕನ ನೆರವಿಗೆ ಧಾವಿಸಿದರು. ಕಂಡಕ್ಟರ್‌ ಸಹಾಯದಿಂದ ಬಸ್ಸನ್ನು ಬನ್ನಪ್ಪ ಪಾರ್ಕ್‌ ಹತ್ತಿರ ನಿಲುಗಡೆ ಮಾಡಲಾಯಿತು.

ದೇವರಾಜ್‌ ಅವರು ಬಸ್ಸಿನಲ್ಲೇ ಚಾಲಕನಿಗೆ ಪ್ರಥಮ ಚಿಕಿತ್ಸೆ ನೀಡಿದರು. ಬಳಿಕ ಚಾಲಕನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ‘ಚಾಲಕ ಅಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಅವರಿಗೆ ವಿಶ್ರಾಂತಿಯ ಅಗತ್ಯ ಇದೆ’ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದರು. ಈ ಬಸ್‌ನಲ್ಲಿದ್ದ 15 ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಯಿತು.

‘ಬಿಎಂಟಿಸಿ ಬಸ್‌ನಲ್ಲಿ ಕೆಲಸದ ಒತ್ತಡ ಜಾಸ್ತಿ ಇದೆ. ಕೆಲವು ಬಾರಿ  ಚಾಲಕರು ಹಾಗೂ ನಿರ್ವಾಹಕರು 10 ಗಂಟೆ ಕೆಲಸ ಮಾಡುವ ಸ್ಥಿತಿ ಇದೆ. ಹೀಗಾಗಿ ಬೇಗ ಅನಾರೋಗ್ಯಪೀಡಿತರಾಗುತ್ತಾರೆ’ ಎಂದು ಬಿಎಂಟಿಸಿ ಸಿಬ್ಬಂದಿಯೊಬ್ಬರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.