ADVERTISEMENT

ನಗರದಲ್ಲಿ ಪೊಲೀಸ್‌ ಕಟ್ಟೆಚ್ಚರ

ಒತ್ತೆಯಾಳು ಕಾರ್ಯಾಚರಣೆ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2014, 19:50 IST
Last Updated 16 ಡಿಸೆಂಬರ್ 2014, 19:50 IST
ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಬ್ಯಾಗ್‌ಗಳ ತಪಾಸಣೆ ನಡೆಸಿದ ಪೊಲೀಸ್ ಸಿಬ್ಬಂದಿ	–ಪ್ರಜಾವಾಣಿ ಚಿತ್ರಗಳು
ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಬ್ಯಾಗ್‌ಗಳ ತಪಾಸಣೆ ನಡೆಸಿದ ಪೊಲೀಸ್ ಸಿಬ್ಬಂದಿ –ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ಆಸ್ಟ್ರೇಲಿಯಾದ ಸಿಡ್ನಿ­ಯಲ್ಲಿ ನಡೆಸಿದ ಒತ್ತೆಯಾಳು ಪ್ರಕರ­ಣದ ಮಾದರಿಯಲ್ಲಿ ನಗರದಲ್ಲೂ ದೊಡ್ಡ ಮಟ್ಟದ ಒತ್ತೆಯಾಳು ಕಾರ್ಯಾಚರಣೆ ನಡೆಸುವುದಾಗಿ @ISIS_Med ಟ್ವಿಟರ್‌ ಖಾತೆಯಿಂದ ಬೆದರಿಕೆ ಸಂದೇಶ ಬಂದಿದ್ದರಿಂದ ನಗರದೆಲ್ಲೆಡೆ ಮಂಗಳವಾರ ಕಟ್ಟೆಚ್ಚರ ವಹಿಸಲಾಗಿತ್ತು.

ಶಾಪಿಂಗ್‌ ಮಾಲ್‌ಗಳು, ವಿಮಾನ ನಿಲ್ದಾಣ, ವಿಧಾನಸೌಧ, ಮಾರುಕಟ್ಟೆ, ಮೆಟ್ರೊ ರೈಲು ನಿಲ್ದಾಣ, ಚಿತ್ರಮಂದಿರ­ಗಳು, ರೈಲು ಹಾಗೂ ಬಸ್‌ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬೆಳಿಗ್ಗೆಯಿಂದಲೇ ಪೊಲೀಸ್‌ ಭದ್ರತೆ ಹೆಚ್ಚಿಸಲಾಗಿತ್ತು.

ಕಾನೂನು ಮತ್ತು ಸುವ್ಯವಸ್ಥೆ ವಿಭಾ­ಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಅಲೋಕ್‌ಕುಮಾರ್‌, ಹಾಗೂ ಡಿಸಿಪಿಗಳು ಪ್ರಮುಖ ಮಾಲ್‌ಗಳು, ಮೆಟ್ರೊ ನಿಲ್ದಾಣ ಸೇರಿದಂತೆ ಹೆಚ್ಚು ಜನಸಂದಣಿ ಇರುವ ಸ್ಥಳಗಳಿಗೆ ಭೇಟಿ ನೀಡಿ ಭದ್ರತೆ ಪರಿಶೀಲಿಸಿದರು. ಬಸ್‌ ಮತ್ತು ರೈಲು ನಿಲ್ದಾಣಗಳಲ್ಲಿ ಪೊಲೀ­ಸರು ಪ್ರಯಾಣಿಕರ ಬ್ಯಾಗ್‌ಗಳು ಹಾಗೂ ವಾಹನಗಳನ್ನು ತೀವ್ರ ತಪಾಸ­ಣೆಗೆ ಒಳಪಡಿಸಿದ ನಂತರವಷ್ಟೇ ನಿಲ್ದಾಣ ಪ್ರವೇಶಿಸಲು ಅವಕಾಶ ನೀಡಿದರು.

ಸಂದೇಶದಲ್ಲಿ ಏನಿದೆ?

‘ನಗರಕ್ಕೆ ಭಯೋತ್ಪಾದಕರಿಂದ ಬುಧವಾರ ಅಪಾಯ ಕಾದಿದೆ. ಆದ್ದರಿಂದ ಎಲ್ಲೆಡೆ ಕಟ್ಟೆಚ್ಚರ ಘೋಷಿಸಲಾಗಿದೆ. ಗೃಹ ಸಚಿವ ಕೆ.ಜೆ.ಜಾರ್ಜ್‌ ಮತ್ತು ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಕೆಲ ತಿಂಗಳುಗಳ ಹಿಂದೆ ಸಭೆ ನಡೆಸಿ, ವಿಪ್ರೊ ಹಾಗೂ ಇನ್ಫೊಸಿಸ್‌ ಸಂಸ್ಥೆಗಳು ಉಗ್ರರ ಪ್ರಮುಖ ಗುರಿಗಳು ಎಂದು ಚರ್ಚಿಸಿದ್ದರು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಸುದ್ದಿ ವಾಹಿನಿಗಳನ್ನು ನೋಡಿ. ಜನನಿಬಿಡ ಸ್ಥಳಗಳಿಗೆ ಹೋಗದಂತೆ ಕುಟುಂಬ ಸದಸ್ಯರಿಗೆ ತಿಳಿಸಿ. ಭಯೋತ್ಪಾದಕರು ಶಾಲಾ ಕಾಲೇಜು, ಸಾರ್ವಜನಿಕ ಸ್ಥಳಗಳು ಅಥವಾ ಹೆಚ್ಚು ಜನಸಂದಣಿ ಇರುವ ಜಯನಗರ, ಕೋರಮಂಗಲ, ವಿಜಯನಗರ, ರಾಜಾಜಿನಗರ, ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮತ್ತಲಿನ ಪ್ರದೇಶವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಾರೆ. ಆ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಇದ್ದರೂ ಅಲ್ಲಿಗೆ ಹೋಗುವವರು ಎಚ್ಚರ ವಹಿಸಬೇಕು’ ಎಂಬ ಬೆದರಿಕೆ ಸಂದೇಶ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ.

ADVERTISEMENT

ವಾಟ್ಸ್‌ಆ್ಯಪ್‌ನಲ್ಲಿ ಬೆದರಿಕೆ ಸಂದೇಶ: ‘ನಗರದಲ್ಲಿ ಭಯೋತ್ಪಾದನಾ ದಾಳಿ ನಡೆಯುವುದಾಗಿ ವಾಟ್ಸ್‌ಆ್ಯಪ್‌ನಲ್ಲಿ ಬೆದರಿಕೆ ಸಂದೇಶ ಹರಿದಾಡುತ್ತಿದ್ದು. ಅದರಿಂದ ಸಾರ್ವಜನಿಕರು ಆತಂಕಪಡ­ಬೇಕಿಲ್ಲ’ ಎಂದು ನಗರ ಪೊಲೀಸ್‌ ಕಮಿ­ಷ­ನರ್‌ ಎಂ.ಎನ್‌.ರೆಡ್ಡಿ ಹೇಳಿದ್ದಾರೆ.

ಆ ಸಂದೇಶ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ. ನಗರವಾಸಿಗಳು ಆ ಸಂದೇಶಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ. ನಗರ ಸುರಕ್ಷಿತವಾಗಿದ್ದು, ಭಯೋತ್ಪಾದನಾ ದಾಳಿ ನಡೆಯುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಯಿಂದ ಯಾವುದೇ ಮಾಹಿತಿ ಬಂದಿಲ್ಲ. ನಗರವಾಸಿಗಳು ವದಂತಿಗೆ ಕಿವಿಗೂಡದೆ ಮಾರುಕಟ್ಟೆ, ಮಾಲ್‌ಗಳು ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ನಿರ್ಭಯವಾಗಿ ಸಂಚರಿಸಬಹುದು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ರೀತಿ ವದಂತಿ ಹಬ್ಬಿಸುತ್ತಿರುವ ವ್ಯಕ್ತಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸ­ಲಾಗುತ್ತದೆ. ಅಂತಹ ವ್ಯಕ್ತಿಗಳ ಬಗ್ಗೆ ಸಾರ್ವಜನಿಕರು ಹತ್ತಿರದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು ಎಂದು ರೆಡ್ಡಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.