ADVERTISEMENT

ಬಾಲಕಿ ಮೇಲೆ ಅತ್ಯಾಚಾರ ಆರೋಪಿಗೆ 10 ವರ್ಷ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2016, 20:05 IST
Last Updated 2 ಡಿಸೆಂಬರ್ 2016, 20:05 IST

ಬೆಂಗಳೂರು: ಹದಿನೇಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದ ಕಾರ್ತಿಕ್‌ (21) ಎಂಬಾತನಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ನಗರದ 55ನೇ ಸಿಟಿ ಸಿವಿಲ್‌ ಕೋರ್ಟ್‌ ಶುಕ್ರವಾರ ಆದೇಶ ಹೊರಡಿಸಿದೆ.

ಮಲ್ಲೇಶ್ವರದಲ್ಲಿ ವಾಸವಿದ್ದ ಕಾರ್ತಿಕ್‌, ತನ್ನ ಮನೆ ಸಮೀಪವೇ ಪೋಷಕರೊಂದಿಗೆ ನೆಲೆಸಿದ್ದ 17 ವರ್ಷದ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ. ಪ್ರಥಮ ಪಿಯುಸಿ ಓದುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಸೆ. 2ರಂದು ತಮಿಳುನಾಡಿಗೆ ಕರೆದೊಯ್ದಿದ್ದ. ಬಳಿಕ ಅಲ್ಲಿಯ ಸಂಬಂಧಿ ಮನೆಯಲ್ಲಿ ಬಾಲಕಿಯನ್ನು ಅಕ್ರಮ ಬಂಧನದಲ್ಲಿಟ್ಟು ನಿರಂತರವಾಗಿ ಅತ್ಯಾಚಾರ ಎಸಗಿದ್ದ.

ಬಾಲಕಿ ಕಾಣೆಯಾದ ಬಗ್ಗೆ ಪೋಷಕರು ಮಲ್ಲೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದರು.  ತನಿಖೆ ಕೈಗೊಂಡಿದ್ದ ಪೊಲೀಸರು, ತಮಿಳುನಾಡಿನಲ್ಲಿದ್ದ ಬಾಲಕಿಯನ್ನು ರಕ್ಷಿಸಿ ಪೋಷಕರ ಸುಪರ್ದಿಗೆ ಒಪ್ಪಿಸಿದ್ದರು. ಜತೆಗೆ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ರಾಜಲಕ್ಷ್ಮೀ ಹೆಗಡೆ, ಆರೋಪಿ ಮೇಲಿನ ಆರೋಪಗಳು ಸಾಬೀತಾಗಿದ್ದರಿಂದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹2 ಸಾವಿರ ದಂಡ ವಿಧಿಸಿದ್ದಾರೆ.

ADVERTISEMENT

ಸರ್ಕಾರದ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌್ ಎಸ್‌.ಎಂ.ಹಿರೇಮನಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.