ADVERTISEMENT

ದೇವರಿಗೂ ದೇವಕಣಕ್ಕೂ ಸಂಬಂಧ ಇಲ್ಲ: ಶೈಲಜಾ

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST

ಬೆಂಗಳೂರು: ‘ದೇವರಿಗೂ ‘ದೇವಕಣ’ಕ್ಕೂ ಏನೇನೂ ಸಂಬಂಧ ಇಲ್ಲ. ಈ ಕಣಕ್ಕೆ ‘ಗಾಡ್‌ ಪಾರ್ಟಿಕಲ್‌’ ಎಂಬ ಹೆಸರು ಬಂದಿದ್ದು ಒಂದು ಪುಸ್ತಕದಿಂದ. ‘ಹಿಗ್ಸ್ ಬೋಸಾನ್’ ಅದರ ಸರಿಯಾದ ಹೆಸರು. ಈ ಕುರಿತು ಮಕ್ಕಳಿಗೆ ಸರಿಯಾದ ಮಾಹಿತಿ ನೀಡಿ’

–ಜವಾಹರಲಾಲ್‌ ನೆಹರೂ ತಾರಾಲಯದ ನಿರ್ದೇಶಕಿ ಬಿ.ಎಸ್‌. ಶೈಲಜಾ ಅವರು ಬುಧವಾರ ವಿಜ್ಞಾನ ಶಿಕ್ಷಕರಿಗೆ ಹೇಳಿದ ಕಿವಿಮಾತು ಇದು. ರಾಜ್ಯ ಪಠ್ಯಕ್ರಮದ ಭೌತಶಾಸ್ತ್ರ ಪಠ್ಯದಲ್ಲಿ ನುಸುಳಿದ ಕೆಲವು ತಪ್ಪು ಕಲ್ಪನೆಗಳ ಕುರಿತು ಮಾಹಿತಿ ನೀಡಲು ಈ ಕಾರ್ಯಾಗಾರ ಏರ್ಪಡಿಸಲಾಗಿತ್ತು.

‘ದೇವರಿಗೆ ಸಂಬಂಧಿಸಿದ ಕಣ ನಿಜವಾಗಿಯೂ ಇದೆಯೇ’ ಎಂದು ಹಲವು ವಿದ್ಯಾರ್ಥಿಗಳು ಪ್ರಶ್ನೆ ಮಾಡುತ್ತಾರೆ. ‘ಹಿಗ್ಸ್ ಬೋಸಾನ್’ ಎಂಬ ಅದರ ನೈಜ ಹೆಸರನ್ನು ಬಿಟ್ಟು ಪಠ್ಯದಲ್ಲಿ ‘ದೇವಕಣ’ ಎಂದು ಉಲ್ಲೇಖಿಸಿರುವುದೇ ಈ ಗೊಂದಲಕ್ಕೆ ಕಾರಣವಾಗಿದೆ’ ಎಂದರು.

‘ಆಕಾಶ ಕಾಯಗಳಾದ ಶ್ವೇತ ಕುಬ್ಜಗಳಿಗೂ ಕಪ್ಪು ರಂಧ್ರಗಳಿಗೂ ವ್ಯತ್ಯಾಸವಿದೆ. ಸುಬ್ರಹ್ಮಣ್ಯನ್‌ ಚಂದ್ರಶೇಖರ್‌ ಅವರು ಶ್ವೇತ ಕುಬ್ಜಗಳ ಕುರಿತು ಪ್ರತಿಪಾದಿಸಿದ ಸಿದ್ಧಾಂತವನ್ನು ಕಪ್ಪು ರಂದ್ರ ಕುರಿತಾದ ವಿವರಣೆ ಎಂಬಂತೆ ಪಠ್ಯದಲ್ಲಿ ಬಿಂಬಿಸಲಾಗಿದೆ’ ಎಂದು ವಿವರಿಸಿದರು.

‘ನಕ್ಷತ್ರದ ಸಂಪೂರ್ಣ ದ್ರವ್ಯರಾಶಿ ಸಂಕುಚಿಸುತ್ತಾ ಹೋಗಿ ಅದರ ತೂಕಕ್ಕೆ ಅನುಗುಣವಾದ ನಿರ್ದಿಷ್ಟ ತ್ರಿಜ್ಯದ ಗೋಲದೊಳಗೆ ಹೊಕ್ಕಾಗ ಆ ಗೋಲವೇ ಕಪ್ಪು ರಂಧ್ರ ಎನಿಸುವುದು. ಈ ಗೋಲವು ದ್ರವ್ಯರಾಶಿಯಿಂದ ನಿರ್ಮಿತವಾಗಿಲ್ಲ. ಅದೊಂದು ಕೇವಲ ಕಾಲ್ಪನಿಕ ಜ್ಯಾಮಿತಿಯ ಗೋಲ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.