ADVERTISEMENT

ನೆರೆಮನೆ ಮಹಿಳೆ ಮೇಲೆ ಅತ್ಯಾಚಾರ: ಬಂಧನ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2015, 19:48 IST
Last Updated 26 ಮಾರ್ಚ್ 2015, 19:48 IST

ಬೆಂಗಳೂರು: ನೆರೆಮನೆಯ 25 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಚಂದ್ರಶೇಖರ್‌ ರೆಡ್ಡಿ (30) ಎಂಬಾತನನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಬಾಗೇಪಲ್ಲಿ ತಾಲ್ಲೂಕಿನ ಚಂದ್ರಶೇಖರ್, ಮೂರು ವರ್ಷಗಳಿಂದ ಯಲಹಂಕ ಸಮೀಪದ ಕಾಮಾಕ್ಷಮ್ಮ ಲೇಔಟ್‌ನಲ್ಲಿ ನೆಲೆಸಿದ್ದಾನೆ.

ಟೈಲ್ಸ್‌ ಮಾರಾಟ ಮಳಿಗೆಯಲ್ಲಿ ಕೆಲಸ ಮಾಡುವ ಈತ, ಬುಧವಾರ ರಾತ್ರಿ ನೆರೆ ಮನೆಗೆ ನುಗ್ಗಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ದೂರು ನೀಡಿದ ಮಹಿಳೆಯು ಪತಿ ಮತ್ತು ಆರು ವರ್ಷದ ಮಗಳ ಜತೆ ವಾಸವಾಗಿದ್ದಾರೆ. ಕೈಮಗ್ಗ ಕೆಲಸ ಮಾಡುವ ಅವರ ಪತಿ, ಬುಧವಾರ ರಾತ್ರಿ ಆಂಧ್ರಪ್ರದೇಶಕ್ಕೆ ಹೋಗಿದ್ದರು. ಪತಿ ಊರಿಗೆ ತೆರಳಿದ್ದರಿಂದ ದೂರುದಾರರು, ನೆರೆ ಮನೆಯ ಮಂಗಮ್ಮ ಎಂಬುವರನ್ನು ಮನೆಗೆ ಕರೆಸಿಕೊಂಡಿದ್ದರು.

‘ರಾತ್ರಿ 12.30ರ ಸುಮಾರಿಗೆ ಬಾಗಿಲು ಬಡಿದ ಸದ್ದಾಯಿತು. ಪರಿಚಿತರು ಇರಬಹುದೆಂದು ಬಾಗಿಲು ತೆರೆದೆ. ಏಕಾಏಕಿ ಒಳಗೆ ನುಗ್ಗಿದ ಚಂದ್ರಶೇಖರ್, ಮಂಗಮ್ಮ ಅವರನ್ನು ಬೆದರಿಸಿ ಹೊರಗೆ ಕಳುಹಿಸಿದ. ನಂತರ ನನ್ನ ಮೇಲೆ ಅತ್ಯಾಚಾರ ಎಸಗಿದ’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

‘ಪತಿ ಹಾಗೂ ಚಂದ್ರಶೇಖರ್‌ ನಡುವೆ ಮಂಗಳವಾರ ಮಧ್ಯಾಹ್ನ ಹಣಕಾಸಿನ ವಿಷಯವಾಗಿ ಜಗಳ ನಡೆದಿತ್ತು. ಇದಕ್ಕೆ ಪ್ರತೀಕಾರವಾಗಿ ಆರೋಪಿ ಈ ಕೃತ್ಯ ಎಸಗಿದ್ದಾನೆ. ಆತನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಮಹಿಳೆ ಒತ್ತಾಯಿಸಿದ್ದಾರೆ.
ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾಖಲೆ ಇಲ್ಲದ 1.5 ಕೆ.ಜಿ ಚಿನ್ನ :
ದಾಖಲೆ ಪತ್ರಗಳಿಲ್ಲದೆ ಕೇರಳಕ್ಕೆ ಸಾಗಿಸುತ್ತಿದ್ದ ಒಂದೂವರೆ ಕೆ.ಜಿ ಚಿನ್ನಾಭರಣ ಹಾಗೂ ₨ 4.7 ಲಕ್ಷ ನಗದನ್ನು ಚಿಕ್ಕಪೇಟೆ ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಕೇರಳದ ತ್ರಿಶೂರು ಜಿಲ್ಲೆಯ ವಿಜಯನ್ (50) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯು ಬುಧವಾರ ರಾತ್ರಿ ಮೈಸೂರು ಬ್ಯಾಂಕ್‌ ವೃತ್ತ ಸಮೀಪದ ಬುಳ್ಳಾಪುರ ಜಂಕ್ಷನ್‌ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ.

ಗಸ್ತಿನಲ್ಲಿದ್ದ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
‘ತ್ರಿಶೂರಿನ ಚಿನ್ನಾಭರಣ ವ್ಯಾಪಾರಿ ಪೌಲ್‌ಸನ್‌ ಎಂಬುವರ ಬಳಿ ಕೆಲಸ ಮಾಡುತ್ತೇನೆ. ಅವರ ಸೂಚನೆಯಂತೆ ನಗರದಲ್ಲಿ ಚಿನ್ನಾಭರಣ ಖರೀದಿ ಮಾಡಿ, ರಾಜ್ಯಕ್ಕೆ ಹಿಂದಿರುಗುತ್ತಿದ್ದೆ’ ಎಂದು ಆರೋಪಿ ಹೇಳಿಕೆ ಕೊಟ್ಟಿದ್ದಾನೆ. ಆದರೆ, ಒಡವೆ ಖರೀದಿಸಿರುವುದಕ್ಕೆ ಯಾವುದೇ ದಾಖಲೆಗಳಿಲ್ಲ. ದಾಖಲೆ ಒದಗಿಸಿ ಆಭರಣ ಕೊಂಡೊಯ್ಯುವಂತೆ ಸೂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.