ADVERTISEMENT

ಪ್ರೊ.ಭಗವಾನ್‌ ವಿರುದ್ಧ ಆನ್‌ಲೈನ್‌ ಆಂದೋಲನ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2015, 19:45 IST
Last Updated 22 ಸೆಪ್ಟೆಂಬರ್ 2015, 19:45 IST

ಬೆಂಗಳೂರು: ಚಿಂತಕ ಪ್ರೊ.ಕೆ.ಎಸ್. ಭಗವಾನ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಶಸ್ತಿ ನೀಡಿದ್ದನ್ನು ವಿರೋಧಿಸಿ ಆನ್‌ಲೈನ್‌ನಲ್ಲಿ ಸಹಿ ಸಂಗ್ರಹ ಚಳವಳಿ ಆರಂಭಿಸಲಾಗಿದೆ.

change.org ವೆಬ್‌ಸೈಟ್‌ನಲ್ಲಿ ಈ ಸಂಬಂಧ ಆರಂಭಿಸಿರುವ ಆಂದೋಲನದಲ್ಲಿ ಮೊದಲ ದಿನವೇ ಎಂಟು ಸಾವಿರ ಜನ ಸಹಿ ಹಾಕಿದ್ದಾರೆ. ‘ಬಾಯಿಗೆ ಬಂದಂತೆ ಅರ್ಥವಿಲ್ಲದ ಮಾತುಗಳನ್ನಾಡುವ ಭಗವಾನ್‌ ಅವರ ಬಗೆಗೆ ರಾಜ್ಯದ ಜನತೆಗೆ ಒಳ್ಳೆಯ ಅಭಿಪ್ರಾಯವೇ ಇಲ್ಲ. ಈ ಸತ್ಯಾಂಶ ಗೊತ್ತಿದ್ದರೂ ಹಿಂದೂಗಳ ಭಾವನೆಗೆ ವಿರುದ್ಧವಾಗಿ ಸಿದ್ದರಾಮಯ್ಯ ಅವರ ಸರ್ಕಾರ ಅವರಿಗೆ ಪ್ರಶಸ್ತಿ ಘೋಷಣೆ ಆಗುವಂತೆ ನೋಡಿಕೊಂಡಿದೆ’ ಎಂದು ಕಿಡಿ ಕಾರಲಾಗಿದೆ.

‘ಭಗವಾನ್‌ ಅವರಿಗೆ ಈ ಪ್ರಶಸ್ತಿಯನ್ನು ಘೋಷಣೆ ಮಾಡಿರುವುದು ಅವರು ಬಾಯಿ ಹರಿಬಿಟ್ಟು ಹಿಂದೂಗಳ ಮನ ನೋಯಿಸಿರುವ ಕಾರಣಕ್ಕಾಗಿಯೇ ಹೊರತು ಅವರ ವಿದ್ವತ್ತಿಗಲ್ಲ. ಪ್ರಶಸ್ತಿ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡುವ ಮೂಲಕ ಅಕಾಡೆಮಿ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಬೇಕು. ಇದು ಕನ್ನಡಿಗರ ಹಕ್ಕುಬದ್ಧ ಒತ್ತಾಯವಾಗಿದೆ’ ಎಂದು ವಿವರಿಸಲಾಗಿದೆ.

‘ಭಗವಾನ್‌ ಅವರಿಗೆ ಪ್ರಶಸ್ತಿ ಘೋಷಣೆ ಮಾಡಿದ್ದು ರಾಜ್ಯದ ಸಾಹಿತ್ಯಿಕ ಹಾಗೂ ಶೈಕ್ಷಣಿಕ ರಂಗದಲ್ಲಿ ಒಂದು ಅನರ್ಥಕಾರಿ ಬೆಳವಣಿಗೆ. ಸಾಹಿತ್ಯ ಅಕಾಡೆಮಿಯಲ್ಲೂ ಈ ಘಟನೆ ಕಪ್ಪುಚುಕ್ಕೆಯಾಗಿ ಉಳಿಯಲಿದೆ. ಸಮಾಜಘಾತುಕ ಶಕ್ತಿಗೆ ಸಾಹಿತ್ಯ ಅಕಾಡೆಮಿಯಂತಹ ಪ್ರತಿಷ್ಠಿತ ಸಂಸ್ಥೆ ಪ್ರಶಸ್ತಿ ನೀಡಿದ್ದು ಒಳ್ಳೆಯ ಬೆಳವಣಿಗೆ ಅಲ್ಲ’ ಎಂದು ಅಭಿಪ್ರಾಯಪಡಲಾಗಿದೆ.
‘ರಾಜ್ಯ ಸರ್ಕಾರದ ಹಿಟ್ಲರ್‌ ಆಡಳಿತದ ಧೋರಣೆ ಇದಾಗಿದೆ.

ಆಡಳಿತ ನಡೆಸಲು ಸಿಕ್ಕ ಅಧಿಕಾರ ಪ್ರಶ್ನಾತೀತ ಎನ್ನುವ ಭಾವದಲ್ಲಿ ಸರ್ಕಾರ ಇದ್ದಂತಿದೆ. ಸಾಮಾನ್ಯ ಜನರ ಶಕ್ತಿಯನ್ನು ತೋರಲು ಇದು ಸುಸಮಯ’ ಎಂದು ತಿಳಿಸಲಾಗಿದೆ. ‘ಭಗವಾನ್‌ ಅವರಿಗೆ ಯಾವ ಆಧಾರದ ಮೇಲೆ ಪ್ರಶಸ್ತಿ ನೀಡಲಾಗಿದೆ, ಕೋಮು ಸೌಹಾರ್ದ ಕದಡುತ್ತಿರುವ, ಶಾಂತವಾಗಿರುವ ಹಿಂದೂಗಳ ವಿರುದ್ಧ ಬಾಲಿಶ ಹೇಳಿಕೆ ನೀಡುತ್ತಿರುವ ಈ ವ್ಯಕ್ತಿ ಪ್ರಶಸ್ತಿಗೆ ಅರ್ಹರೇ ಎಂಬ ಪ್ರಶ್ನೆಗಳಿಗೆ ಸರ್ಕಾರ ಹಾಗೂ ಅಕಾಡೆಮಿ ಉತ್ತರ ನೀಡಬೇಕು’ ಎಂದು ಆಗ್ರಹಿಸಲಾಗಿದೆ.

‘ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಬಹುತೇಕ ಹೆಸರುಗಳು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಅಷ್ಟೇನು ಮಹತ್ವದ ಕೊಡುಗೆ ನೀಡದವರೂ ಪಟ್ಟಿಯಲ್ಲಿದ್ದಾರೆ. ಇದರಿಂದ ಅಕಾಡೆಮಿ ಪ್ರತಿಷ್ಠೆಗೆ ಪೆಟ್ಟು ಬೀಳಲಿದೆ. ತಾರತಮ್ಯ ಮಾಡದೆ ಪುರಸ್ಕೃತರ ಪಟ್ಟಿ ಸಿದ್ಧಪಡಿಸಿದ ಬಗೆಗೆ ಸಂಶಯ ಉಂಟಾಗಿದೆ. ಪ್ರಶಸ್ತಿಗೆ ಪಾತ್ರರಾದ ಎಲ್ಲ ವ್ಯಕ್ತಿಗಳೂ ಒಂದೇ ಸಿದ್ಧಾಂತದ ಹಿನ್ನೆಲೆ ಹೊಂದಿದವರು.

ಪರದೆ ಹಿಂದೆ ಬೇರೇನೋ ನಡೆದಿದೆ ಎಂಬ ಸಂಶಯ ಇದರಿಂದ ಬಲವಾಗಿದೆ’ ಎಂದು ವಿವರಿಸಲಾಗಿದೆ.
‘ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪರಿಷ್ಕರಿಸಬೇಕು ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿಯಲ್ಲಿ ಸರ್ಕಾರದ ಹಸ್ತಕ್ಷೇಪ ತಪ್ಪಿಸಲು ಕೇಂದ್ರ ಸಾಹಿತ್ಯ ಅಕಾಡೆಮಿ ಮಧ್ಯೆ ಪ್ರವೇಶಿಸಬೇಕು’ ಎಂದು ಆಗ್ರಹಿಸಲಾಗಿದೆ.

ADVERTISEMENT

ಸಾಹಿತ್ಯ ಅಕಾಡೆಮಿಗೆ ಬೆದರಿಕೆ ಕರೆ
ಬೆಂಗಳೂರು: ಹಿರಿಯ ಸಾಹಿತಿ ಪ್ರೊ.ಕೆ.ಎಸ್. ಭಗವಾನ್‌ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ನೀಡಿರುವುದನ್ನು ವಿರೋಧಿಸಿ  ದುಷ್ಕರ್ಮಿಗಳು, ಅಕಾಡೆಮಿಯ ಕಚೇರಿಗೆ ಸೋಮವಾರ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ.
ಈ ಸಂಬಂಧ ಅಕಾಡೆಮಿಯ ರಿಜಿಸ್ಟ್ರಾರ್‌ ಸಿ.ಎಚ್.ಭಾಗ್ಯ ಅವರು ಎಸ್.ಜೆ.ಪಾರ್ಕ್‌ ಠಾಣೆಗೆ ದೂರು ನೀಡಿದ್ದಾರೆ.

‘ಬೆಳಿಗ್ಗೆ 10 ಗಂಟೆ ಸುಮಾರಿಗೆ ದುಷ್ಕರ್ಮಿ ಕರೆ ಮಾಡಿದ್ದ. ಆತ, ‘ಭಗವಾನ್‌ ಅವರು ಹಿಂದೂಗಳು ಮತ್ತು ಹಿಂದೂ ದೇವರುಗಳ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದಾರೆ. ಈ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡಿದ್ದಾರೆ. ಅಂತಹವರಿಗೆ ಅಕಾಡೆಮಿಯ ಪ್ರಶಸ್ತಿ ನೀಡಿರುವುದು ಸರಿಯಲ್ಲ.  ಹಿಂದೂ ವಿರೋಧಿಯನ್ನು ಹೇಗೆ ಪ್ರಶಸ್ತಿಗೆ ಆಯ್ಕೆ ಮಾಡಿದಿರಿ. ಮುಂದೆ ಏನಾದರೂ ಹೆಚ್ಚೂ ಕಡಿಮೆ ಆದರೆ ನಾವು ಜವಾಬ್ದಾರರಲ್ಲ ಎಂದು ಕರೆ ಸ್ಥಗಿತಗೊಳಿಸಿದ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

‘ಕರೆ ಮಾಡಿದ್ದ ವ್ಯಕ್ತಿ ತಾನು ರಘುಪತಿ, ಹುಬ್ಬಳ್ಳಿಯಿಂದ ಕರೆ ಮಾಡುತ್ತಿದ್ದೇನೆ ಎಂದು ಹೇಳಿದ್ದ. ಆತ ಮಂಗಳೂರು ಭಾಷೆ ಮಾತನಾಡುತ್ತಿದ್ದ. ದುಷ್ಕರ್ಮಿಗಳು ಕಚೇರಿಯ ಇ–ಮೇಲ್‌ಗೆ ಬೆದರಿಕೆ ಸಂದೇಶ ಕಳುಹಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಕರೆ ಮಾಡಿರುವ ವ್ಯಕ್ತಿಯ ಮೊಬೈಲ್ ಸಂಖ್ಯೆ, ಇ–ಮೇಲ್‌ ವಿವರಗಳನ್ನು ಅಕಾಡೆಮಿಯ ಸಿಬ್ಬಂದಿಯಿಂದ ಪಡೆಯಲಾಗಿದೆ. ಭದ್ರತೆಗಾಗಿ ಅಕಾಡೆಮಿಯ ಕಚೇರಿಗೆ ಸಿಬ್ಬಂದಿ ನೇಮಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.