ADVERTISEMENT

ಪತ್ನಿ–ಮಕ್ಕಳಿಗೆ ವಿಷ ಕುಡಿಸಿದ್ದ ಹೆಡ್‌ಕಾನ್‌ಸ್ಟೆಬಲ್ ಜೈಲಿಗೆ

​ಪ್ರಜಾವಾಣಿ ವಾರ್ತೆ
Published 26 ಮೇ 2017, 20:20 IST
Last Updated 26 ಮೇ 2017, 20:20 IST

ಬೆಂಗಳೂರು:  ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾವೂ ಆತ್ಮಹತ್ಯೆಗೆ ಯತ್ನಿಸಿದ್ದ ಸಿಎಆರ್ ಹೆಡ್‌ ಕಾನ್‌ಸ್ಟೆಬಲ್ ಸುಭಾಷ್‌ ಚಂದ್ರ ಅವರನ್ನು ಸಂಪಿಗೆಹಳ್ಳಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ವಿಷ ಕುಡಿದು ಅಸ್ವಸ್ಥಗೊಂಡಿದ್ದ ಸುಭಾಷ್, ಬ್ಯಾಪ್ಟಿಸ್ಟ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದರಿಂದ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದರು. ನಂತರ ನ್ಯಾಯಾಧೀಶರ ಆದೇಶದಂತೆ ಆರೋಪಿ ಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದರು.

₹ 30 ಲಕ್ಷ ಸಾಲ: ‘ಸ್ನೇಹಿತರು ಹಾಗೂ ಸಂಬಂಧಿಗಳಿಂದ ₹30 ಲಕ್ಷದವರೆಗೆ ಸಾಲ ಮಾಡಿದ್ದೆ. ಅದನ್ನು ತೀರಿಸಲು ಆಗಿರಲಿಲ್ಲ. ಸಾಲಗಾರರು ಮನೆ ಹತ್ತಿರ ಬಂದು ಗಲಾಟೆ ಮಾಡಲು ಆರಂಭಿಸಿದ್ದರು. ಈ ಕಾರಣಕ್ಕೆ ನಾನು–ಪತ್ನಿ ಇಬ್ಬರೂ ಸೇರಿ ಸಾಮೂಹಿಕ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದೆವು’ ಎಂದು ಸುಭಾಷ್ ಹೇಳಿಕೆ ಕೊಟ್ಟಿದ್ದಾಗಿ ಹಿರಿಯ ಅಧಿಕಾರಿಗಳು ಹೇಳಿದರು.

ADVERTISEMENT

‘ಮೇ 22ರ ರಾತ್ರಿ 10.30ರ ಸುಮಾರಿಗೆ ಎಲ್ಲರೂ ಒಟ್ಟಿಗೆ ಊಟ ಮಾಡಿದೆವು. ಈ ವೇಳೆ ಮಕ್ಕಳಿಗೆ ಕಾಣದಂತೆ ಪತ್ನಿ ನೀರಿಗೆ ಇಲಿ ಪಾಷಾಣ ಬೆರೆಸಿದಳು. ಊಟ ಮುಗಿದ ಬಳಿಕ ಆ ನೀರನ್ನು ಮೊದಲು ಮಕ್ಕಳಿಗೆ ಕುಡಿಸಿದೆವು. ನಂತರ ಪತ್ನಿಯೂ ಕುಡಿದಳು. ಕೊನೆಗೆ ನಾನೂ ಕುಡಿದಿದ್ದೆ.’
20 ನಿಮಿಷಗಳಲ್ಲೇ ಮಕ್ಕಳು ಕೊನೆಯುಸಿರೆಳೆದರು. 11.20ರ ಸುಮಾರಿಗೆ ಪತ್ನಿಯೂ ಅಸುನೀಗಿದಳು. ಬೆಳಗಿನ ಜಾವ 3 ಗಂಟೆಯಾದರೂ ಸ್ವಲ್ಪ ಎದೆ ಉರಿ ಬಿಟ್ಟರೆ ನನ್ನ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ.

ಹೀಗಾಗಿ, ಪಾಷಾಣ ಬೆರೆಸಿದ್ದ ನೀರನ್ನೇ ಸಿರೇಂಜ್‌ಗೆ ಹಾಕಿಕೊಂಡು, ಅದನ್ನು ಕೈಗೆ ಚುಚ್ಚಿಕೊಂಡಿದ್ದೆ. 7.30ರ ಸುಮಾರಿಗೆ ಅಣ್ಣ ಕೊಟ್ರೇಶಿ ಮನೆಗೆ ಬಂದು ನನ್ನನ್ನು ಆಸ್ಪತ್ರೆಗೆ ದಾಖಲಿಸಿದರು ಎಂದು ಸುಭಾಷ್ ಹೇಳಿಕೆ ನೀಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

ಕ್ರಿಕೆಟ್‌ ಬೆಟ್ಟಿಂಗ್‌ಗೆ ಸಾಲ
‘ಯಾವ ಕಾರಣಕ್ಕೆ ಅಷ್ಟೊಂದು ಸಾಲ ಮಾಡಿದ್ದೆ ಎಂಬ ಬಗ್ಗೆ ಸುಭಾಷ್ ಸ್ಪಷ್ಟವಾಗಿ ಹೇಳುತ್ತಿಲ್ಲ. ಆದರೆ, ಅವರು ಇತ್ತೀಚೆಗೆ ನಡೆದ ಐಪಿಎಲ್ ಕ್ರಿಕೆಟ್‌ ಪಂದ್ಯಗಳಲ್ಲಿ ಕೆಲವರ ಜತೆ ಬೆಟ್ಟಿಂಗ್ ಆಡಿದ್ದರು ಹಾಗೂ ಅದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ‘ಸುಭಾಷ್ ಖಿನ್ನತೆಗೆ ಒಳಗಾಗಿದ್ದಾರೆ. ವಿಚಾರಣೆಗೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ, ಪೊಲೀಸ್ ಕಸ್ಟಡಿಗೆ ಪಡೆಯುವ ಗೋಜಿಗೆ ಹೋಗಿಲ್ಲ. ಜೈಲಿನಲ್ಲಿ ಮೂರ್ನಾಲ್ಕು ದಿನ ವಿಶ್ರಾಂತಿ ಪಡೆದ ಬಳಿಕ, ವಶಕ್ಕೆ ಪಡೆದು ವಿಚಾರಣೆ ನಡೆಸಲು ನಿರ್ಧರಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.