ADVERTISEMENT

ದುಪ್ಪಟ್ಟು ಬಾಡಿಗೆ; 222 ಆಟೊಗಳ ಜಪ್ತಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2016, 20:14 IST
Last Updated 26 ಜುಲೈ 2016, 20:14 IST

ಬೆಂಗಳೂರು: ಬಿಎಂಟಿಸಿ ಬಸ್‌ಗಳು ರಸ್ತೆಗಿಳಿಯದ ಕಾರಣ ಪ್ರಯಾಣಿಕರಿಂದ ಹೆಚ್ಚಿನ ಬಾಡಿಗೆ ವಸೂಲಿ ಮಾಡುತ್ತಿದ್ದ ಆಟೊ ಚಾಲಕರು ಹಾಗೂ ಖಾಸಗಿ ಬಸ್‌ಗಳ ವಿರುದ್ಧ ಸಂಚಾರ ಪೊಲೀಸರು ಮಂಗಳವಾರ 1,392 ಪ್ರಕರಣಗಳನ್ನು ದಾಖಲಿಸಿದರು.

‘ಪ್ರಯಾಣಿಕರು ಕರೆದ ಕಡೆಗೆ ಹೋಗದ ಹಾಗೂ ಹೆಚ್ಚು ಬಾಡಿಗೆ ಕೇಳುವ ಚಾಲಕರ ವಿರುದ್ಧ ಕಾರ್ಯಾಚರಣೆ ನಡೆಸಿ, 222 ಆಟೊಗಳನ್ನು ಜಪ್ತಿ ಮಾಡಲಾಗಿದೆ. ಅದೇ ರೀತಿ ಹಲಸೂರು ಗೇಟ್ ಸಂಚಾರ ಪೊಲೀಸರು ಒಂದು ಖಾಸಗಿ ಬಸ್ಸನ್ನು ಜಪ್ತಿ ಮಾಡಿದ್ದಾರೆ’ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದರು.

‘ಮಧ್ಯಾಹ್ನ ಖಾಸಗಿ ಬಸ್ಸೊಂದು ಆನೇಕಲ್‌ನಿಂದ ಕೆ.ಆರ್.ಮಾರುಕಟ್ಟೆ ಕಡೆಗೆ ಸಾಗುತ್ತಿತ್ತು. ಅದರ ಚಾಲಕ ಹಾಗೂ ನಿರ್ವಾಹಕ ಪ್ರಯಾಣಿಕರಿಂದ ₹ 50 ರಿಂದ ₹ 75ರವರೆಗೆ ದರ ವಸೂಲಿ ಮಾಡುತ್ತಿದ್ದರು.

ಇದರಿಂದ ಅವರ ಜತೆ ಜಗಳ ಮಾಡಿ ಕಾರ್ಪೊರೇಷನ್ ವೃತ್ತದ ಬಳಿ ಬಸ್ ನಿಲ್ಲಿಸಿದ ಕೆಲ ಪ್ರಯಾಣಿಕರು, ಪೊಲೀಸ್ ನಿಯಂತ್ರಣ  ಕೊಠಡಿಗೆ ಕರೆ ಮಾಡಿದ್ದರು. ಕೂಡಲೇ ಸ್ಥಳಕ್ಕೆ ತೆರಳಿ, ಆ ಬಸ್ಸನ್ನು ಜಪ್ತಿ ಮಾಡಲಾಯಿತು. ನಂತರ ಪ್ರಯಾಣಿಕರಿಗೆ ಕ್ಯಾಬ್‌ಗಳಲ್ಲಿ ಕಳುಹಿಸಲಾಯಿತು’ ಎಂದು ಹಲಸೂರು ಗೇಟ್ ಸಂಚಾರ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.