ADVERTISEMENT

ತಿಪ್ಪಗೊಂಡನಹಳ್ಳಿ ಕೆರೆ ಅಚ್ಚುಕಟ್ಟು ಒತ್ತುವರಿ: ಹೈಕೋರ್ಟ್ ತರಾಟೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2014, 19:49 IST
Last Updated 28 ನವೆಂಬರ್ 2014, 19:49 IST

ಬೆಂಗಳೂರು: ತಿಪ್ಪಗೊಂಡನಹಳ್ಳಿ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿನ ಒತ್ತುವರಿ ತೆರವುಗೊಳಿಸುವಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಶುಕ್ರವಾರ ಈ ಕುರಿತ  ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ ಹಾಗೂ ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ್ ಅವರಿದ್ದ ಪೀಠವು ವಿಚಾರಣೆ ನಡೆಸಿತು.

ಅಚ್ಚುಕಟ್ಟು ಪ್ರದೇಶದಲ್ಲಿ ಅಕ್ರಮ ಬಡಾವಣೆ ಮತ್ತು ಕೈಗಾರಿಕೆಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವಲ್ಲಿ ಅಧಿಕಾರಿಗಳು ಒತ್ತುವರಿ­ದಾ­ರರ ಜೊತೆ ಶಾಮೀಲಾಗಿದ್ದಾರೆ ಎಂದು ಪೀಠವು ಅತೃಪ್ತಿ ವ್ಯಕ್ತಪಡಿಸಿತು.

‘ಈ ಪ್ರದೇಶದಲ್ಲಿ 194 ಅಕ್ರಮ ಕೈಗಾರಿಕೆಗಳ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಹೇಳಿರುವುದು ಕೇವಲ ಕಾಗದದ ಮೇಲಿದೆ. ಬಿಡಿಎ ರಾಜಕಾರಣಿಗಳ ಕೈಗೊಂಬೆಯಂತೆ ವರ್ತಿಸುತ್ತಿದೆ.  ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಇವರೆಲ್ಲಾ ಏನು ಮಾಡುತ್ತಿದ್ದಾರೊ ಗೊತ್ತಿಲ್ಲ. ಪರಿಸರ ನಿಯಂತ್ರಣ ಮಂಡಳಿಯಂತೂ ಸಂಪೂರ್ಣ ಕುರುಡಾಗಿದೆ’ ಎಂದು ಪೀಠವು ಅಧಿಕಾರಿಗಳ ಕಾರ್ಯ ವೈಖರಿಯನ್ನು ಕಟುವಾಗಿ ಟೀಕಿಸಿತು.

ಈ ವೇಳೆ ಹಾಜರಿದ್ದ ಅಡ್ವೊಕೇಟ್ ಜನರಲ್, ಮೂರು ತಿಂಗಳಲ್ಲಿ ಹೊಸ ಅಧಿಸೂಚನೆ ಹೊರಡಿಸುವುದಾಗಿ ನ್ಯಾಯಪೀಠಕ್ಕೆ ತಿಳಿಸಿದರು.
‘ಅಕ್ರಮವಾಗಿ ನಿರ್ಮಾಣಗೊಂಡಿರುವ ಬಡಾವಣೆಗಳ ತೆರವು ಕಾರ್ಯಾಚರಣೆ ಮುಂದುವರಿಸಲು ಹಾಗೂ ಅರ್ಕಾವತಿ ಅಚ್ಚುಕಟ್ಟು ಪ್ರದೇಶದ ಗಡಿ ಗುರುತಿಸಲು ಈಗಾಗಲೇ ಕೈಗೊಂಡಿರುವ ಸಮೀಕ್ಷಾ ಕಾರ್ಯವನ್ನು ಯಥಾವತ್ತಾಗಿ ಮುಂದುವರಿಸಿ’ ಎಂದು ಪೀಠವು   ಆದೇಶಿಸಿತು.

ತಿಪ್ಪಗೊಂಡನಹಳ್ಳಿ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿಯೇತರ ಚಟುವಟಿಕೆಗಳನ್ನು ನಿಷೇಧಿಸಿ ರಾಜ್ಯ ಸರ್ಕಾರ ೨೦೦೩ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಈ ದಿಸೆಯಲ್ಲಿ ಸ್ಥಳೀಯ ತಹಶೀಲ್ದಾರ್ ಅಲ್ಲಿನ ನಿವಾಸಿಗಳನ್ನು  ತೆರವುಗೊಳಿಸಲು ನೋಟಿಸ್ ಜಾರಿ ಮಾಡಿದ್ದರು. ಇದನ್ನು ಸ್ಥಳೀಯ ನಿವಾಸಿಗಳು ಕೋರ್ಟಿನಲ್ಲಿ ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.