ADVERTISEMENT

ಪೊಲೀಸರ ದೌರ್ಜನ್ಯವೇ ಹಿಂಸಾಚಾರಕ್ಕೆ ಕಾರಣ

ಕಾರ್ಮಿಕರ ಪ್ರತಿಭಟನೆ ಕುರಿತು ತನಿಖೆ: ಮಾನವ ಹಕ್ಕುಗಳ ಆಯೋಗಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 27 ಮೇ 2016, 19:52 IST
Last Updated 27 ಮೇ 2016, 19:52 IST
ಬನ್ನೇರುಘಟ್ಟ ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಗಾರ್ಮೆಂಟ್ ಕಾರ್ಮಿಕರ ಮೇಲೆ ಲಾಠಿ ಪ್ರಹಾರ ನಡೆಸಿದ ಪೊಲೀಸ್ ಸಿಬ್ಬಂದಿ
ಬನ್ನೇರುಘಟ್ಟ ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಗಾರ್ಮೆಂಟ್ ಕಾರ್ಮಿಕರ ಮೇಲೆ ಲಾಠಿ ಪ್ರಹಾರ ನಡೆಸಿದ ಪೊಲೀಸ್ ಸಿಬ್ಬಂದಿ   

ಬೆಂಗಳೂರು: ಬೊಮ್ಮನಹಳ್ಳಿಯಲ್ಲಿ ಗಾರ್ಮೆಂಟ್‌ ಕಾರ್ಮಿಕರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು ಪೊಲೀಸರ ದೌರ್ಜನ್ಯವೇ ಮೂಲ ಕಾರಣವಾಗಿದ್ದು, ಈ ಕುರಿತು ಪ್ರತ್ಯೇಕ ತನಿಖೆ ನಡೆಸುವಂತೆ ಒತ್ತಾಯಿಸಿ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಪಿಯುಸಿಎಲ್‌ (ಪೀಪಲ್ಸ್‌ ಯೂನಿಯನ್ ಫಾರ್‌ ಸಿವಿಲ್ ಲಿಬರ್ಟಿಸ್) ಸದಸ್ಯ ರಾಮದಾಸ್‌ ರಾವ್ ತಿಳಿಸಿದರು.

ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಯುಸಿಎಲ್‌, ಮಂಥನ್ ಲಾ ಮತ್ತು ಲೈಂಗಿಕ ಶೋಷಣೆ ಹಾಗೂ ಸರ್ಕಾರದ ದಬ್ಬಾಳಿಕೆ ವಿರೋಧಿ ಮಹಿಳಾ ಸಂಘಟನೆ (ಡಬ್ಲ್ಯೂಎಸ್ಎಸ್) ಜಂಟಿಯಾಗಿ ತನಿಖೆ ನಡೆಸಿದ್ದು, ಕಾರ್ಮಿಕರ ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಪೂರ್ವಯೋಚಿತವಾಗಿ ಮಹಿಳೆಯರ ಮೇಲೆ ದಾಳಿ ಮಾಡಿದ್ದು ಸ್ಪಷ್ಟವಾಗಿ ವ್ಯಕ್ತವಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಪಿಎಫ್‌ ನೀತಿ ಖಂಡಿಸಿ ಏ.18ರಂದು ಪ್ರತಿಭಟನೆ ಶಾಂತಿಯುತವಾಗಿ ನಡೆದಿತ್ತು. 19 ರಂದು ಕೂಡ ಮೈಸೂರು ರಸ್ತೆ, ಬೊಮ್ಮನಹಳ್ಳಿ ಹಾಗೂ ಇತರೆಡೆ ಶಾಂತಿಯುತ ಹೋರಾಟ ನಡೆಯುತ್ತಿತ್ತು. ಮೈಸೂರು ರಸ್ತೆಯಲ್ಲಿ 4 ರಿಂದ 5 ಗಂಟೆ ವಾಹನ ಸಂಚಾರ ಸ್ಥಗಿತಗೊಂಡಿದ್ದರೂ ಪೊಲೀಸರು ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸಲಿಲ್ಲ. ಆದರೆ ಬೊಮ್ಮನಹಳ್ಳಿಯಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ದಾಳಿ ನಡೆಸಿದ ಪೊಲೀಸರು, ಮಹಿಳೆಯರ ಮೇಲೆ ಲಾಠಿ ಬೀಸಲು ಪ್ರಾರಂಭಿಸಿದರು. ನಂತರ ಪ್ರತಿಭಟನೆ ಹಿಂಸೆಯ ರೂಪ ಪಡೆಯಿತು ಎಂದು ವಿವರಿಸಿದರು.

ಪೊಲೀಸರ ಪೂರ್ವಯೋಚಿತ ದಾಳಿಯ ಪರಿಣಾಮವಾಗಿ ಹಿಂಸಾಚಾರ ನಡೆದಿದೆ. ಆದರೆ ಅದನ್ನು ಮರೆಮಾಚಿ ಕಾರ್ಮಿಕರು, ಸುತ್ತಮುತ್ತಲ ನಿವಾಸಿಗಳು, ವಿದ್ಯಾರ್ಥಿಗಳ ಮೇಲೆ ಕೊಲೆ ಯತ್ನದ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಅವರು ದೂರಿದರು.

ಹಣ ಇಲ್ಲದ ಕಾರಣ ಜಾಮೀನು ಪಡೆಯಲು ಸಾಧ್ಯವಾಗದೆ ಇನ್ನೂ ಅನೇಕರು ಜೈಲಿನಲ್ಲೇ ಇದ್ದಾರೆ. ಬಂಧನದ ಭೀತಿಯಿಂದ ಹಲವರು ಊರು ತೊರೆದಿದ್ದಾರೆ. ಎಲ್ಲರನ್ನು ಬಿಡುಗಡೆ ಮಾಡುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ. ಆದರೆ ಅದು ಕಾರ್ಯಗತವಾಗಿಲ್ಲ ಎಂದು ಹೇಳಿದರು.

ಬಂಧಿಸಿದ ಮಹಿಳೆಯರನ್ನು ಪೊಲೀಸರು ತಮ್ಮ ವಶದಲ್ಲಿ ಇಟ್ಟುಕೊಳ್ಳದೆ ‘ಪರಸ್ಪರ’ ಎಂಬ ಎನ್‌ಜಿಒ ವಶಕ್ಕೆ ನೀಡಿದ್ದರು.  ಸಿಆರ್‌ಪಿಸಿಗೆ ವಿರುದ್ಧವಾಗಿ ಪೊಲೀಸರು ನಡೆದುಕೊಂಡಿದ್ದಾರೆ ಎಂದರು.

ಪಿಯುಸಿಎಲ್, ಮಂಥನ್ ಲಾ ಹಾಗೂ ಡಬ್ಲ್ಯೂಎಸ್ಎಸ್ ಸದಸ್ಯರು ಕಾರ್ಮಿಕರು, ಸ್ಥಳೀಯರು ಮತ್ತು ಪೊಲೀಸರ ಹೇಳಿಕೆಗಳ ಆಧಾರದ ಮೇಲೆ  ವರದಿ ಸಿದ್ಧಪಡಿಸಿದೆ. ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಲಾಗಿದ್ದು, ಎರಡು ವಾರದಲ್ಲಿ ಅಂತಿಮ ವರದಿ ಹೊರ ಬರಲಿದೆ ಎಂದು ಹೇಳಿದರು.

ವರದಿಯನ್ನು ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಸಿ ಪ್ರತ್ಯೇಕ ತನಿಖೆ ನಡೆಸಲು ಆಗ್ರಹಿಸಲಾಗಿದೆ.  ಸರ್ಕಾರಕ್ಕೂ ಆ ವರದಿ ಸಲ್ಲಿಸಲಾಗುವುದು. ಮಹಿಳೆಯರ ಮೇಲೆ ಹಲ್ಲೆ ಮಾಡಿದ ಪೊಲೀಸ್‌ ಸಿಬ್ಬಂದಿಯನ್ನು ಕೆಲಸದಿಂದ ಅಮಾನತು ಮಾಡಬೇಕು. ಬಂಧನಕ್ಕೆ ಒಳಗಾಗಿರುವ ಎಲ್ಲ ಅಮಾಯಕರನ್ನು ಬಿಡುಗಡೆ ಮಾಡಿ ಅವರಿಗೆ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.

ಮಂಥನ್ ಲಾ ಹಾಗೂ ಡಬ್ಲ್ಯೂಎಸ್ಎಸ್ ಸದಸ್ಯೆ ಗ್ರೀಷ್ಮಾ ರಾಯ್, ಪಿಯುಸಿಎಲ್ ಸದಸ್ಯರಾದ ಕಿಶೋರ್‌ ಭಟ್‌, ಲೇಖಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.