ADVERTISEMENT

ತಾಯಿ ಮೇಲಿನ ಸಿಟ್ಟಿಗೆ ಮಗನನ್ನು ಸಂಪ್‌ಗೆ ಎಸೆದ!

ಬಾಲಕನನ್ನು ಕೊಂದ ಹೂವಿನ ವ್ಯಾಪಾರಿ ಬಂಧನ

​ಪ್ರಜಾವಾಣಿ ವಾರ್ತೆ
Published 24 ಜೂನ್ 2017, 19:54 IST
Last Updated 24 ಜೂನ್ 2017, 19:54 IST
ಮಹೇಶ್
ಮಹೇಶ್   

ಬೆಂಗಳೂರು: ಜೋರಾಗಿ ಮನೆ ಬಾಗಿಲು ಬಡಿದಾಗ ಮಹಿಳೆ ಬೈದಿದ್ದರಿಂದ ಕೋಪಗೊಂಡ ಹೂವಿನ ವ್ಯಾಪಾರಿಯೊಬ್ಬ, ಆ ಮಹಿಳೆಯ ಆರು ವರ್ಷದ ಮಗನನ್ನು ನೀರಿನ ತೊಟ್ಟಿಗೆ ಎಸೆದು ಕೊಲೆಗೈದಿದ್ದಾನೆ.

ಬಿಳೇಕಹಳ್ಳಿಯಲ್ಲಿ ಶನಿವಾರ ಈ ದುರ್ಘಟನೆ ನಡೆದಿದ್ದು, ಮೈಕೊಲೇಔಟ್ ಪೊಲೀಸರು ಆರೋಪಿ ಮಹೇಶ್‌ (21) ಎಂಬಾತನನ್ನು ಬಂಧಿಸಿದ್ದಾರೆ.

ಹೆಬ್ಬಾಳದ ಮರಿಯನಪಾಳ್ಯ ನಿವಾಸಿಗಳಾದ ಜೇಮ್ಸ್ ಹಾಗೂ ಅನಿತಾ ಮೇರಿ ದಂಪತಿ ಮಗ ಮನೋಜ್ ಕೊಲೆಯಾದವನು.  ಮನೆ ಸಮೀಪದ ಶಾಲೆಯಲ್ಲಿ 1ನೇ ತರಗತಿ ಓದುತ್ತಿದ್ದ ಆತ, ಶುಕ್ರವಾರ ಸಂಜೆ ತಾಯಿ ಜತೆ ಬಿಳೇಕಹಳ್ಳಿಯ ಅಜ್ಜಿ ಮನೆಗೆ ಬಂದಿದ್ದ.

ADVERTISEMENT

ಪ್ರತಿದಿನ ಬೆಳಿಗ್ಗೆ ಆ ಮನೆಗೆ ಹೂವು ಕೊಡುತ್ತಿದ್ದ ಮಹೇಶ್, ಅಂತೆಯೇ ಶನಿವಾರ ಬೆಳಗಿನ ಜಾವ 5 ಗಂಟೆಗೆ ಹೂವು ಕೊಡಲು ಜೋರಾಗಿ ಮನೆ ಬಾಗಿಲು ಬಡಿದಿದ್ದ.
ಇದರಿಂದ ಎಚ್ಚರಗೊಂಡ ಅನಿತಾ, ‘ಅಷ್ಟು ಜೋರಾಗಿ ಬಾಗಿಲು ಬಡಿಯುತ್ತಿಯಲ್ಲ. ನಿನಗೆ ಬುದ್ಧಿ ಇಲ್ವಾ. ಮನೆಯಲ್ಲಿ ಮಕ್ಕಳು ಮಲಗಿದ್ದಾರೆ. ಇನ್ನು ಮುಂದೆ ನೀನು ಮನೆ ಹತ್ತಿರ ಬರುವುದೇ ಬೇಡ’ ಎಂದು ಬೈದಿದ್ದರು.

(ಮನೋಜ್)

ಅವರಿಗೆ ಬೈದುಕೊಂಡೇ ಅಲ್ಲಿಂದ ಹೊರಟು ಹೋಗಿದ್ದ ಮಹೇಶ್, 8.30ರ ಸುಮಾರಿಗೆ ಪುನಃ ಮನೆ ಹತ್ತಿರ ಬಂದಿದ್ದ. ಅಲ್ಲಿ ಆಟವಾಡುತ್ತಿದ್ದ ಮನೋಜ್‌ನನ್ನು ನೋಡಿದ ಆರೋಪಿ, ತಾಯಿ ಮೇಲಿನ ಸಿಟ್ಟಿಗೆ ಆತನನ್ನು ಹೊತ್ತುಕೊಂಡು ಹೋಗಿ ನಿರ್ಮಾಣ ಹಂತದ ಕಟ್ಟಡದ ಸಂಪ್‌ನಲ್ಲಿ ಎಸೆದು ಪರಾರಿಯಾಗಿದ್ದ.

ಸ್ವಲ್ಪ ಸಮಯದ ನಂತರ ಮಗನನ್ನು ತಿಂಡಿಗೆ ಕರೆಯಲು ಅನಿತಾ ಮನೆಯಿಂದ ಹೊರ ಬಂದಿದ್ದಾರೆ. ಮನೋಜ್‌ ಕಾಣದಿದ್ದಾಗ ಸುತ್ತಮುತ್ತಲ ರಸ್ತೆಗಳಲೆಲ್ಲಾ ಮಧ್ಯಾಹ್ನ 12 ಗಂಟೆವರೆಗೆ ಹುಡುಕಾಡಿದ್ದಾರೆ.

ಎಲ್ಲೂ ಸಿಗದಿದ್ದಾಗ ಮೈಕೊಲೇಔಟ್ ಠಾಣೆ ಮೆಟ್ಟಿಲೇರಿದ ಅವರು, ಬೆಳಿಗ್ಗೆ ಹೂವಿನ ವ್ಯಾಪಾರಿಗೆ ಬೈದಿದ್ದ ವಿಷಯವನ್ನೂ ಹೇಳಿದ್ದರು. ಪೊಲೀಸರು ಅನುಮಾನದ ಮೇಲೆ ಮಹೇಶ್‌ನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, ಕೊಲೆ ಪ್ರಕರಣ ಬೆಳಕಿಗೆ ಬಂದಿತು.

ಹಂತಕನನ್ನು ಕರೆದುಕೊಂಡು ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು, ಸಂಪ್‌ನಿಂದ ಮನೋಜ್‌ನ ಮೃತದೇಹವನ್ನು ಹೊರತೆಗೆದರು. ಮಗನ ಶವ ನೋಡುತ್ತಿದ್ದಂತೆಯೇ ಅನಿತಾ ಕುಸಿದು ಬಿದ್ದರು.

**

‘ಬೈಗುಳ ಕಾಡುತ್ತಿತ್ತು’
‘ಸಣ್ಣ ತಪ್ಪಿಗೆ ಮಹಿಳೆ ಅಷ್ಟೊಂದು ಬೈದರು. ಅದನ್ನು ಅರಗಿಸಿಕೊಳ್ಳಲು ಆಗಲಿಲ್ಲ. ಹೂವಿನ ವ್ಯಾಪಾರ ಮುಗಿಸಿ ಮನೆಗೆ ಹೋದಾಗ ಅವರ ಬೈಗುಳಗಳೇ ನೆನಪಾಗುತ್ತಿದ್ದವು. ಏನಾದರೂ ಮಾಡಿ ಸೇಡು ತೀರಿಸಿಕೊಳ್ಳಬೇಕೆಂದು ಅವರ ಮಗನನ್ನು ಸಂಪ್‌ಗೆ ಎಸೆದೆ. ಆತ ಸಾಯುವವರೆಗೂ ಅಲ್ಲೇ ಇದ್ದು, ನಂತರ ಮನೆಗೆ ಹೋಗಿ ಮಲಗಿದ್ದೆ’ ಎಂದು ಆರೋಪಿ ತಪ್ಪೊಪ್ಪಿಗೆ  ಹೇಳಿಕೆ ನೀಡಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.