ADVERTISEMENT

ನವಜಾತ ಶಿಶು ಕದ್ದೊಯ್ದ ಬುರ್ಖಾಧಾರಿ ಮಹಿಳೆ

ಬೌರಿಂಗ್ ಆಸ್ಪತ್ರೆಯಲ್ಲಿ ಹಾಡಹಗಲೆ ಘಟನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2015, 4:25 IST
Last Updated 5 ಅಕ್ಟೋಬರ್ 2015, 4:25 IST

ಬೆಂಗಳೂರು:  ಮಗು ನೋಡುವ ನೆಪದಲ್ಲಿ ಬಂದ ಮಹಿಳೆಯೊಬ್ಬಳು ಮೂರು ದಿನದ ನವಜಾತ ಶಿಶುವೊಂದನ್ನು ಕದ್ದೊಯ್ದಿರುವ ಘಟನೆ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಭಾನುವಾರ ನಡೆದಿದೆ.

ಕಾಡುಗೋಡಿ ನಿವಾಸಿಗಳಾದ ಸೈಯ್ಯದ್ ಹಬೀದ್ ಮತ್ತು ಫರೀದಾ ದಂಪತಿಯ ಮೂರು ದಿನದ ಗಂಡು ಮಗು ಕಳವಾಗಿದೆ. ಹೆರಿಗೆಗಾಗಿ ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಫರೀದಾ ಅವರಿಗೆ ಅ.2ರಂದು ಗಂಡು ಮಗು ಜನಿಸಿತ್ತು. ಮಗುವನ್ನು ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (ಎನ್‌ಐಸಿಯು) ಇಟ್ಟಿದ್ದರಿಂದ, ಹಾಲುಣಿಸುವುದಕ್ಕಾಗಿ ಆಗಾಗ್ಗೆ ತಾಯಿಗೆ ಮಗುವನ್ನು ಕೊಡಲಾಗುತ್ತಿತ್ತು.

ಎಂದಿನಂತೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಹಾಲುಣಿಸುವುದಕ್ಕಾಗಿ ಫರೀದಾ ಅವರಿಗೆ ಸಿಬ್ಬಂದಿ ಮಗುವನ್ನು ತಂದು ಕೊಟ್ಟಿದ್ದಾರೆ. ಈ ವೇಳೆ ಕೊಠಡಿಗೆ ಬಂದ ಬುರ್ಖಾ ಧರಿಸಿದ್ದ ಮಹಿಳೆಯೊಬ್ಬರು ಫರೀದಾ ಅವರನ್ನು ಪರಿಚಯಿಸಿಕೊಂಡಿದ್ದಾರೆ.

ಆತ್ಮೀಯವಾಗಿ ಮಾತನಾಡಲಾರಂಭಿಸಿದ ಆಕೆ, ತಾಯಿಯಿಂದ ಮಗುವನ್ನು  ಎತ್ತಿಕೊಂಡು ಮುದ್ದಿಸಲಾರಂಭಿಸಿದ್ದಾಳೆ. ಇದೇ ವೇಳೆ ಫರೀದಾ ಅವರು ಸ್ವಲ್ಪ ಹೊತ್ತು ಮಗು ನೋಡಿಕೊಳ್ಳಿ ಎಂದು ಆಕೆಗೆ ಹೇಳಿ ಶೌಚಾಲಯಕ್ಕೆ ಹೋಗಿದ್ದಾರೆ. ಫರೀದಾ ಅವರು ಶೌಚಾಲಯಕ್ಕೆ ಹೋದ ಬೆನ್ನಲ್ಲೇ, ಮಹಿಳೆ ಮಗುವಿನೊಂದಿಗೆ ಪರಾರಿಯಾಗಿದ್ದಾಳೆ.

ಫರೀದಾ ಅವರು ಶೌಚಾಲಯದಿಂದ  ವಾಪಸ್ ಬಂದಾಗ, ಆ ಮಹಿಳೆ ಮತ್ತು ಮಗು ಇಬ್ಬರೂ ಕಾಣಲಿಲ್ಲ. ಇದರಿಂದ ಗಾಬರಿಗೊಂಡ ಅವರು, ಸುತ್ತಮುತ್ತ ಹುಡುಕಾಡಿದ್ದಾರೆ. ಆಗಲೂ ಪತ್ತೆಯಾಗದಿದ್ದಾಗ ಆಸ್ಪತ್ರೆ ಸಿಬ್ಬಂದಿ ಮತ್ತು ಸಂಬಂಧಿಕರಿಗೆ ವಿಷಯ ತಿಳಿಸಿದರು ಎಂದು ಪೊಲೀಸರು ಹೇಳಿದರು.

ಬುರ್ಖಾ ಧರಿಸಿದ್ದಳು: ಫರೀದಾ ಅವರಿದ್ದ ಕೋಣೆಗೆ ಬಂದಿದ್ದ ಮಹಿಳೆ, ತಮ್ಮ ಸಂಬಂಧಿಯೊಬ್ಬರನ್ನು ಆಸ್ಪತ್ರೆಗೆ ಸೇರಿಸಿದ್ದೇನೆ. ಪಕ್ಕದ ಕೋಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪರಿಚಯಿಸಿಕೊಂಡಳು ಎಂದು ಮಗುವಿನ ತಾಯಿ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಸಿ.ಸಿ. ಟಿ.ವಿ. ಕ್ಯಾಮೆರಾದಲ್ಲಿ ಮಹಿಳೆ ಕೊಠಡಿಗೆ ಬಂದು ಮಗು ಕದ್ದೊಯ್ದಿರುವ ದೃಶ್ಯಗಳು ಸೆರೆಯಾಗಿವೆ. ಸಿ.ಸಿ. ಟಿ.ವಿ.ಕ್ಯಾಮೆರಾದ ದೃಶ್ಯಗಳನ್ನು  ಆಧರಿಸಿ ಆಕೆಯ ಮುಖಚಹರೆ ಗುರುತಿಸಲಾಗುತ್ತಿದೆ ಎಂದು ಹೇಳಿದರು. ಮಕ್ಕಳನ್ನು ಕದಿಯುವ ಸಲುವಾಗಿ ಹಾಗೂ ತಮ್ಮ ಚಹರೆಯನ್ನು ಗುರುತಿಸಲು ಸಾಧ್ಯ ಆಗಬಾರದು ಎನ್ನುವ ಕಾರಣಕ್ಕೇ ಆಕೆ ಬುರ್ಖಾ ಧರಿಸಿರುವಂತಿದೆ. ಆದರೂ ಮಹಿಳೆಯ ಗುರುತು ಪತ್ತೆಯಾಗಿದ್ದು, ಆದಷ್ಟು ಬೇಗ ಆಕೆಯನ್ನು ಪತ್ತೆಹಚ್ಚಿ ಮಗುವನ್ನು ವಶಕ್ಕೆ ಪಡೆಯಲಾಗುವುದು ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.