ADVERTISEMENT

ನಿತ್ರಾಣಗೊಂಡು ಕಾಡಾನೆ ಸಾವು

ಆಹಾರ, ನೀರು ಅರಸಿ ನಾಡಿಗೆ ಬಂದಿದ್ದ ಗಜ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 19:36 IST
Last Updated 13 ಏಪ್ರಿಲ್ 2017, 19:36 IST
ಕನಕಪುರ ತಾಲ್ಲೂಕಿನ ದೇವಿರಮ್ಮನದೊಡ್ಡಿ ಗ್ರಾಮ ಸಮೀಪ ಗುರುವಾರ ನಿತ್ರಾಣಗೊಂಡ ಆನೆಗೆ ಚಿಕಿತ್ಸೆ ನೀಡುವ ಪ್ರಯತ್ನ ನಡೆಯಿತು
ಕನಕಪುರ ತಾಲ್ಲೂಕಿನ ದೇವಿರಮ್ಮನದೊಡ್ಡಿ ಗ್ರಾಮ ಸಮೀಪ ಗುರುವಾರ ನಿತ್ರಾಣಗೊಂಡ ಆನೆಗೆ ಚಿಕಿತ್ಸೆ ನೀಡುವ ಪ್ರಯತ್ನ ನಡೆಯಿತು   
ಕನಕಪುರ/ರಾಮನಗರ: ನೀರು ಹಾಗೂ ಮೇವು ಹುಡುಕಿಕೊಂಡು ಕಾಡಂಚಿನ ಗ್ರಾಮಕ್ಕೆ ಬಂದಿದ್ದ ಮಕ್ನಾ ಆನೆಯೊಂದು ನಿತ್ರಾಣಗೊಂಡು ಮೃತಪಟ್ಟ ಘಟನೆ ಕನಕಪುರ ತಾಲೂಕಿನ ಕಾವೇರಿ ವನ್ಯಜೀವಿಧಾಮದ ಸಂಗಮ ಅರಣ್ಯ ವಲಯದ ಚೀಲಂದವಾಡಿ ಅರಣ್ಯ ಪ್ರದೇಶದ ದೇವಿರಮ್ಮನದೊಡ್ಡಿ ಗ್ರಾಮದಲ್ಲಿ ಗುರುವಾರ ನಡೆಯಿತು.
 
ಆನೆಯು ನೀರು ಕುಡಿಯಲೆಂದು ಗ್ರಾಮದ ನಾರಾಯಣ ಗೌಡ ಎಂಬುವರ ಜಮೀನಿಗೆ ಬೆಳಿಗ್ಗೆ 6ರ ಹೊತ್ತಿಗೆ ಬಂದಿದ್ದು, ನಿತ್ರಾಣಗೊಂಡು ಸ್ಥಳದಲ್ಲಿಯೇ ಕುಸಿದು ಬಿದ್ದಿತು. ಸ್ಥಳೀಯ ರೈತರು ಇದನ್ನು ಕಂಡು ಊರಿನವರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದರು. ಬಳಿಕ ದೊಡ್ಡಾಲಹಳ್ಳಿ ಪಶು ವೈದ್ಯಾಧಿಕಾರಿ ಧನಂಜಯ ಹಾಗೂ ಬನ್ನೇರುಘಟ್ಟದ ವೈದ್ಯಾಧಿಕಾರಿ ಕ್ಷಮಾ ಸ್ಥಳಕ್ಕೆ ಧಾವಿಸಿ ಉಪಚಾರ ಆರಂಭಿಸಿದರು.
 
ಟ್ಯಾಂಕರ್‌ ಮೂಲಕ ನೀರನ್ನು ತಂದು ಆನೆಗೆ ಕುಡಿಸುವ, ತಣ್ಣನೆಯ ಗೋಣಿ ಚೀಲಗಳಿಂದ ಅದನ್ನು ತಣ್ಣಗಿಡುವ ಪ್ರಯತ್ನವೂ ನಡೆಯಿತು. ಬನ್ನೇರುಘಟ್ಟದ ತಜ್ಞ ವೈದ್ಯ ಸುಜಯ್‌ ಸಹ ಚಿಕಿತ್ಸೆ ನೀಡಿದರು. ಆದರೆ ಇದ್ಯಾವುದಕ್ಕೂ ಸ್ಪಂದಿಸದ ಆನೆ ಸಂಜೆ 4.30ರ ಸುಮಾರಿಗೆ ಮೃತಪಟ್ಟಿತು.
 
ಬಳಿಕ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ ಅದರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಆನೆಯ ರಕ್ತದ ಮಾದರಿಯ ಪರೀಕ್ಷೆಯ ನಂತರ ಸಾವಿಗೆ ಕಾರಣ ತಿಳಿಯಲಿದೆ ಎಂದು ವೈದ್ಯರು ತಿಳಿಸಿದರು. ಕಾವೇರಿ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಡಿ. ಶ್ರೀನಿವಾಸಯ್ಯ, ವಲಯ ಅರಣ್ಯಾಧಿಕಾರಿ ಶಿವರಾಮು, ಸರ್ಕಲ್‌ ಇನ್‌ಸ್ಪೆಕ್ಟರ್‌ ಸಿದ್ದೇಗೌಡ ಇತರರು ಭೇಟಿ ನೀಡಿದ್ದರು. 
 
ಮಕ್ನಾ ಆನೆ:  20 ವರ್ಷ ವಯಸ್ಸಿನ ಈ ಗಂಡಾನೆಗೆ ಸೊಂಡಿಲು ಇರಲಿಲ್ಲ. ಇತರ ಆನೆಗಳು ಇದನ್ನು ಹತ್ತಿರ ಸೇರಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿ ಆಹಾರವಿಲ್ಲದೆ ನಿತ್ರಾಣಗೊಂಡು ಮೃತಪಟ್ಟಿದೆ ಎನ್ನಲಾಗಿದೆ. ಸಮೀಪದ ಮಾವಿನ ತೋಟಗಳಲ್ಲಿ ಮರಗಳಿಗೆ ಸಿಂಪಡನೆ ಮಾಡಿದ್ದ ಔಷಧಯುಕ್ತ ಸೊಪ್ಪನ್ನು ಸೇರಿಸಿ ಆನೆ ಅಸ್ವಸ್ಥಗೊಂಡಿರಬಹುದು ಎನ್ನಲಾಗಿದೆ. 
 
ಎರಡನೇ ಸಾವು: ಈ ಬೇಸಿಗೆಯ ಅವಧಿಯಲ್ಲಿ ಕಾವೇರಿ ವನ್ಯಧಾಮದ ವ್ಯಾಪ್ತಿಯಲ್ಲಿ ನಿತ್ರಾಣಗೊಂಡು ಮೃತಪಟ್ಟ ಎರಡನೇ ಆನೆ ಇದಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.