ADVERTISEMENT

ಬಂಡೀಪುರದಲ್ಲಿ ಅಕ್ರಮ ರೆಸಾರ್ಟ್ ಹಾವಳಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2014, 19:48 IST
Last Updated 20 ಏಪ್ರಿಲ್ 2014, 19:48 IST
ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಹುಂಡೀಪುರ ಬರ್ಗಿಕಟ್ಟೆ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ‘ವಾಣಿಜ್ಯ ನಿಸರ್ಗ ಆಯುರ್ವೇದ ಪ್ರವಾಸೋದ್ಯಮ’ ಹೆಸರಿನ ಅಕ್ರಮ ರೆಸಾರ್ಟ್‌
ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಹುಂಡೀಪುರ ಬರ್ಗಿಕಟ್ಟೆ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ‘ವಾಣಿಜ್ಯ ನಿಸರ್ಗ ಆಯುರ್ವೇದ ಪ್ರವಾಸೋದ್ಯಮ’ ಹೆಸರಿನ ಅಕ್ರಮ ರೆಸಾರ್ಟ್‌   

ಬೆಂಗಳೂರು: ‘ರಾಜ್ಯದ ಪ್ರಮುಖ ವನ್ಯಜೀವಿ ಧಾಮಗಳಲ್ಲಿ ಒಂದಾದ ಬಂಡೀಪುರ ಹುಲಿ ಅಭಯಾರಣ್ಯದ ಹೊರವಲಯದಲ್ಲಿ ಅಕ್ರಮ ರೆಸಾರ್ಟ್‌ ತಲೆ ಎತ್ತಲಾರಂಭಿಸಿವೆ. ಕಟ್ಟಡ ನಿರ್ಮಾಣ ಆಗುತ್ತಿದ್ದರೂ ಅರಣ್ಯ ಇಲಾಖೆ ಮೌನ ತಾಳಿದೆ’ ಎಂದು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಂಡೀಪುರ ಜೈವಿಕ ಸೂಕ್ಷ್ಮ ಪ್ರದೇಶದಲ್ಲಿ ಹೋಟೆಲ್‌ಗಳು ಹಾಗೂ ರೆಸಾರ್ಟ್‌ಗಳ ಸ್ಥಾಪನೆಯನ್ನು ನಿರ್ಬಂಧಿಸಿ ಕೇಂದ್ರ ಪರಿಸರ ಹಾಗೂ ಅರಣ್ಯ ಇಲಾಖೆಯು 2012ರ ಅಕ್ಟೋಬರ್‌ನಲ್ಲಿ (ಎಸ್‌.ಒ.2364) ಅಧಿಸೂಚನೆ ಹೊರಡಿಸಿತ್ತು. ಅಧಿಸೂಚನೆ ಹೊರಡಿಸಿದ ಬಳಿಕವೇ ತಮಿಳುನಾಡಿನ ಮಧುಮಲೆ ಹಾಗೂ ಬಂಡೀಪುರವನ್ನು ಬೆಸೆಯುವ ಕುಂದಕೆರೆ ವನ್ಯಜೀವಿ ವಲಯದ ಬಾಚಹಳ್ಳಿ, ಚಿಕ್ಕ ಎಲಚಟ್ಟಿ ಹಾಗೂ ಕಣಿಯನಪುರ ಗ್ರಾಮಗಳ ವ್ಯಾಪ್ತಿಯ ವನ್ಯಜೀವಿಗಳ ವಲಸೆ ಮಾರ್ಗದಲ್ಲೇ ಅಕ್ರಮ ರೆಸಾರ್ಟ್‌ಗಳು ತಲೆ ಎತ್ತಿವೆ ಎಂದು ಪರಿಸರವಾದಿಗಳು ಆಪಾದಿಸುತ್ತಾರೆ.

‘ಕುಂದಕೆರೆ ವನ್ಯಜೀವಿ ವಲಯದ ಬಾಚಹಳ್ಳಿ ಗ್ರಾಮದ ಬಳಿ, ಹುಂಡೀಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬರ್ಗಿಕಟ್ಟೆ ಪ್ರದೇಶದಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಕಟ್ಟಡ ನಿರ್ಮಾಣ ಕಾರ್ಯ ಎಡೆಬಿಡದೆ ಸಾಗಿದೆ. ಇದಕ್ಕಾಗಿ ಜೆಸಿಬಿ ವಾಹನ, ಟ್ರ್ಯಾಕ್ಟರ್, ಕಾಂಕ್ರೀಟ್ ಮಿಕ್ಸರ್ ಮುಂತಾದ ಉಪಕರಣಗಳನ್ನು ಬಳಕೆ ಮಾಡಿದ್ದು, ‘ವಾಣಿಜ್ಯ ನಿಸರ್ಗ ಆಯುರ್ವೇದ ಪ್ರವಾಸೋದ್ಯಮ’ ಎಂಬ ಹೆಸರನ್ನೂ ನೀಡಲಾಗಿದೆ’ ಎಂದು ದೂರಿದ್ದಾರೆ. 

‘ಈ ಜಮೀನಿನಲ್ಲಿ ಸ್ವಂತ ಉದ್ದೇಶಕ್ಕಾಗಿ ವಾಸದ ಮನೆಗಳನ್ನು ಕಟ್ಟಿಕೊಳ್ಳಲು ಮಾತ್ರ ಗ್ರಾಮ ಪಂಚಾಯ್ತಿ ಅನುಮತಿ ನೀಡಿದೆ. ವಾಣಿಜ್ಯ ಉದ್ದೇಶಕ್ಕಾಗಿ ಕಟ್ಟಡ ನಿರ್ಮಿಸಲು ಗ್ರಾಮ ಪಂಚಾಯ್ತಿ ಹಾಗೂ ಅರಣ್ಯ ಇಲಾಖೆ ಅನುಮತಿ ನೀಡಿಲ್ಲ’ ಎಂದು ಅವರು ಗಮನ ಸೆಳೆದಿದ್ದಾರೆ.

‘ಬಂಡೀಪುರದ ಸುತ್ತಮುತ್ತಲ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲಾಗಿದೆ. ಇಲ್ಲಿ ಹೊಸ ರೆಸಾರ್ಟ್‌ ನಿರ್ಮಾಣಕ್ಕೆ ಅವಕಾಶ ಇಲ್ಲ. ನಿರ್ಮಾಣ ಕಾಮಗಾರಿ ಪರಿಸರ ಸೂಕ್ಷ್ಮ ವಲಯದ ನಿಯಮ 3ರ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಅಲ್ಲದೇ ಈಗಾಗಲೇ ಇರುವ ರೆಸಾರ್ಟ್‌ಗಳು ಯಾವುದೇ ಹೊಸ ಕಟ್ಟಡ ನಿರ್ಮಿಸಲು ಪರಿಸರ ಸೂಕ್ಷ್ಮ ವಲಯದ ಉಸ್ತುವಾರಿ ಸಮಿತಿಯ ಅನುಮತಿ ಪಡೆಯುವುದು ಅನಿವಾರ್ಯ’ ಎಂದು ಅವರು ತಿಳಿಸಿದ್ದಾರೆ.

‘ಕುಂದಕೆರೆ ವನ್ಯಜೀವಿ ವಲಯದ ಚಿಕ್ಕ ಎಲಚಟ್ಟಿ ಗ್ರಾಮದ ಬಳಿ ‘ಅಶ್ವಿನಿ ಆಯುರ್ವೇದಿಕ್ ಜಂಗಲ್ ರೆಸಾರ್ಟ್‌’ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತೀಚೆಗೆ ದಾಳಿ ನಡೆಸಿ ಮುಚ್ಚಿಸಿದ್ದರು. ಈ ಪ್ರಕರಣದ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಇಲ್ಲಿಯೂ ವಾಸದ ಉದ್ದೇಶಕ್ಕಾಗಿ ಅನುಮತಿ ಪಡೆದು ಅಕ್ರಮವಾಗಿ ರೆಸಾರ್ಟ್ ನಡೆಸಲಾಗುತ್ತಿತ್ತು’ ಎಂದು ಮತ್ತೊಬ್ಬ ಪರಿಸರ ಪ್ರೇಮಿ ಆರೋಪಿಸಿದ್ದಾರೆ.

‘ಅಕ್ರಮ ರೆಸಾರ್ಟ್‌ಗಳು ಕುಂದಕೆರೆ ವಲಯದ ಅರಣ್ಯಾಧಿಕಾರಿಗಳ ಕಚೇರಿಯ ಸಮೀಪದಲ್ಲೇ ನಿರ್ಮಾಣಗೊಂಡಿವೆ. ಆದರೆ, ವಲಯ ಅರಣ್ಯಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಅದರಲ್ಲೂ ಈ ರೆಸಾರ್ಟ್‌ ಇರುವುದು ವಲಯ ಅರಣ್ಯಾಧಿಕಾರಿಗಳ ಕಚೇರಿಯ ಎದುರಿನಲ್ಲೇ. ಇಲಾಖೆಯ ಅಧಿಕಾರಿಗಳ ಸಹಾಯವಿಲ್ಲದೆ ಅಕ್ರಮಗಳು ನಡೆಯುವುದು ಅಸಾಧ್ಯ’ ಎಂದು ಅವರು ದೂರಿದ್ದಾರೆ.

‘ಕುಂದಕೆರೆ ವಲಯದಲ್ಲಿ ಅಕ್ರಮ ರೆಸಾರ್ಟ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಸ್ಥಳೀಯ ಅಧಿಕಾರಿಯೊಬ್ಬರು ಕೂಡ ರೆಸಾರ್ಟ್ ಆರಂಭಿಸಲು ಕಾರೆಮಾಳ ಗ್ರಾಮದಲ್ಲಿ ಪರಿಶಿಷ್ಟ ಪಂಗಡದವರಿಗೆ ಸೇರಿದ ಜಮೀನನ್ನು ಖರೀದಿಸಿದ್ದಾರೆ. ಈ  ಕುರಿತು ಇಲಾಖಾ ತನಿಖೆ ನಡೆಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ವಾಣಿಜ್ಯ ಉದ್ದೇಶವಿಲ್ಲ
ಬಾಚಹಳ್ಳಿ ಗ್ರಾಮದ ಬಳಿ ರೆಸಾರ್ಟ್‌ ನಿರ್ಮಾಣ ನಡೆಯುತ್ತಿಲ್ಲ. ಖಾಸಗಿಯವರಿಗೆ ಸೇರಿದ ೧೧.೩೦ ಎಕರೆ ಜಮೀನಿನಲ್ಲಿ ಹಳೆಯ ಮನೆಯಿತ್ತು. ಅದನ್ನು ಒಡೆದು ಸ್ವಂತ ವಾಸಕ್ಕಾಗಿ ಹೊಸ ಮನೆ ಕಟ್ಟುತ್ತಿದ್ದಾರೆ. ರೆಸಾರ್ಟ್‌ ನಿರ್ಮಾಣವಾಗುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ನಿಲ್ಲಿಸಿದ್ದೇವೆ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೂ ವರದಿ ನೀಡಿದ್ದೇವೆ.
– ಕಾಂತರಾಜ್‌,  ನಿರ್ದೇಶಕರು, ಬಂಡೀಪುರ ಹುಲಿ ಅಭಯಾರಣ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT