ADVERTISEMENT

ಬಿಜೆಪಿ ಮುಖಂಡನ ಮೇಲೆ ಹಲ್ಲೆ

ಚುನಾವಣಾ ದ್ವೇಷ ಹಿನ್ನೆಲೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2014, 19:53 IST
Last Updated 20 ಏಪ್ರಿಲ್ 2014, 19:53 IST

ಹೊಸಕೋಟೆ: ಚುನಾವಣಾ ದ್ವೇಷದ ಹಿನ್ನಲೆ­ಯಲ್ಲಿ ತಾಲ್ಲೂಕಿನ ವಾಗಟ ಅಗ್ರಹಾರ ಗ್ರಾಮದ ಡಿ.ಎಂ.­ಮಂಜುನಾಥ ಎಂಬುವವರ ಮೇಲೆ ಗುಂಪೊಂದು ಹಲ್ಲೆ ಮಾಡಿದ್ದಲ್ಲದೆ ಕೊಲೆ ಬೆದರಿಕೆ ಹಾಕಿ ಪರಾರಿಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಮಂಜುನಾಥ ವಾಗಟ ಅಗ್ರಹಾರ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯ ಪತಿಯಾಗಿದ್ದು ಈ ಹಿಂದೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದು ನಂತರ ಬಿಜೆಪಿ ಸೇರಿದ್ದರು.

ಇದೇ ದ್ವೇಷದ ಹಿನ್ನಲೆಯಲ್ಲಿ  ಅದೇ ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯ­ಕರ್ತರು ಎನ್ನಲಾದ ವಿ.ಜಿ.ಸೊಣ್ಣೇಗೌಡ, ವರದರಾಜು, ನವೀನ್, ಗೋಪಿ, ಅಶೋಕ್ ಕುಮಾರ್ ಎಂಬು­ವವರು ಶುಕ್ರವಾರ ರಾತ್ರಿ ಹತ್ತು ಗಂಟೆ ಸಮಯ­ದಲ್ಲಿ ಮಂಜುನಾಥ ಅವರ ಅಂಗಡಿಗೆ ಬಂದು ಅವರಿಗೆ ಜಾತಿ ನಿಂದನೆ ಮಾಡಿ ಚಪ್ಪಲಿಯಿಂದ ಹೊಡೆದು ಕೊಲೆ ಬೆದರಿಕೆ ಹಾಕಿ ಪರಾರಿ­ಯಾದರು. ನಂತರ ಅಲ್ಲಿಗೆ ಬಂದ ಇಸ್ಮಾಯಿಲ್ ಎಂಬಾತ  ಮನೆ ಮೇಲೆ ಬಾಂಬ್ ಹಾಕಿ ಸರ್ವನಾಶ ಮಾಡುವುದಾಗಿ ಬೆದರಿಕೆ ಹಾಕಿದ ಎಂದು ಮಂಜುನಾಥ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಕೊಲೆ ಬೆದರಿಕೆ ಹಾಕಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ  ತಿರುಮಲಶೆಟ್ಟಹಳ್ಳಿ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.