ADVERTISEMENT

ಪೊಲೀಸರು ಬೈಕ್‌ ಜಪ್ತಿ ಮಾಡಿದ್ದಕ್ಕೆ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2018, 19:52 IST
Last Updated 25 ಫೆಬ್ರುವರಿ 2018, 19:52 IST
ಮಣಿ
ಮಣಿ   

ಬೆಂಗಳೂರು: ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಬೈಕ್‌ ಜಪ್ತಿ ಮಾಡಿದ ಮೈಕೊ ಲೇಔಟ್ ಸಂಚಾರ ಪೊಲೀಸರು, ವಾಹನವನ್ನು ಹಿಂದಿರುಗಿಸದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಮಣಿ (39) ಎಂಬುವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಮಿಳುನಾಡಿನ ಅವರು ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಪತ್ನಿ ಹಾಗೂ ಮಗನ ಜತೆಯಲ್ಲಿ ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ವಾಸವಿದ್ದರು. ಸಂಬಂಧಿಕರ ಮದುವೆಗಾಗಿ ಶನಿವಾರ ಬನ್ನೇರುಘಟ್ಟ ರಸ್ತೆಗೆ ಹೋಗಿದ್ದರು. ಗೋಪಾಲನ್ ಮಾಲ್‌ ಬಳಿ ರಾತ್ರಿ 10 ಗಂಟೆಗೆ ಅವರ ಬೈಕ್‌ ಅಡ್ಡಗಟ್ಟಿದ್ದ ಸಂಚಾರ ಪೊಲೀಸರು, ಕುಡಿದು ವಾಹನ ಓಡಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದರು. ಬಳಿಕ ಬೈಕ್‌ ಜಪ್ತಿ ಮಾಡಿ ಠಾಣೆಗೆ ತೆಗೆದುಕೊಂಡು ಹೋಗಿದ್ದರು.

ರಾತ್ರಿ 12 ಗಂಟೆಗೆ ಠಾಣೆಗೆ ಹೋಗಿದ್ದ ಮಣಿ, ‘ನಾನು ಪಾನಮತ್ತನಾಗಿಲ್ಲ. ಸುಳ್ಳು ಪ್ರಕರಣ ದಾಖಲಿಸಬೇಡಿ. ನನ್ನ ಬೈಕ್‌ ವಾಪಸ್‌ ಕೊಡಿ’ ಎಂದು ಕೋರಿದ್ದರು. ಅದಕ್ಕೆ ಸ್ಪಂದಿಸದ ಪೊಲೀಸರು, ಹಣ ಕೊಟ್ಟು ಬೈಕ್‌ ಬಿಡಿಸಿಕೊಂಡು ಹೋಗುವಂತೆ ಹೇಳಿದ್ದರು. ಆಗಲೇ ಮಣಿ, ಠಾಣೆ ಎದುರಿನ ರಸ್ತೆಯಲ್ಲಿ ನಿಂತುಕೊಂಡು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ಕೆಲ ಸೆಕೆಂಡ್‌ಗಳಲ್ಲೇ ದೇಹವನ್ನೆಲ್ಲ ಬೆಂಕಿ ಆವರಿಸಿಕೊಂಡಿತ್ತು. ಅದನ್ನು ಗಮನಿಸಿದ ಸ್ಥಳೀಯರು ಹಾಗೂ ಪೊಲೀಸರು, ಬೆಂಕಿ ಆರಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮಧ್ಯಾಹ್ನ ಮೃತಪಟ್ಟರು.

ADVERTISEMENT

ಘಟನೆ ಸಂಬಂಧ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ದೂರು ನೀಡಿರುವ ಮೃತರ ಸಹೋದರ ಸುಬ್ರಮಣಿ, ‘ಸಾವಿಗೆ ಮೈಕೊ ಲೇಔಟ್ ಸಂಚಾರ ಪೊಲೀಸರ ಕಿರುಕುಳವೇ ಕಾರಣ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ಒತ್ತಾಯಿಸಿದ್ದಾರೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಸುಬ್ರಮಣಿ, ‘ಪಾನಮತ್ತರಾಗದಿದ್ದರೂ ಸಹೋದರನ ಬೈಕನ್ನು ಪೊಲೀಸರು ಕಸಿದುಕೊಂಡಿದ್ದಾರೆ. ಅದನ್ನು ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಠಾಣೆಗೆ ಹೋದಾಗಲೂ ಬೈಕ್‌ ವಾಪಸ್‌ ಕೊಟ್ಟಿಲ್ಲ’ ಎಂದು ದೂರಿದರು.

‘ಮೈ ಮೇಲೆ ಪೆಟ್ರೋಲ್ ಸುರಿದುಕೊಂಡರೂ ಪೊಲೀಸರು ರಕ್ಷಣೆಗೆ ಹೋಗಿಲ್ಲ. ಬೆಂಕಿ ಹಚ್ಚಿಕೊಂಡು ದೇಹವೆಲ್ಲ ಸುಟ್ಟ ಬಳಿಕವೇ ಆಸ್ಪತ್ರೆಗೆ ಸೇರಿಸಿದ್ದಾರೆ. ಬೈಕ್‌ ಕಸಿದುಕೊಂಡ ಹಾಗೂ ಠಾಣೆಯಲ್ಲಿದ್ದ ಪೊಲೀಸರೆಲ್ಲರೂ ಸಾವಿಗೆ ಕಾರಣ. ಸೂಕ್ತ ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಆರ್‌.ಹಿತೇಂದ್ರ, ‘ಮದ್ಯ ಕುಡಿದು ವಾಹನ ಓಡಿಸುವವರ ಪತ್ತೆಗಾಗಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದರು. ಅದೇ ವೇಳೆ ಸ್ಥಳಕ್ಕೆ ಬಂದಿದ್ದ ಮಣಿ, ಮದ್ಯದ ತಪಾಸಣೆಗಾಗಿ ಆಲ್ಕೋಮೀಟರ್‌ ಊದಲು ನಿರಾಕರಿಸಿದ್ದರು. ಬೈಕ್‌ ತನ್ನದಲ್ಲ ಎಂದು ಹೇಳಿ ಅದನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದರು ಎಂಬುದು ಗೊತ್ತಾಗಿದೆ’ ಎಂದರು.

‘ಮಣಿ ಓಡಿಹೋಗಿದ್ದರಿಂದ ಪೊಲೀಸರು, ಬೈಕ್‌ನ್ನು ಠಾಣೆಗೆ ತಂದು ನಿಲ್ಲಿಸಿದ್ದರು. ಅದೇ ಠಾಣೆಗೆ ಬಂದು ಮಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಬಗ್ಗೆ ಸಂಬಂಧಿಕರು ದೂರು ನೀಡಿದ್ದಾರೆ. ತನಿಖೆ ನಡೆದ ಬಳಿಕ ಸತ್ಯಾಂಶ ತಿಳಿಯಲಿದೆ’ ಎಂದರು.

ಪ್ರಕರಣ ದಾಖಲಿಸದ ಪೊಲೀಸರು

ಪಾನಮತ್ತ ಚಾಲನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳದೆ ಪೊಲೀಸರು, ಮಣಿ ಅವರ ಬೈಕ್‌ ಜಪ್ತಿ ಮಾಡಿದ್ದರು ಎಂದು ಸುಬ್ರಮಣಿ ಆರೋಪಿಸಿದ್ದಾರೆ.

ಇಂಥ ಪ್ರಕರಣಗಳಲ್ಲಿ ಚಾಲನಾ ಪರವಾನಗಿ ಆಧರಿಸಿ ದಂಡ ವಿಧಿಸಿದ ಬಳಿಕವೇ ವಾಹನ ಜಪ್ತಿ ಮಾಡಬೇಕು. ಆ ನಂತರ, ಚಾಲಕರು ನ್ಯಾಯಾಲಯದಲ್ಲಿ ದಂಡ ಪಾವತಿಸಿ ವಾಹನ ಬಿಡಿಸಿಕೊಂಡು ಹೋಗಬೇಕು. ಆದರೆ, ಈ ಪ್ರಕರಣದಲ್ಲಿ ಪೊಲೀಸರು, ದಂಡ ಕಟ್ಟಿ ಎಂದು ಮೌಖಿಕವಾಗಿ ಹೇಳಿದ್ದಾರೆ ಎಂದು ಅವರು ದೂರಿದರು.

ಆರ್‌.ಹಿತೇಂದ್ರ, ‘ಬೈಕ್‌ ಬಿಟ್ಟು ಓಡಿಹೋಗಿದ್ದರಿಂದ ಪೊಲೀಸರು, ಠಾಣೆಗೆ ತಂದು ನಿಲ್ಲಿಸಿಕೊಂಡಿದ್ದರು. ಚಾಲಕರೇ ಇಲ್ಲದಿರುವಾಗ ಯಾರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕಿತ್ತು’ ಎಂದು ಪ್ರಶ್ನಿಸಿದರು.

ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪೊಲೀಸರು ತಪ್ಪು ಮಾಡಿದ್ದು ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ
– ಆರ್.ಹಿತೇಂದ್ರ, ಹೆಚ್ಚುವರಿ ಪೊಲೀಸ್ ಕಮಿಷನರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.