ADVERTISEMENT

ತಾಂತ್ರಿಕ ಲೋಪ: ನಿಂತ ಮೆಟ್ರೊ ರೈಲು

ಎಂ.ಜಿ ರಸ್ತೆ -ಕಬ್ಬನ್‌ ಪಾರ್ಕ್‌ ನಿಲ್ದಾಣದ ನಡುವೆ 10 ನಿಮಿಷ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 6 ಮೇ 2016, 19:38 IST
Last Updated 6 ಮೇ 2016, 19:38 IST
ತಾಂತ್ರಿಕ ಲೋಪದಿಂದ ಮೆಟ್ರೊ ರೈಲು ಸಂಚಾರ ಸ್ಥಗಿತಗೊಂಡ ಸಂದರ್ಭದಲ್ಲಿ ಕಬ್ಬನ್‌ ಪಾರ್ಕ್‌ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಕಂಡು ಬಂದ ಪ್ರಯಾಣಿಕರ ದಟ್ಟಣೆ
ತಾಂತ್ರಿಕ ಲೋಪದಿಂದ ಮೆಟ್ರೊ ರೈಲು ಸಂಚಾರ ಸ್ಥಗಿತಗೊಂಡ ಸಂದರ್ಭದಲ್ಲಿ ಕಬ್ಬನ್‌ ಪಾರ್ಕ್‌ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಕಂಡು ಬಂದ ಪ್ರಯಾಣಿಕರ ದಟ್ಟಣೆ   

ಬೆಂಗಳೂರು: ತಾಂತ್ರಿಕ ಲೋಪ ಉಂಟಾದ ಕಾರಣ ಮೆಟ್ರೊ ರೈಲು ಎಂ.ಜಿ ರಸ್ತೆಯ ನಿಲ್ದಾಣ ಮತ್ತು ಕಬ್ಬನ್‌ ಪಾರ್ಕ್‌ ನಿಲ್ದಾಣದ ನಡುವೆ ರಾತ್ರಿ ಸುಮಾರು 10 ನಿಮಿಷ ಸಂಚಾರ ಸ್ಥಗಿತಗೊಳಿಸಿದ್ದ ಪ್ರಸಂಗ ಶುಕ್ರವಾರ ನಡೆದಿದೆ.

ಆ ಬಳಿಕ ಮಂದಗತಿಯಲ್ಲಿ ಮುಂದಕ್ಕೆ ಸಾಗಿದ ರೈಲು ಹೇಗೋ ಕಬ್ಬನ್‌ ಪಾರ್ಕ್‌ ನಿಲ್ದಾಣ ತಲುಪಿದೆ.  ಪ್ರಯಾಣಿ­ಕ­ರನ್ನು ಇದೇ ನಿಲ್ದಾಣದಲ್ಲಿ ಕೆಳಕ್ಕೆ ಇಳಿಸಿ, ಖಾಲಿ ರೈಲು ಮೆಜಸ್ಟಿಕ್‌ ನಿಲ್ದಾಣದತ್ತ ಸಾಗಿದೆ.

ಘಟನೆ ವಿವರ: ‘ಬೈಯಪ್ಪನಹಳ್ಳಿ ಕಡೆಯಿಂದ ರಾತ್ರಿ 7.20 ಗಂಟೆಗೆ ಎಂ.ಜಿ ರಸ್ತೆ ನಿಲ್ದಾಣಕ್ಕೆ ಬಂದಿದ್ದ ರೈಲು, ಪ್ರಯಾಣಿಕರನ್ನು ಹತ್ತಿಸಿಕೊಂಡು ಮುಂದಕ್ಕೆ ಸಾಗಿತ್ತು. ಆದರೆ ಅನಿಲ್‌ ಕುಂಬ್ಳೆ ವೃತ್ತದ ಬಳಿ ರೈಲು ಚಲಿಸುವುದನ್ನು ನಿಲ್ಲಿಸಿತು. ಏತಕ್ಕೆ ರೈಲು ನಿಂತಿತು ? ಮುಂದಕ್ಕೆ ಏಕೆ ಹೋಗುತ್ತಿಲ್ಲ ಎಂಬುದು ಆ ಕ್ಷಣ ರೈಲಿನಲ್ಲಿದ್ದ ಯಾರಿಗೂ ಗೊತ್ತಾಗಲಿಲ್ಲ. ಎರಡು ನಿಲ್ದಾಣಗಳ ನಡುವೆ ನಿಂತಿದ್ದರಿಂದ ಅಕ್ಷರಶಃ ತ್ರಿಶಂಕು ಸ್ಥಿತಿಯಲ್ಲಿ ಇದ್ದಂತಾಗಿತ್ತು’ ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.

‘ತಾಂತ್ರಿಕ ಕಾರಣದಿಂದ ರೈಲು ನಿಂತಿದೆ. ಸದ್ಯದಲ್ಲಿಯೇ ಅದು ಚಲಿಸಲಿದೆ ಎಂದು ರೈಲಿನೊಳಗೆ ಮೌಖಿಕ ಸಂದೇಶ ಅದೇ ವೇಳೆ ಕೇಳಿ ಬಂದಿತು. ಬಳಿಕ ಹತ್ತು ನಿಮಿಷದಲ್ಲಿ ರೈಲು ಅಲ್ಲಿಂದ ಬಿಟ್ಟು, ಬಿಟ್ಟು ಚಲಿಸಲಾರಂಭಿಸಿತು.  ಮುಂದಿನ ನಾಲ್ಕು– ಐದು ನಿಮಿಷದಲ್ಲಿ ಕಬ್ಬನ್‌ ಪಾರ್ಕ್‌ ನಿಲ್ದಾಣವನ್ನು ತಲುಪಿತು. ಅಲ್ಲಿಯೇ ಎಲ್ಲ ಪ್ರಯಾಣಿಕರನ್ನು ಇಳಿಸಿ ಖಾಲಿ ರೈಲು ಮುಂದಕ್ಕೆ ಸಾಗಿತು’ ಎಂದು ಅವರು ಹೇಳಿದರು.

‘ನಾನು ಇದೇ ಮೊದಲ ಬಾರಿಗೆ ಮೆಟ್ರೊ ಪ್ರಯಾಣ ಕೈಗೊಂಡಿದ್ದೆ.  ಎರಡು ನಿಲ್ದಾಣಗಳ ನಡುವೆ ರೈಲು ಸಂಚಾರ ಸ್ಥಗಿತಗೊಳಿಸಿದ್ದರಿಂದ ಆತಂಕವಾಗಿತ್ತು. ಹೇಗೋ ಕಬ್ಬನ್‌ ಪಾರ್ಕ್‌ಗೆ ಬಂದ ನಂತರ ನಿಟ್ಟುಸಿರು ಬಿಟ್ಟೆ’ ಎಂದು ಯಶವಂತಪುರದ ನಿವಾಸಿ ಜ್ಞಾನಿಕಾ ಪ್ರತಿಕ್ರಿಯಿಸಿದರು.

‘ಮೆಜಸ್ಟಿಕ್‌ಗೆ ಹೋಗಿ, ಅಲ್ಲಿಂದ ಬಸ್‌ ಮೂಲಕ ಯಶವಂತಪುರಕ್ಕೆ ಹೋಗಬೇಕು. ಮೆಟ್ರೊದ ಮೊದಲ ಪ್ರಯಾಣದಲ್ಲಿಯೇ ನನಗೆ ಇಂತಹ ಅನುಭವವಾಗಿದೆ’ ಎಂದು ಅವರು ಬೇಸರದಿಂದ ಹೇಳಿದರು.

ದಟ್ಟಣೆ ಹೆಚ್ಚಳ: ಈ ಘಟನೆಯ ನಂತರ ಕಬ್ಬನ್‌ ಪಾರ್ಕ್‌ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಳವಾಗಿತ್ತು. ಬೈಯಪ್ಪನಹಳ್ಳಿಯಿಂದ ಬಂದ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿತ್ತು. ಆದರೂ ಬಹುತೇಕರು  ಪ್ರಯಾಣ ಬೆಳೆಸಿದರು. ಕೆಲವರು ಮೆಟ್ರೊ ಸಿಬ್ಬಂದಿ ಬಳಿ ತಮ್ಮ ಹಣ ಹಿಂದಿರುಗಿಸಿ, ಬಸ್‌ ಅಥವಾ ಆಟೊದಲ್ಲಿ ತೆರಳುತ್ತೇವೆ ಎಂದು ವಾಗ್ವಾದ ನಡೆಸಿದರು. ಬಳಿಕ ಪ್ರತಿ ನಾಲ್ಕು– ಐದು ನಿಮಿಷಕ್ಕೊಂದು ರೈಲು ಈ ಮಾರ್ಗದಲ್ಲಿ ಸಂಚರಿಸಿದವು.

ಮೆಟ್ರೊ ಪ್ರತಿಕ್ರಿಯೆ: ‘ತಾಂತ್ರಿಕ ದೋಷದಿಂದ ಕೆಲ ಕಾಲ ಮೆಟ್ರೊ ಸ್ಥಗಿತಗೊಂಡಿತ್ತು.  ಮುನ್ನೆಚ್ಚರಿಕಾ ಕ್ರಮವಾಗಿ ಪ್ರಯಾಣಿಕರನ್ನು ಕಬ್ಬನ್‌ ಪಾರ್ಕ್‌ ನಿಲ್ದಾಣದಲ್ಲಿ ಇಳಿಸಿ, ಖಾಲಿ ರೈಲನ್ನು ಮೆಜಸ್ಟಿಕ್‌ ಕಡೆಗೆ ಕಳುಹಿಸಲಾಯಿತು’ ಎಂದು ಮೆಟ್ರೊ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.