ADVERTISEMENT

ದಾರಿಯಲ್ಲೇ ಕಸ ಚೆಲ್ಲುವ ಲಾರಿಗಳು!

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2014, 19:30 IST
Last Updated 27 ಆಗಸ್ಟ್ 2014, 19:30 IST

ಯಲಹಂಕ: ಜಕ್ಕೂರು ಪ್ಲೈಯಿಂಗ್‌ ಕ್ಲಬ್‌ನಿಂದ (ಬಳ್ಳಾರಿ ಮುಖ್ಯರಸ್ತೆ) ಹೆಗ್ಗಡೆನಗರದ ಕಡೆಗೆ ತೆರಳುವ ಜೋಡಿರಸ್ತೆಯಲ್ಲಿ ಜಕ್ಕೂರು ಗ್ರಾಮದ ಬಿಜಿಎಸ್‌ ಬಡಾವಣೆ ಸಮೀಪದಲ್ಲಿ ತ್ಯಾಜ್ಯ ತುಂಬಿದ ಬಿಬಿಎಂಪಿ ಲಾರಿಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ದುರ್ವಾಸನೆ ಹರ ಡಿರುವುದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಈ ಜೋಡಿ ರಸ್ತೆಯು ಬಳ್ಳಾರಿ ಮುಖ್ಯರಸ್ತೆಯಿಂದ ಜಕ್ಕೂರು, ಹೆಗ್ಗಡೆ ನಗರ, ಕ್ಯಾಲಸನಹಳ್ಳಿ ಮಾರ್ಗವಾಗಿ ಬಿಳೇಶಿವಾಲೆವರೆಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿರುವುದರಿಂದ ಪ್ರತಿನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ.

‘ಕೆಲವು ದಿನಗಳಿಂದ ಈ ರಸ್ತೆಯಲ್ಲಿ ತ್ಯಾಜ್ಯ ತುಂಬಿದ ಬಿಬಿಎಂಪಿ ಲಾರಿಗ ಳನ್ನು  ನಿಲ್ಲಿಸಲಾಗುತ್ತಿದೆ. ಲಾರಿಯಿಂದ ಸುರಿಯುತ್ತಿರುವ ಮಲಿನ ನೀರು ರಸ್ತೆಯುದ್ದಕ್ಕೂ ಒಂದು ಕಿಲೋಮೀಟರ್‌ ದೂರದವರೆಗೆ ಹರಿದುಕೊಂಡು ಹೋಗಿರುವುದರಿಂದ ಈ ಪ್ರದೇಶದಲ್ಲಿ ದುರ್ವಾಸನೆ ಹರಡಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ಮೂಗು ಮುಚ್ಚಿಕೊಂಡು ಸಂಚರಿಸಬೇಕಿದೆ’ ಎಂದು ಸ್ಥಳೀಯ ನಿವಾಸಿ ಸೋಮಶೇಖರ್‌ ದೂರಿದರು.

‘ಸುತ್ತಮುತ್ತಲ ಬಡಾವಣೆಗಳ ನೂರಾರು ಜನರು ಪ್ರತಿನಿತ್ಯ ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ವಾಯುವಿಹಾರಕ್ಕಾಗಿ ಈ ರಸ್ತೆಯ ಮೂಲಕವೇ ಹಾದುಹೋಗಬೇಕಾಗಿದೆ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಲಾರಿಯಿಂದ ನಿರಂತರವಾಗಿ ಮಲಿನ ನೀರು ಸುರಿಯುತ್ತಿರುವುದರ ಜೊತೆಗೆ ಲಾರಿಯ ಸುತ್ತಲೂ ಬಿದ್ದಿರುವ ತ್ಯಾಜ್ಯವಸ್ತುಗಳನ್ನು ತಿನ್ನಲು ಬರುವ ನಾಯಿಗಳ ಹಿಂಡು, ತ್ಯಾಜ್ಯವನ್ನು ರಸ್ತೆಯ ಮೇಲೆಲ್ಲಾ ಎಳೆದಾಡಿ, ರಸ್ತೆಯ ಅಂದವೇ ಕೆಟ್ಟಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.