ADVERTISEMENT

ಪೊಲೀಸ್‌ ಅಧಿಕಾರಿಗಳಿಗೆ ದಂಡ

ರಾಜ್ಯ ಮಾನವ ಹಕ್ಕುಗಳ ಆಯೋಗದ ಆದೇಶ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2015, 19:57 IST
Last Updated 6 ಅಕ್ಟೋಬರ್ 2015, 19:57 IST

ಬೆಂಗಳೂರು: ಕಳ್ಳತನದ ಸುಳ್ಳು ಆರೋಪ ಹೊರಿಸಿ ಅಕ್ರಮವಾಗಿ ಬಂಧನದಲ್ಲಿ ಇರಿಸಿದ್ದ ಆರೋಪದ ಮೇರೆಗೆ ನಾಲ್ವರು ಪೊಲೀಸ್‌ ಅಧಿಕಾರಿಗಳು ಒಟ್ಟು ₹ 25 ಸಾವಿರ ದಂಡ ಪಾವತಿಸುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗ ನಿರ್ದೇಶಿಸಿದೆ.

ಬೆಂಗಳೂರು ಮೆಟ್ರೊಪಾಲಿಟನ್‌ ಟಾಸ್ಕ್‌ ಫೋರ್ಸ್‌ನ (ಬಿಎಂಟಿಎಫ್‌) ಪೊಲೀಸ್‌ ವರಿಷ್ಠಾಧಿಕಾರಿ ಡಿ. ದೇವರಾಜು ₹ 8 ಸಾವಿರ, ಕೆ.ಆರ್‌. ಪುರಂ ಎಸಿಪಿಯಾಗಿದ್ದ ಎಚ್‌.ಸಿದ್ದಪ್ಪ (ಈಗ ನಿವೃತ್ತರು) ₹ 7 ಸಾವಿರ, ವಿದ್ಯಾರಣ್ಯಪುರಂ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಆರ್‌.ಪುನೀತ್‌ ಕುಮಾರ್‌ ₹ 6 ಸಾವಿರ, ಬಿಎಂಟಿಎಫ್‌ನ ಸಬ್‌ ಇನ್‌ಸ್ಪೆಕ್ಟರ್‌ ವಿ.ಆರ್.ದೀಪಕ್‌ ₹ 3 ಸಾವಿರ ಮತ್ತು ಎನ್‌.ಟಿ.ಪೇಟ್‌ ಸಿಸಿಬಿ ಕಚೇರಿಯ ಕಾನ್‌ಸ್ಟೆಬಲ್‌ ಹನುಮೇಶ್‌ ₹ 1 ಸಾವಿರ ದಂಡ ಪಾವತಿಸುವಂತೆ ಆದೇಶದಲ್ಲಿ ವಿವರಿಸಲಾಗಿದೆ.

ಆಯೋಗದ ಹಂಗಾಮಿ ಅಧ್ಯಕ್ಷರಾದ ಮೀರಾ ಜಿ. ಸಕ್ಸೇನಾ, ಸೆಪ್ಟೆಂಬರ್‌ 29ರಂದು ಈ ಆದೇಶ ನೀಡಿದ್ದು, ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಈ ಕುರಿತ ವರದಿಯನ್ನು ಮೂರು ತಿಂಗಳ ಒಳಗೆ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.

ಹಲಸೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಗರದ ನ್ಯೂ ಬಿಇಎಲ್‌ ರಸ್ತೆ ನಿವಾಸಿ ಓವೈಸಿ ಸಬೀರ್ ಹುಸೇನ್‌ (26) ಎಂಬುವವರನ್ನು ಪೊಲೀಸರು 2013ರ ಫೆಬ್ರುವರಿಯಲ್ಲಿ ಬಂಧಿಸಿದ್ದರು. ನಂತರ ಹುಸೇನ್‌ ಅವರನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಹಾಜರುಪಡಿಸಿದಾಗ, ‘ಸಿಸಿಬಿ ವಶದಲ್ಲಿದ್ದಾಗ ನನಗೆ ಪೊಲೀಸರು   ದೈಹಿಕ ಹಿಂಸೆ ನೀಡಿದ್ದರು’ ಎಂದು ಹುಸೇನ್‌ ಹೇಳಿಕೆ ನೀಡಿದ್ದರು. 

ಈ ಹೇಳಿಕೆ ಅನುಸಾರ ಮ್ಯಾಜಿಸ್ಟ್ರೇಟ್‌ ಅವರು ಹುಸೇನ್‌ ಅವರಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಸೂಚಿಸಿದ್ದರು. ಈ ವೇಳೆ ಹುಸೇನ್‌ ಅವರಿಗೆ ದೇಹದ ವಿವಿಧೆಡೆ ಗಂಭೀರವಾದ ಗಾಯಗಳಾಗಿರುವುದನ್ನು ವೈದ್ಯರು ಗುರುತಿಸಿದ್ದರು.

ನಂತರದ ವಿಚಾರಣೆಯಲ್ಲಿ ಹುಸೇನ್‌ ಕಳ್ಳತನ ಎಸಗಿದ್ದಾರೆ ಎಂಬುದನ್ನು ಸಾಬೀತುಪಡಿಸುವಲ್ಲಿ ಪೊಲೀಸರು ವಿಫಲರಾಗಿದ್ದರು.
‘ಪೊಲೀಸರು ನನ್ನ ಮನೆಬಾಗಿಲು ಮುರಿದು ಒಳ ನುಗ್ಗಿ ನನ್ನನ್ನು ಥಳಿಸಿ ಅಕ್ರಮ ಬಂಧನದಲ್ಲಿ ಇರಿಸಿದ್ದರು ಮತ್ತು ನನ್ನ ಮೇಲೆ ಸುಳ್ಳು ಆರೋಪ ಹೊರಿಸಿ ದೈಹಿಕ ಹಿಂಸೆ ನೀಡಿದ್ದರು’   ಎಂದು ಹುಸೇನ್ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಹುಸೇನ್‌ ಅವರ ದೂರಿನ ಅನ್ವಯ ವಿಚಾರಣೆ ನಡೆಸಿದ ಆಯೋಗವು, ‘ಇದು ಪೊಲೀಸರ ನಿರ್ಲಕ್ಷ್ಯ ಧೋರಣೆ
ಯನ್ನು ಎತ್ತಿ ತೋರಿಸುತ್ತದೆ ಹಾಗೂ ಅವರ ಇಂತಹ ವರ್ತನೆ ಮಾನವ ಹಕ್ಕುಗಳ ರಕ್ಷಣೆ ಕಾಯ್ದೆ–1983ರ ಕಲಂ 18ಕ್ಕೆ ಸಂಪೂರ್ಣ ವಿರುದ್ಧವಾಗಿದೆ’ ಎಂದು ಆಯೋಗವು ಆದೇಶದಲ್ಲಿ ವಿವರಿಸಿದೆ.

ಮುಖ್ಯಾಂಶಗಳು
* ಬೆಂಗಳೂರು ಮೆಟ್ರೊಪಾಲಿಟನ್‌ ಟಾಸ್ಕ್‌ ಫೋರ್ಸ್‌ನ ಅಧಿಕಾರಿಗಳ ವಿರುದ್ಧ ಕ್ರಮ

* ಪೊಲೀಸರು   ದೈಹಿಕ ಹಿಂಸೆ ನೀಡಿದ್ದರು ಎಂದಿದ್ದ ಕಳ್ಳತನದ ಆರೋಪಿ
* ಪೊಲೀಸರ ನಿರ್ಲಕ್ಷ್ಯ ಧೋರಣೆ ಎತ್ತಿ ತೋರಿಸುತ್ತದೆ ಎಂದ ಆಯೋಗ

ಅಂಕಿ ಅಂಶ
₹25 ಸಾವಿರ ದಂಡದ ಒಟ್ಟು ಮೊತ್ತ
₹8 ಸಾವಿರ ಗರಿಷ್ಠ ದಂಡ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT