ADVERTISEMENT

ಬಿಜೆಪಿಯಲ್ಲಿ ಒಗ್ಗಟ್ಟಿನ ಸಂಕಲ್ಪ

ಅನಂತಕುಮಾರ್‌, ಯಡಿಯೂರಪ್ಪಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 19:59 IST
Last Updated 1 ಸೆಪ್ಟೆಂಬರ್ 2014, 19:59 IST

ಬೆಂಗಳೂರು: ‘ಹಿಂದೆ ಆಗಿರುವ ತಪ್ಪುಗಳನ್ನು ಮರೆತು ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಒಗ್ಗಟ್ಟಿ­ನಿಂದ ಕೆಲಸ ಮಾಡುವ ಸಂಕಲ್ಪವನ್ನು ಮಾಡುತ್ತೇವೆ’ ಎಂದು ಬಿಜೆಪಿಯ ಹಿರಿಯ ಮುಖಂಡರಾದ ಬಿ.ಎಸ್‌.ಯಡಿ­ಯೂರಪ್ಪ ಮತ್ತು ಅನಂತಕುಮಾರ್‌ ಹೇಳಿದರು.

ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ಎಸ್‌. ಯಡಿ­ಯೂ­ರಪ್ಪ ಹಾಗೂ ಸಂಸದೀಯ ಮಂಡಳಿಯ ಸಮಿತಿಯ ಸದಸ್ಯರಾಗಿ ಪುನರಾಯ್ಕೆಗೊಂಡಿರುವ ಅನಂತ ಕುಮಾರ್‌ ಅವರಿಗೆ  ಪಕ್ಷದ ಬೆಂಗಳೂರು ನಗರ ಮತ್ತು ನಗರ ಜಿಲ್ಲಾ ಘಟಕವು ಸೋಮವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಇಬ್ಬರೂ ಮುಖಂ­ಡರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

‘ಸತತ ಪರಿಶ್ರಮ, ನಿರಂತರ ಹೋರಾಟ­­­ಗಳಿಂದ ರಾಜ್ಯ­ದಲ್ಲಿ ಪಕ್ಷಕ್ಕೆ ಈ ಆಯಾಮ ದೊರೆತಿದೆ. ಕರ್ನಾಟಕದಲ್ಲಿ ಪಕ್ಷವನ್ನು ಇಷ್ಟು ಎತ್ತರಕ್ಕೆ ಬೆಳೆಸುವಲ್ಲಿ ಯಡಿಯೂರಪ್ಪ­ನವರ ಪಾತ್ರ ಹೆಚ್ಚಿದೆ ಎಂದು ಮನದಾಳದಿಂದ ಹೇಳುತ್ತೇನೆ’ ಎಂದು ಅನಂತಕುಮಾರ್‌ ಹೇಳಿದರು.
‘ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜನರಲ್ಲಿ ಭ್ರಮನಿರಸನ ಉಂಟು ಮಾಡಿದೆ. ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿದೆ’ ಎಂದು  ದೂರಿದರು. ‘ನರೇಂದ್ರ ಮೋದಿ ಹಾಗೂ ಅಮಿತ್‌ ಷಾ ಅವರು ನಮಗೆ ನೀಡಿದ್ದು ಪದವಿ ಅಲ್ಲ. ಹೊಣೆಗಾರಿಗೆ ಅದನ್ನು ಸಮರ್ಥ­ವಾಗಿ ನಿಭಾಯಿಸುತ್ತೇವೆ’ ಎಂದು ಹೇಳಿದರು. 

ತಪ್ಪಿನಿಂದ ಅಧಿಕಾರ ಹೋಯಿತು: ಬಿ.ಎಸ್‌. ಯಡಿಯೂರಪ್ಪ ಮಾತ­ನಾಡಿ, ‘ರಾಜ್ಯದಲ್ಲಿ ನಮ್ಮ ಪಕ್ಷ ಐದು ವರ್ಷಗಳ ಕಾಲ ಅಧಿಕಾರ ನಡೆಸುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಉಳಿ­ದೆಲ್ಲಾ ಸರ್ಕಾರಗಳಿಗಿಂತ ಉತ್ತಮ ಆಡಳಿತ ನೀಡಿದ ಹೆಗ್ಗಳಿಕೆ ನಮಗಿದೆ. ನಾವು ಮಾಡಿದ ಕೆಲವು ತಪ್ಪುಗಳಿಂದ ಅಧಿಕಾರ ಕಳೆದುಕೊಂಡಿದ್ದೇವೆ. ಎಲ್ಲರೂ ಒಟ್ಟಾಗಿ ರಾಜ್ಯದಾದ್ಯಂತ ಪ್ರವಾಸ ಮಾಡುವ ಮೂಲಕ ಮತ್ತೆ ಅಧಿಕಾರಕ್ಕೆ ತರುತ್ತೇವೆ’ ಎಂದರು.

‘ಅತಿವೃಷ್ಟಿಯಾಗಿರುವ ಪ್ರದೇಶಗಳಿಗೆ ಇದೇ ಒಂಬತ್ತರಿಂದ ಭೇಟಿ ನೀಡಲಿದ್ದೇನೆ’ ಎಂದು ಯಡಿಯೂರಪ್ಪ ಹೇಳಿದರು.
‘ಕೆಲವೇ ತಿಂಗಳಲ್ಲಿ ಎದುರಾಗುವ ಬೃಹತ್‌ ಬೆಂಗಳೂರು ಪಾಲಿಕೆ ಚುನಾವಣೆಗೆ ನಾವು ಸಜ್ಜುಗೊಳ್ಳಬೇಕು. ಕೊನೆ ಅವಧಿಗೆ ಮೇಯರ್‌ ಹಾಗೂ ಉಪ­ಮೇಯರ್‌ ಆಗಿ ಆಯ್ಕೆ ಆಗುವವರು ಉತ್ತಮ ಕೆಲಸ ಮಾಡಿ, ಪಕ್ಷದ ಗೆಲುವಿಗೆ ಶ್ರಮಿಸಬೇಕಾಗಿದೆ’ ಎಂದು ಅವರು ಹೇಳಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ, ‘ಪಕ್ಷದ ಸಾಮಾನ್ಯ ಕಾರ್ಯಕರ್ತನೊಬ್ಬ ನಿಷ್ಠೆ, ಪರಿಶ್ರಮ ಹಾಗೂ ಪ್ರಾಮಾಣಿಕತೆಯಿಂದ ದುಡಿದರೆ ಯಾವ ಮಟ್ಟಕ್ಕೆ ಹೋಗಬಹುದು ಎಂಬುದಕ್ಕೆ ಯಡಿಯೂರಪ್ಪ ಮತ್ತು ಅನಂತಕುಮಾರ್‌ ಸಾಕ್ಷಿ’ ಎಂದರು.
ಶಾಸಕ ಆರ್‌. ಅಶೋಕ ಮಾತನಾಡಿ­ದರು. ಶಾಸಕರಾದ ಬಿ.ಎನ್‌. ವಿಜಯ್‌ ಕುಮಾರ್‌, ರವಿ ಸುಬ್ರಹ್ಮಣ್ಯ, ಜಗದೀಶ್‌ ಕುಮಾರ್‌, ಮುನಿರಾಜು, ವಿಧಾನ­ಪರಿಷತ್‌ ಸದಸ್ಯರಾದ ವಿಮಲಾ ಗೌಡ, ಬಿ.ಜೆ ಪುಟ್ಟಸ್ವಾಮಿ, ರಾಮಚಂದ್ರ ಗೌಡ, ಪಕ್ಷದ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಸುಬ್ಬನರಸಿಂಹ, ಮುಖಂಡರಾದ ರಾಮಾಜೋಯಿಸ್‌, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಹಲವರು ಭಾಗವಹಿಸಿದ್ದರು.

ಸಂತೋಷ್‌ ಬೇರು, ಅನಂತಕುಮಾರ್ ಕಾಂಡ, ಯಡಿಯೂರಪ್ಪ ರೆಂಬೆ...
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಡಿ.ವಿ ಸದಾನಂದ ಗೌಡ ಅವರು ಬಿಜೆಪಿ ಪಕ್ಷವನ್ನು ‘ಮರ’ ಎಂದು ಕರೆದು ಬಿಜೆಪಿಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾ­ಗಿರುವ ಸಂತೋಷ್‌, ಅನಂತ ಕುಮಾರ್‌ ಮತ್ತು ಯಡಿ­ಯೂರಪ್ಪ ಅವರನ್ನು ಬೇರು, ಕಾಂಡ ಮತ್ತು ರೆಂಬೆಗೆ ಹೋಲಿಸಿದರು.

ಹುಕ್ಕಾ–ಬುಕ್ಕಾ: ಮಾತಿನ ಮಧ್ಯೆ ಅನಂತ ಕುಮಾರ್‌– ಯಡಿಯೂರಪ್ಪ ಅವರನ್ನು ಬಾಯಿತಪ್ಪಿ ಹುಕ್ಕಾ–ಬುಕ್ಕಾ ಎಂದು ಕರೆದರು. ನಂತರ ಸರಿಪಡಿಸಿಕೊಂಡು, ಈ ಇಬ್ಬರೂ ನಾಯಕರು ಹಕ್ಕ–ಬುಕ್ಕ, ಕೋಟಿ–ಚೆನ್ನಯರ ಹಾಗೆ ಎಂದು ಶ್ಲಾಘಿಸಿದರು.
‘ನಡೆದಿರುವ ಕಹಿ ಘಟನೆಗಳನ್ನು ಕನಸು ಎಂದು­ಕೊಂಡು ಮುನ್ನಡೆಯುವ ಕಾಲ ಬಂದಿದೆ. ನೀವಿಬ್ಬರೂ ಜೋಡಿ ಎತ್ತಿನ ಹಾಗೆ ಸಾಗಬೇಕಿದೆ. ಈ ಹಿಂದೆ ಎತ್ತು ಏರಿಗೆ, ಕೋಣ ನೀರಿಗೆ ಎಂಬ ಪರಿಸ್ಥಿತಿ ನಿರ್ಮಾಣ­ವಾಗಿತ್ತು. ಇನ್ನು ಮುಂದೆ ಹಾಗೆ ಆಗಬಾರದು’ ಎಂದು ಗೌಡರು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.