ADVERTISEMENT

ಜೆರಾಕ್ಸ್‌ ನೋಟು ಕೊಟ್ಟ, ಚಿನ್ನ ಕೊಂಡೊಯ್ದ

ಹಲಸೂರು ಗೇಟ್ ಠಾಣೆಗೆ ಚಿನ್ನಾಭರಣ ವ್ಯಾಪಾರಿ ದೂರು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 19:53 IST
Last Updated 25 ಏಪ್ರಿಲ್ 2017, 19:53 IST

ಬೆಂಗಳೂರು:  ‘ಅಪರಿಚಿತ ವ್ಯಕ್ತಿಯೊಬ್ಬ ₹ 30 ಲಕ್ಷ ಮೊತ್ತದ ನಕಲಿ ನೋಟುಗಳನ್ನು ನೀಡಿ, 1 ಕೆ.ಜಿ ಚಿನ್ನಾಭರಣ ಕೊಂಡೊಯ್ದಿದ್ದಾನೆ’ ಎಂದು ಆರೋಪಿಸಿ ಆಭರಣ ವ್ಯಾಪಾರಿ ದಿನೇಶ್  ಎಂಬುವರು ಹಲಸೂರು ಗೇಟ್ ಠಾಣೆಗೆ ಸೋಮವಾರ ದೂರು ಕೊಟ್ಟಿದ್ದಾರೆ.

ನಗರ್ತಪೇಟೆ ನಿವಾಸಿಯಾದ ದಿನೇಶ್, ಮನೆ ಸಮೀಪವೇ ‘ಎಸ್‌ಪಿಇ’  ಚಿನ್ನಾಭರಣ ಮಳಿಗೆ ಇಟ್ಟುಕೊಂಡಿದ್ದಾರೆ.

‘ಸಂಬಂಧಿಯೊಬ್ಬರ ಹೆಸರಿನಲ್ಲಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ಮನೆಯಲ್ಲಿ ಮದುವೆ ಕಾರ್ಯಕ್ರಮವಿದೆ. ಇದಕ್ಕಾಗಿ 1 ಕೆ.ಜಿ. ಚಿನ್ನಾಭರಣ ಬೇಕಿದೆ ಎಂದಿದ್ದ. ಅದಕ್ಕೆ, ಒಡವೆ ಬೇಕಿದ್ದರೆ ಮಳಿಗೆಗೆ ಬನ್ನಿ ಎಂದು ಹೇಳಿದ್ದೆ’ ಎಂದು  ದಿನೇಶ್ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಸೋಮವಾರ ಬೆಳಿಗ್ಗೆಯಿಂದ 10ಕ್ಕೂ ಹೆಚ್ಚು ಸಲ ಕರೆ ಮಾಡಿದ್ದ  ಆ ವ್ಯಕ್ತಿ, ಕಾರಣಾಂತರಗಳಿಂದ ಮಳಿಗೆಗೆ ಬರಲು ಆಗುತ್ತಿಲ್ಲ. ಕಾರಿನಲ್ಲಿ ಹಣ ಇಟ್ಟುಕೊಂಡು ಮೈಸೂರು ಬ್ಯಾಂಕ್ ವೃತ್ತದ ಬಳಿ ಕಾಯುತ್ತಿರುವೆ. ಒಡವೆ ಕೊಟ್ಟು, ಹಣ ತೆಗೆದುಕೊಂಡು ಹೋಗಿ ಎಂದ.’

‘ಆ ಮಾತು ನಂಬಿ ರಾತ್ರಿ 9.30ರ ಸುಮಾರಿಗೆ ಮಗನೊಂದಿಗೆ ಸ್ಥಳಕ್ಕೆ ಹೋದೆ. ಒಡವೆ ಪಡೆದ ಆತ, ₹ 2 ಸಾವಿರ ಮುಖಬೆಲೆಯ ನೋಟುಗಳುಳ್ಳ 16 ಕಂತೆಗಳನ್ನು ನೀಡಿದ. ಮನೆಗೆ ಹೋಗಿ ಹಣ ಪರಿಶೀಲಿಸಿದಾಗ ಅವೆಲ್ಲ ಜೆರಾಕ್ಸ್ ನೋಟುಗಳು ಎಂಬುದು ಗೊತ್ತಾಯಿತು’ ಎಂದು ದಿನೇಶ್ ದೂರಿನಲ್ಲಿ ಹೇಳಿದ್ದಾರೆ.

ತೆರಿಗೆ ವಂಚನೆ ಉದ್ದೇಶ?
‘ದಿನೇಶ್ ವರ್ತನೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ತೆರಿಗೆ ವಂಚನೆ ಮಾಡುವ ಉದ್ದೇಶದಿಂದ ಈ ರೀತಿ ಕಥೆ ಕಟ್ಟಿರಬಹುದು. ಈ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.