ADVERTISEMENT

ದೆಹಲಿಯಿಂದ ಬಂದರು: ಕೊಳೆಗೇರಿಗೆ ಹೊರಟರು!

ಮುಖ್ಯಮಂತ್ರಿ ನಗರ ಸಂಚಾರ – ವರ್ತೂರು ಕೆರೆಯ ನೊರೆ ಸ್ಥಿತಿ ಅವಲೋಕನ

​ಪ್ರಜಾವಾಣಿ ವಾರ್ತೆ
Published 23 ಮೇ 2015, 20:11 IST
Last Updated 23 ಮೇ 2015, 20:11 IST

ಬೆಂಗಳೂರು: ನವದೆಹಲಿಯಿಂದ ಶನಿವಾರ ಮಧ್ಯಾಹ್ನ ನಗರಕ್ಕೆ ವಾಪಸು ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸೀದಾ ನಗರ ಸಂಚಾರ ಆರಂಭಿಸಿ ಕೊಳೆಗೇರಿ ಹಾಗೂ ಕೆರೆಗಳಿಗೆ ಭೇಟಿ ನೀಡಿದರು.

ಮೊದಲು ಆಡುಗೋಡಿಯ ಮಹಾಲಿಂಗೇಶ್ವರ ಬಡಾವಣೆ ಪ್ರದೇಶದ ಕೊಳೆಗೇರಿಗೆ ಭೇಟಿ ನೀಡಿದ ಅವರು ಅಲ್ಲಿನ ಪರಿಸ್ಥಿತಿ ಅವಲೋಕಿಸಿದರು. ಕೊಳೆಗೇರಿ ನಿವಾಸಿಗಳು ಮುಖ್ಯಮಂತ್ರಿ ಅವರನ್ನು ನೋಡಲು ಮುಗಿಬಿದ್ದರು. ರಾಜೀವ್‌ ಆವಾಸ್‌ ಯೋಜನೆ ಮೂಲಕ ₹12 ಕೋಟಿ ವೆಚ್ಚದಲ್ಲಿ ನಡೆದಿರುವ 273 ಮನೆಗಳನ್ನು ನಿರ್ಮಾಣ ಕಾರ್ಯವನ್ನು ತ್ವರಿತಗೊಳಿಸಲಾಗುವುದು ಎಂದು ಅಲ್ಲಿನ ನಿವಾಸಿಗಳಿಗೆ ಭರವಸೆ ನೀಡಿದರು.

ಕೈಕೊಂಡನಹಳ್ಳಿ ಕೆರೆಗೆ ತೆರಳಿದ ಸಿದ್ದರಾಮಯ್ಯ ಸ್ವಯಂಸೇವಾ ಸಂಸ್ಥೆಗಳು ಉತ್ತಮವಾಗಿ ನಿರ್ವಹಣೆ ಮಾಡಿರುವ ಅಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿದರು. ಉಳಿದ ಕೆರೆಗಳ ಅಭಿವೃದ್ಧಿಯಲ್ಲೂ ಈ ಮಾದರಿಯನ್ನು ಬಳಸಿಕೊಳ್ಳಲು ಮುಖ್ಯಮಂತ್ರಿ ಇಚ್ಛಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ವರ್ತೂರು ಕೆರೆಗೆ ಮುಖ್ಯಮಂತ್ರಿ ಭೇಟಿ ನೀಡುವಷ್ಟರಲ್ಲಿ ರಾತ್ರಿ 7 ಗಂಟೆ ಆಗಿತ್ತು. ಆದರೆ, ಭಾರಿ ಸಂಖ್ಯೆಯಲ್ಲಿ ಗ್ರಾಮಸ್ಥರು ಅವರ ಭೇಟಿಗಾಗಿ ಕಾದಿದ್ದರು. ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಲು ಸ್ಥಳೀಯರ ಮಧ್ಯೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ಅಲ್ಲಿನ ಸಮಸ್ಯೆ ಹೇಳಿಕೊಳ್ಳುವ ತವಕ ಎಲ್ಲರಲ್ಲೂ ಎದ್ದು ಕಾಣುತ್ತಿತ್ತು.

ಕೆರೆ ಪ್ರದೇಶವನ್ನು ವೀಕ್ಷಿಸಿದ ಮುಖ್ಯಮಂತ್ರಿ, ಯಾಕೆ ಇಂತಹ ಪರಿಸ್ಥಿತಿ ನಿರ್ಮಾಣವಾಯಿತು, ಈ ಸಮಸ್ಯೆಗೆ ಏನು ಪರಿಹಾರ ಎಂದು ಜಲಮಂಡಳಿ ಅಧ್ಯಕ್ಷ ಅಂಜುಮ್‌ ಪರ್ವೇಜ್‌ ಮತ್ತು ನಗರ ಜಿಲ್ಲಾಧಿಕಾರಿ ವಿ.ಶಂಕರ್‌ ಅವರನ್ನು ಕೇಳಿದರು. ಪರ್ವೇಜ್‌ ಅವರು ಉತ್ತರ ನೀಡಲು ಮುಂದಾದಾಗ ಮಧ್ಯೆ ಪ್ರವೇಶಿಸಿದ ವೈಟ್‌ಫೀಲ್ಡ್‌ ರೈಸಿಂಗ್‌ ಸಂಸ್ಥೆಯ ನಿತ್ಯ ರಾಮಕೃಷ್ಣನ್‌ ಮತ್ತಿತರರು, ‘ಜಲಮಂಡಳಿ ಒದಗಿಸುವ ತಾತ್ಕಾಲಿಕ ಪರಿಹಾರದಿಂದ ಏನೂ ಪ್ರಯೋಜನವಿಲ್ಲ’ ಎಂದು ಹೇಳಿದರು.

‘ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಮಧ್ಯೆ ಜಲ ವಲಯ ನಿರ್ಮಿಸಬೇಕು. ಸಂಸ್ಕರಿಸಿದ ನೀರನ್ನು ಮಾತ್ರ ಕೆರೆಗಳಿಗೆ ಬಿಡಬೇಕು. ಕೆರೆಗಳ ಹೂಳು ತೆಗೆಯಬೇಕು ಮತ್ತು ಸಂಸ್ಕರಿಸಿದ, ಸಂಸ್ಕರಿಸದ ನೀರನ್ನು ಪ್ರತ್ಯೇಕಗೊಳಿಸಬೇಕು’ ಎಂದು ಸಲಹೆ ನೀಡಿದರು. ವರ್ತೂರು ಹೋಬಳಿಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಸಹ ಸಿದ್ದರಾಮಯ್ಯ ಭೇಟಿ ನೀಡಿದರು.

ಜೈಕಾ ನೆರವಿನಿಂದ ₹300 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಈ ಘಟಕ 2016ರಲ್ಲಿ ಕಾರ್ಯಾರಂಭ ಮಾಡಲಿದೆ. ನಿತ್ಯ ಒಂಬತ್ತು ಕೋಟಿ ಲೀಟರ್‌ ನೀರು ಸಂಸ್ಕರಿಸುವ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ ಎಂದು ಜಲಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದರು.
*
ಸಂಚಾರ ದಟ್ಟಣೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಸಂಜೆ ನಡೆಸಿದ ನಗರ ಸಂಚಾರ ಹಲವು ಪ್ರದೇಶಗಳಲ್ಲಿ ಸಂಚಾರ ದಟ್ಟಣೆಗೆ ಕಾರಣವಾಗಿ ಸಾರ್ವಜನಿಕರು ಹಿಂಸೆ ಅನುಭವಿಸಬೇಕಾಯಿತು. ಮುಖ್ಯಮಂತ್ರಿ ತಂಡಕ್ಕೆ ದಾರಿ ಮಾಡಿಕೊಡಲು ಸಂಚಾರ ಪೊಲೀಸರು ಸಾರ್ವಜನಿಕರ ವಾಹನಗಳನ್ನು ಕಿಲೋಮೀಟರ್‌ ಉದ್ದದವರೆಗೆ ನಿಲ್ಲಿಸಿಕೊಂಡಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. 

ತಡವಾಗಿ ಹೊರಟಿದ್ದರಿಂದ ಸಂಚಾರ ಪಟ್ಟಿಯಲ್ಲಿದ್ದ ಕೆಲವು ಪ್ರದೇಶಗಳ ವೀಕ್ಷಣೆಯನ್ನು ಕೈಬಿಡಲಾಯಿತು. ನೊರೆ ಹಾವಳಿಯಿಂದ ಇತ್ತೀಚಿನ ದಿನಗಳಲ್ಲಿ ತುಂಬಾ ಸುದ್ದಿಯಲ್ಲಿರುವ ಬೆಳ್ಳಂದೂರು ಕೆರೆಗೂ ಮುಖ್ಯಮಂತ್ರಿ ಹೋಗುವ ಕಾರ್ಯಕ್ರಮ ಇತ್ತು. ಆದರೆ, ಸಮಯದ ಅಭಾವದಿಂದ ಹೋಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT