ADVERTISEMENT

ಜಾಮೀನಿನ ಮೇಲೆ ಹೊರಬಂದು ಸುಲಿಗೆ

ಮಾರತ್ತಹಳ್ಳಿ ಪೊಲೀಸರಿಂದ ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 19:30 IST
Last Updated 25 ಏಪ್ರಿಲ್ 2018, 19:30 IST
ಜಾಮೀನಿನ ಮೇಲೆ ಹೊರಬಂದು ಸುಲಿಗೆ
ಜಾಮೀನಿನ ಮೇಲೆ ಹೊರಬಂದು ಸುಲಿಗೆ   

ಬೆಂಗಳೂರು: ಕೊಲೆ ಪ್ರಕರಣದಡಿ ಜೈಲು ಸೇರಿ, ಆ ನಂತರ ಜಾಮೀನಿನ ಮೇಲೆ ಹೊರಬಂದು ಸುಲಿಗೆ ಮಾಡುತ್ತಿದ್ದ ನಾಲ್ವರು ಆರೋಪಿಗಳು ಮಾರತ್ತಹಳ್ಳಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಮುರುಗೇಶ್‌ ಪಾಳ್ಯದ ಷಣ್ಮುಗಂ ಸುಂದರ್‌ (21), ಬೆಳ್ಳಂದೂರಿನ ವಿಶಾಲ್‌ (19), ಮಾರತ್ತಹಳ್ಳಿಯ ಭಾಸ್ಕರ್ (19) ಹಾಗೂ ಯುವರಾಜ್‌ (23) ಬಂಧಿತರು. ಅವರಿಂದ ಆರು ಮೊಬೈಲ್‌ಗಳು, ₹5,000 ನಗದು ಹಾಗೂ ಡ್ರ್ಯಾಗರ್‌ ಜಪ್ತಿ ಮಾಡಲಾಗಿದೆ.

ಜೀವನ್‌ಬಿಮಾ ನಗರ ಠಾಣೆ ವ್ಯಾಪ್ತಿಯಲ್ಲಿ 2016ರಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಇದೇ ಆರೋಪಿಗಳನ್ನು ಬಂಧಿಸಲಾಗಿತ್ತು. ಒಂದು ವರ್ಷ ಜೈಲಿನಲ್ಲಿದ್ದ ಇವರು, ಕೆಲ ತಿಂಗಳ ಹಿಂದಷ್ಟೇ ಜಾಮೀನು ಪಡೆದು ಹೊರಗೆ ಬಂದಿದ್ದರು ಎಂದು ಮಾರತ್ತಹಳ್ಳಿ ಪೊಲೀಸರು ತಿಳಿಸಿದರು.

ADVERTISEMENT

ಆರೋಪಿ ವಿಶಾಲ್‌, ಆಟೊ ಚಾಲಕ. ಆತನ ಆಟೊದಲ್ಲೇ ಸುತ್ತಾಡಿ ಆರೋಪಿಗಳು ಈ ಕೃತ್ಯ ಎಸಗುತ್ತಿದ್ದರು. ಏ. 20ರಂದು ವಿಶಾಲ್ ಹಾಗೂ ಷಣ್ಮುಗಂ, ಆಟೊದಲ್ಲೇ ನ್ಯೂ ಹಾರಿಜನ್ ಕಾಲೇಜು ಬಳಿ ಹೋಗಿದ್ದರು. ಅಲ್ಲಿ ಹೋಗುತ್ತಿದ್ದ ಓಂಕಾರ್ ರೆಡ್ಡಿ ಎಂಬುವರನ್ನು ಅಡ್ಡಗಟ್ಟಿ ಡ್ರ್ಯಾಗರ್‌ ತೋರಿಸಿ, ಬೆದರಿಸಿ, ಮೊಬೈಲ್‌, ನಗದು ಸುಲಿಗೆ ಮಾಡಿದ್ದರು. ಏ. 24ರಂದು ನ್ಯೂ ಹಾರಿಜನ್ ಕಾಲೇಜು ಬಳಿ ಪುನಃ ಬಂದಿದ್ದ ಆರೋಪಿಗಳು, ಸುಲಿಗೆ ಮಾಡಲು ಕಾಯುತ್ತಿದ್ದರು. ಗಸ್ತಿನಲ್ಲಿದ್ದ ಸಿಬ್ಬಂದಿ, ಅವರನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ನಡೆಸಿದಾಗ ಸುಲಿಗೆ ಮಾಡಿರುವುದನ್ನು ಆರೋಪಿಗಳು ಒಪ್ಪಿಕೊಂಡರು ಎಂದರು.

‘ನಾಲ್ಕೂವರೆ ತಿಂಗಳ ಹಿಂದೆ ಮುನೆಕೊಳಲು ರೈಲ್ವೆ ಗೇಟ್‌ ಬಳಿ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿದ್ದ ಆರೋಪಿಗಳು, ಮೊಬೈಲ್‌ ಹಾಗೂ ₹12 ಸಾವಿರ ಸುಲಿಗೆ ಮಾಡಿದ್ದರು. ನಂತರ, ಕಾಡುಬೀಸನಹಳ್ಳಿ ಬಳಿಯ ನಾಗಾರ್ಜುನ ಅಪಾರ್ಟ್‌ಮೆಂಟ್‌ ಸಮುಚ್ಛಯ ಬಳಿ ಇನ್ನೊಬ್ಬರನ್ನು ತಡೆದು ₹10 ಸಾವಿರ ಕಸಿದುಕೊಂಡಿದ್ದರು’ ಎಂದು ಪೊಲೀಸರು ತಿಳಿಸಿದರು.

ದಾರಿಹೋಕರಿಗೆ ಮೊಬೈಲ್‌ ಮಾರಾಟ!

‘ಸುಲಿಗೆ ಮಾಡುತ್ತಿದ್ದ ಮೊಬೈಲ್‌ಗಳನ್ನು ಆರೋಪಿಗಳು, ದಾರಿಹೋಕರಿಗೆ ಮಾರಾಟ ಮಾಡುತ್ತಿದ್ದರು. ಮುನೆಕೊಳಲು ರೈಲ್ವೆ ಗೇಟ್‌ ಬಳಿ ವ್ಯಕ್ತಿಯೊಬ್ಬರಿಂದ ಕಿತ್ತುಕೊಂಡಿದ್ದ ಮೊಬೈಲ್‌ನ್ನು ₹4 ಸಾವಿರಕ್ಕೆ ಮಾರಿದ್ದರು. ಸುಲಿಗೆಯಿಂದ ಬಂದ ಹಣವನ್ನು ಹಂಚಿಕೊಳ್ಳುತ್ತಿದ್ದ ಆರೋಪಿಗಳು, ಮೋಜು– ಮಸ್ತಿಗೆ ಖರ್ಚು ಮಾಡುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.