ADVERTISEMENT

ಬಿಡಿಎ ಪರಿಹಾರ ಸೂತ್ರಕ್ಕೆ ರೈತರ ವಿರೋಧ

ಪಿಆರ್‌ಆರ್‌ ರಸ್ತೆ: ಅಭಿವೃದ್ಧಿ ಪಡಿಸಿದ ಭೂಮಿ ಬದಲು ನಗದು ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 19:30 IST
Last Updated 30 ಜೂನ್ 2016, 19:30 IST
ಬಿಡಿಎ ಪರಿಹಾರ ಸೂತ್ರಕ್ಕೆ ರೈತರ ವಿರೋಧ
ಬಿಡಿಎ ಪರಿಹಾರ ಸೂತ್ರಕ್ಕೆ ರೈತರ ವಿರೋಧ   

ಬೆಂಗಳೂರು: ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌)  ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ನಗದು ರೂಪದಲ್ಲಿ ಪರಿಹಾರ ನೀಡುವ ಬದಲು ಅಭಿವೃದ್ಧಿಪಡಿಸಿದ ಭೂಮಿ ನೀಡುವ  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪ್ರಸ್ತಾಪಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.

ಪರಿಷ್ಕೃತ ಪಿಆರ್‌ಆರ್‌ ಯೋಜನೆಗೆ ಸಚಿವ ಸಂಪುಟ ಬುಧವಾರ ತಾತ್ವಿಕ ಒಪ್ಪಿಗೆ ನೀಡಿತ್ತು. 100 ಮೀಟರ್‌ ಅಗಲದ ಪಿಆರ್‌ಆರ್‌  ನಿರ್ಮಾಣಕ್ಕೆ 2006ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ರೈತರಿಗೆ ನಗದು ರೂಪದಲ್ಲಿ ಪರಿಹಾರ ನೀಡುವುದರಿಂದ ಆಗುವ ಆರ್ಥಿಕ ಹೊರೆ ಕಡಿಮೆ ಮಾಡುವ ಸಲುವಾಗಿ, 100 ಮೀಟರ್‌ ಅಗಲದ ರಸ್ತೆ ನಿರ್ಮಿಸುವ ಬದಲು ಕೇವಲ 75 ಮೀಟರ್‌ ಅಗಲದಲ್ಲಿ ರಸ್ತೆ ನಿರ್ಮಿಸಿ, ಉಳಿದ 25 ಮೀಟರ್‌ ಅಗಲದ ಜಾಗವನ್ನು ಅಭಿವೃದ್ಧಿಪಡಿಸಿ, ಜಾಗ ಕಳೆದುಕೊಂಡ ರೈತರಿಗೆ ಮರಳಿಸಲು ಬಿಡಿಎ ಮುಂದಾಗಿದೆ.

ಪರಿಷ್ಕೃತ ಯೋಜನೆ ಕುರಿತು ರೈತರೊಂದಿಗೆ ಚರ್ಚಿಸಲು ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ನೇತೃತ್ವದಲ್ಲಿ ಬಿಡಿಎ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಸಭೆಯಲ್ಲಿ ಹೊಸ ಪ್ರಸ್ತಾವಕ್ಕೆ ಭಾರಿ ವಿರೋಧ ವ್ಯಕ್ತವಾಯಿತು.  ‘ರಸ್ತೆಗೆ ಎಷ್ಟು ಜಾಗ ಬೇಕೋ ಅಷ್ಟು ಜಾಗವನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳಿ.

ಅಷ್ಟೂ ಜಾಗಕ್ಕೆ ಹೊಸ ಭೂಸ್ವಾಧೀನ ಕಾಯ್ದೆ ಪ್ರಕಾರವೇ ಪರಿಹಾರ ನೀಡಿ. ನಮ್ಮ ಭೂಮಿಯನ್ನು ಪಡೆದು, ಅಭಿವೃದ್ಧಿಪಡಿಸಿ ನಮಗೆ ಮರಳಿಸುವ ಅಗತ್ಯ ಇಲ್ಲ’ ಎಂದು ರೈತ ಮುಖಂಡರು ಸ್ಪಷ್ಟವಾಗಿ ಹೇಳಿದರು. ಈ ಬಗ್ಗೆ ಒಮ್ಮತಕ್ಕೆ ಬರಲು ಸಾಧ್ಯವಾಗದ ಕಾರಣ ಮತ್ತೊಮ್ಮೆ ಸಭೆ ನಡೆಸಲು ತೀರ್ಮಾನಿಸಲಾಯಿತು.

ಮೂರನೇ ಒಂದರಷ್ಟು ಪರಿಹಾರ: ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕೆ.ಜೆ.ಜಾರ್ಜ್‌, ‘ಈ ಯೋಜನೆಗೆ ಅಧಿಸೂಚನೆ ಹೊರಡಿಸುವಾಗ ಇದರ ಅಂದಾಜು ವೆಚ್ಚ ₹ 500 ಕೋಟಿ ಇತ್ತು. 2013ರಲ್ಲಿ ಅಂದಾಜು ವೆಚ್ಚ ₹ 5 ಸಾವಿರ ಕೋಟಿಗೆ ಹೆಚ್ಚಿತು. ಈಗಿನ ಅಂದಾಜಿನ ಪ್ರಕಾರ ಈ ಯೋಜನೆಗೆ ₹ 11,950 ಕೋಟಿ ಬೇಕಾಗುತ್ತದೆ.

ರಸ್ತೆ ನಿರ್ಮಾಣಕ್ಕೆ ₹ 3,850 ಕೋಟಿ ವೆಚ್ಚ ಆಗಲಿದ್ದು, ಸಾಲ ನೀಡಲು ಜೈಕಾ ಸಂಸ್ಥೆ  ಮುಂದೆ ಬಂದಿದೆ.  ಆದರೆ, ಭೂಸ್ವಾಧೀನಕ್ಕೆ   ₹ 8,100 ಕೋಟಿ ಬಂಡವಾಳ ಬೇಕು. ಇದನ್ನು ಹೊಂದಿಸುವುದು ಕಷ್ಟ. ಹಾಗಾಗಿ ಭೂಸ್ವಾಧೀನಕ್ಕೊಳಪಡಿಸುವ 100 ಮೀ ಜಾಗದಲ್ಲಿ ಕೇವಲ 75 ಮೀ.ನಲ್ಲಿ ರಸ್ತೆ ನಿರ್ಮಿಸಿ, ಉಳಿದ 25 ಮೀ ಜಾಗವನ್ನು ವಾಣಿಜ್ಯವಾಗಿ ಅಭಿವೃದ್ಧಿಪಡಿಸಿ ರೈತರಿಗೆ ನೀಡಲು ಉದ್ದೇಶಿಸಿದ್ದೇವೆ’ ಎಂದರು.

‘ರೈತರ ಭೂಮಿಗೆ ಪರಿಹಾರ ನೀಡುವಾಗ ಮೂರನೇ ಒಂದರಷ್ಟು ಹಣವನ್ನು ನಗದು ರೂಪದಲ್ಲಿ ಹಾಗೂ ಮೂರನೇ ಎರಡರಷ್ಟು ಪರಿಹಾರವನ್ನು ಅಭಿವೃದ್ಧಿಪಡಿಸಿದ ಜಾಗದ ರೂಪದಲ್ಲಿ ನೀಡುತ್ತೇವೆ. ಅಭಿವೃದ್ಧಿಪಡಿಸಿದ ಜಾಗದಲ್ಲಿ ಈಗ ಇರುವ ಎಫ್‌ಎಆರ್‌ನ  (ಫ್ಲೋರ್‌ ಏರಿಯ ಅನುಪಾತ) ಎರಡು ಪಟ್ಟು ಎಫ್‌ಎಆರ್‌ ನೀಡಲಿದ್ದೇವೆ.

ಇದರಿಂದ ರೈತರಿಗೆ ಹೆಚ್ಚಿನ ಪರಿಹಾರ ಸಿಕ್ಕಂತಾಗುತ್ತದೆ’ ಎಂದು ಸಮಜಾಯಿಷಿ ನೀಡಿದರು. ಸಭೆ ವಿಫಲವಾದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ಮುಂದಿನ ತಿಂಗಳು ವಿಧಾನ ಮಂಡಲ ಅಧಿವೇಶನ ನಡೆಯಲಿದ್ದು, ಆ ಬಳಿಕ ಮತ್ತೊಮ್ಮೆ ರೈತರ ಜತೆ ಸಭೆ ನಡೆಸುತ್ತೇವೆ’ ಎಂದರು.

ಹಣ ಹೊಂದಿಕೆ
ಭೂಸ್ವಾಧೀನಕ್ಕಾಗಿ ಹಣ ಹೊಂದಿಸಲು ಸಾಲ ಪಡೆಯಲು ಬಿಡಿಎ ಮುಂದಾಗಿದೆ. ಸಾಲ ಮರುಪಾವತಿ ಸಲುವಾಗಿ ರಸ್ತೆಯ ಅಂಚಿನಿಂದ 1 ಕಿ.ಮೀ ವ್ಯಾಪ್ತಿಯಲ್ಲಿ ನಡೆಯುವ ನಿರ್ಮಾಣಕ್ಕೆ ಅಭಿವೃದ್ಧಿ ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ.

ಅಲ್ಲದೇ ರಸ್ತೆಗಾಗಿ ಭೂಸ್ವಾಧೀನ ನಡೆಸುವ ಜಾಗದ ಎರಡೂ ಪಾರ್ಶ್ವಗಳಲ್ಲಿ 100 ಮೀ.ವರೆಗಿನ ಜಾಗವನ್ನು ಮುಂದಿನ ನಗರ ಮಹಾಯೋಜನೆಯಲ್ಲಿ (ಸಿಟಿಪಿ) ವಾಣಿಜ್ಯ ಉದ್ದೇಶಕ್ಕೆ ಮೀಸಲಿಡಲು, ಅದರ ಪಕ್ಕದಲ್ಲಿ 30 ಅಡಿ ಜಾಗವನ್ನು ರಸ್ತೆ ನಿರ್ಮಿಸುವುದಕ್ಕೆ ಮೀಸಲಿಡುವ ಪ್ರಸ್ತಾಪವನ್ನೂ ಸಿಡಿಪಿಯಲ್ಲಿ ಸೇರಿಸಲು ನಿರ್ಧರಿಸಲಾಗಿದೆ.

‘ಕಾಮಗಾರಿ ವೇಳೆ ಅಭಿವೃದ್ಧಿ ಶುಲ್ಕ ಸಂಗ್ರಹವಾಗಲಿದೆ. ಅಲ್ಲಿಯವರೆಗೆ ಸಾಲದ ಬಡ್ಡಿ ಕಟ್ಟಲು ಸರ್ಕಾರ ನೆರವಾಗಲಿದೆ. ಹೊಸ ಯೋಜನೆಯಿಂದ ಒಟ್ಟು ₹ 10 ಸಾವಿರ ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ’ ಎಂದು ಸಚಿವರು ತಿಳಿಸಿದರು.

ಪೆರಿಫೆರಲ್‌ ವರ್ತುಲ ರಸ್ತೆ ಸಂಧಿಸುವ ಇತರ ರಸ್ತೆಗಳು
* ತುಮಕೂರು ರಸ್ತೆ (ರಾಷ್ಟ್ರೀಯ ಹೆದ್ದಾರಿ 4)
* ಬಳ್ಳಾರಿ ರಸ್ತೆ (ರಾಷ್ಟ್ರೀಯ ಹೆದ್ದಾರಿ 7)
* ಹಳೆ ಮದ್ರಾಸ್‌ ರಸ್ತೆ (ರಾಷ್ಟ್ರೀಯ ಹೆದ್ದಾರಿ 4)
* ಹೊಸೂರು ರಸ್ತೆ (ರಾಷ್ಟ್ರೀಯ ಹೆದ್ದಾರಿ 7)
* ದೊಡ್ಡಬಳ್ಳಾಪುರ ರಸ್ತೆ (ರಾಜ್ಯ ಹೆದ್ದಾರಿ)
* ಹೆಣ್ಣೂರು ರಸ್ತೆ  (ರಾಜ್ಯ ಹೆದ್ದಾರಿ)
* ಹೆಸರಘಟ್ಟ ರಸ್ತೆ (ರಾಜ್ಯ ಹೆದ್ದಾರಿ)
* ಹೊಸಕೋಟೆ ಆನೆಕಲ್‌ ರಸ್ತೆ
* ವೈಟ್‌ಫೀಲ್ಡ್‌ ರಸ್ತೆ
* ಸರ್ಜಾಪುರ ರಸ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.