ADVERTISEMENT

ಜುಲೈ ಮೊದಲ ವಾರ ಸಂಪುಟ ವಿಸ್ತರಣೆ?

ಕಾಂಗ್ರೆಸ್‌ ಉಸ್ತುವಾರಿಯಿಂದ ರಾಜ್ಯದಲ್ಲಿ ಸರಣಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 19:54 IST
Last Updated 22 ಜೂನ್ 2017, 19:54 IST

ಬೆಂಗಳೂರು: ಜುಲೈ ಮೊದಲ ವಾರದಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದ್ದು, ಖಾಲಿ ಇರುವ ಮೂರು ಸಚಿವ ಸ್ಥಾನಗಳಿಗೆ ನೇಮಕಾತಿ ನಡೆಯಲಿದೆ.

ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿದಿರುವ ಜಿ. ಪರಮೇಶ್ವರ್‌ ಗೃಹ ಖಾತೆಗೆ ರಾಜೀನಾಮೆ ನೀಡಿದ್ದಾರೆ. ಉಳಿದಂತೆ ಎಚ್‌. ಎಸ್‌. ಮಹದೇವ ಪ್ರಸಾದ್‌ ಮತ್ತು ಎಚ್‌.ವೈ. ಮೇಟಿ ಅವರಿಂದ ತೆರವಾದ ಸಚಿವ ಸ್ಥಾನ ಖಾಲಿ ಇದೆ. 

ಗೃಹ ಸಚಿವ ಹುದ್ದೆಯನ್ನು ಯಾರು ಅಲಂಕರಿಸಲಿದ್ದಾರೆ ಎಂಬುದು ಎಲ್ಲರ ಪ್ರಶ್ನೆಯಾಗಿದ್ದು ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಕುತೂಹಲ ಮೂಡಿಸಿದೆ.
ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ವಿದೇಶ ಪ್ರವಾಸ ಮುಗಿಸಿ ಜೂನ್‌ ಅಂತ್ಯಕ್ಕೆ ಮರಳಲಿದ್ದಾರೆ. ಈ ಬಳಿಕ ಸಂಪುಟ ವಿಸ್ತರಣೆ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ADVERTISEMENT

ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಇದೇ 27 ರಂದು ನಗರಕ್ಕೆ ಬರಲಿದ್ದು, ಅಂದು ವಿಜಯಪುರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬಳ್ಳಾರಿ ನಗರದ ಪಕ್ಷದ ಪ್ರಮುಖರ ಸಭೆ ನಡೆಸಲಿದ್ದಾರೆ. 28ರಂದು ಕೆಪಿಸಿಸಿ  ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸುವರು. ಅದೇ ದಿನ ಪಕ್ಷದ ವಿವಿಧ ವಿಭಾಗಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸುವರು.

29ರಂದು ಕೂಡಲ ಸಂಗಮದಲ್ಲಿ ಎಸ್‌.ಆರ್‌.ಪಾಟೀಲ ಅವರು ಪಕ್ಷದ ಕಾರ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದು, ಆ ಕಾರ್ಯಕ್ರಮದಲ್ಲಿ ವೇಣುಗೋಪಾಲ್‌ ಭಾಗವಹಿಸುವರು. ಮರುದಿನ ಬೆಳಗಾವಿಯಲ್ಲಿ ಬೆಳಗಾವಿ ವಿಭಾಗದ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡು ಬಳಿಕ ಕೇರಳಕ್ಕೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜು. 3ರಂದು ಮೈಸೂರು ಮತ್ತು 7ರಂದು ಮಂಗಳೂರಿನಲ್ಲಿ ಪಕ್ಷದ ವಿಭಾಗಮಟ್ಟದ ಸಮಾವೇಶ ನಡೆಯಲಿದ್ದು ಈ ಎರಡೂ ಕಾರ್ಯಕ್ರಮಗಳಲ್ಲೂ ವೇಣುಗೋಪಾಲ್‌ ಭಾಗವಹಿಸುವರು. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಸಂಪುಟ ವಿಸ್ತರಣೆ ಕುರಿತು ಅವರು ಮಹತ್ವದ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

**

ಹೊಸ ವಾಹನ; ಹೊಸ ಮನೆ
ವೇಣುಗೋಪಾಲ್‌ ಮತ್ತು ವಿಭಾಗವಾರು ಉಸ್ತುವಾರಿ ವಹಿಸಿಕೊಂಡಿರುವ ಎಐಸಿಸಿ ಕಾರ್ಯದರ್ಶಿಗಳಿಗೆ ರಾಜ್ಯ ಸುತ್ತಾಡಲು ನಾಲ್ಕು ಇನೋವಾ ಕ್ರೆಸ್ಟ ಕಾರು ಖರೀದಿಸಲಾಗಿದೆ. ಈಗಾಗಲೇ ಮೂರು ವಾಹನಗಳು ಕೆಪಿಸಿಸಿಗೆ ಬಂದಿವೆ ಎಂದು ಪಕ್ಷದ ಮೂಲಗಳು ಹೇಳಿವೆ.

ಮುಂಬರುವ ವಿಧಾನ ಸಭೆ ಚುನಾವಣೆ ಮುಗಿಯುವರೆಗೆ ವೇಣುಗೋಪಾಲ್‌ ನಗರದಲ್ಲೇ ವಾಸ್ತವ್ಯ ಮಾಡಲಿದ್ದಾರೆ. ಅವರಿಗಾಗಿ ವಸಂತನಗರದಲ್ಲಿ ಮೂರು ಕೊಠಡಿಗಳಿರುವ ಬಂಗಲೆಯನ್ನು ಗುರುತಿಸಲಾಗಿದೆ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.