ADVERTISEMENT

ಬಿಡಿಎ ವಿರುದ್ಧ ಪ್ರಕರಣ ದಾಖಲಿಸಲು ಆದೇಶ

ವೆಂಕಟರಾಯನ ಕೆರೆ ಒತ್ತುವರಿ: ಉಪ ಲೋಕಾಯುಕ್ತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2014, 19:44 IST
Last Updated 17 ಸೆಪ್ಟೆಂಬರ್ 2014, 19:44 IST

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ವನ್ನೂ ‘ಭೂಗಳ್ಳ’ ಎಂದು ಪರಿಗಣಿಸಿ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಅದರ ವಿರುದ್ಧವೇ ಪ್ರಕರಣ ದಾಖಲಿಸಬೇಕು ಎಂದು ಉಪ ಲೋಕಾಯುಕ್ತ ನ್ಯಾಯ-ಮೂರ್ತಿ ಸುಭಾಷ್‌ ಅಡಿ ಅವರು ಬೆಂಗಳೂರು ದಕ್ಷಿಣ ತಹಶೀಲ್ದಾರ್‌ ಡಾ. ದಯಾನಂದ ಅವರಿಗೆ ಸೂಚನೆ ನೀಡಿದ್ದಾರೆ.

ಉತ್ತರಹಳ್ಳಿ ಹೋಬಳಿ ಗುಬ್ಬಲಾಳ ಗ್ರಾಮದ ವೆಂಕಟರಾಯನ ಕೆರೆಯಲ್ಲಿ ಬಿಡಿಎ ನಿರ್ಮಿಸಿರುವ ಬಡಾವಣೆಗೆ ಸಂಬಂಧಿಸಿದಂತೆ ಜೆ.ಕುಮಾರಸ್ವಾಮಿ ಎಂಬುವವರು ಸಲ್ಲಿಸಿದ ದೂರಿಗೆ ಸಂಬಂಧಿಸಿದಂತೆ ಬುಧವಾರ ವಿಚಾರಣೆ ನಡೆಸುವಾಗ ಉಪ ಲೋಕಾಯುಕ್ತರು ಈ ನಿರ್ದೇಶನ ನೀಡಿದರು.

ಬಿಡಿಎ ಉಪ ಕಾರ್ಯದರ್ಶಿ ಹಾಗೂ ಭೂಸ್ವಾಧೀನ ಅಧಿಕಾರಿಗಳು, ನಿಯಮಾವಳಿಗೆ ಅನುಸಾರವಾಗಿಯೇ ಭೂಮಿಯನ್ನು ಸ್ವಾಧೀನಕ್ಕೆ ಪಡೆಯ-ಲಾಗಿದೆ ಎಂದು ಸಮಜಾಯಿಷಿ ನೀಡಿ-ದರು. ಇದರಿಂದ ಆಕ್ರೋಶಗೊಂಡ ನ್ಯಾಯಮೂರ್ತಿ ಅಡಿ ಅವರು, ‘ಗುಬ್ಬಲಾಳ ಗ್ರಾಮದ ಸರ್ವೆ ನಂ. 8ರಲ್ಲಿ ಕೆರೆ ಇತ್ತು ಎನ್ನುವುದಕ್ಕೆ ಯಾವುದೇ ಸಂಶಯ ಇಲ್ಲ. ಗ್ರಾಮನಕ್ಷೆ, ಟಿಪ್ಪಣಿ, ಕಂದಾಯ ದಾಖಲೆ ಎಲ್ಲದ-ರಲ್ಲೂ ಅಲ್ಲಿ ಕೆರೆ ಇತ್ತು ಎನ್ನುವುದು ಸ್ಪಷ್ಟವಾಗಿದೆ’ ಎಂದು ಹೇಳಿದರು. ಬೆಂಗಳೂರು ದಕ್ಷಿಣ ತಹಶೀಲ್ದಾರರು ಕೂಡ ಸರ್ವೆ ನಂ. 8ರಲ್ಲಿ ಇರುವುದು ಕೆರೆ ಎಂದು ದೃಢೀಕರಿಸಿದರು.

ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿ-ಸಿದಂತೆ ದಾಖಲೆಗಳನ್ನು ನೀಡಬೇಕು ಎಂದು ಉಪ ಲೋಕಾಯುಕ್ತರು ಬಿಡಿಎ ಅಧಿಕಾರಿಗಳಿಗೆ ಸೂಚಿಸಿದರು. ಎಲ್ಲ ದಾಖಲೆಗಳನ್ನು ಬೆಂಗಳೂರು ಮಹಾ-ನಗರ ಕಾರ್ಯಪಡೆ (ಬಿಎಂಟಿಎಫ್‌)ಗೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಇದೇ ಪ್ರಕರಣಕ್ಕೆ ಸಂಬಂಧಿ-ಸಿದಂತೆ ಬಿಎಂಟಿಎಫ್‌ನಲ್ಲೂ ಪ್ರಕರಣ ನಡೆಯುತ್ತಿರುವುದನ್ನು ಅವರು ಉಪ ಲೋಕಾಯುಕ್ತರ ಗಮನಕ್ಕೆ ತಂದರು.

ವೆಂಕಟರಾಯನ ಕೆರೆ ಪಕ್ಕದ ಸರ್ವೆ ನಂ. 10ರ ಪ್ರದೇಶಕ್ಕೆ ಸಂಬಂಧಿಸಿದ ಮಾಹಿತಿ ಕೇಳಿದಾಗ, ‘ಅದು ಕೂಡ ಸರ್ಕಾರಿ ಭೂಮಿ’ ಎಂದು ತಹಶೀಲ್ದಾ-ರರು ಉತ್ತರಿಸಿದರು. ‘ಸರ್ವೆ ನಂ. 8 ಮತ್ತು 10 ಎರಡರ ಸರಹದ್ದನ್ನು ಒಂದು ವಾರದಲ್ಲಿ ಗುರುತು ಮಾಡ-ಬೇಕು ಮತ್ತು ಭೂಮಿ ಅತಿಕ್ರಮಿಸಿದ ಎಲ್ಲರ ವಿರುದ್ಧವೂ ಪ್ರಕರಣ ದಾಖಲಿಸಬೇಕು’ ಎಂದು ಉಪ ಲೋಕಾಯುಕ್ತರು ಸೂಚನೆ ನೀಡಿದರು.

‘ಕೆರೆ ಪಾತ್ರದಲ್ಲಿ ನಿವೇಶನ ಪಡೆದವ-ರನ್ನೂ ಅತಿಕ್ರಮಣದಾರರು ಎಂದು ಭಾವಿಸಬೇಕೇ’ ಎಂದು ತಹಶೀಲ್ದಾರರು ಕೇಳಿದರು. ‘ನಿವೇಶನ ಪಡೆದವರು ಮುಗ್ಧರು. ಕೆರೆಯನ್ನು ಅತಿಕ್ರಮಿಸಿದ್ದು ಬಿಡಿಎ. ಅದರ ವಿರುದ್ಧವೇ ಪ್ರಕರಣ ದಾಖಲಿಸಬೇಕು ಮತ್ತು ಅ. 20ರಂದು ನಡೆಯುವ ಮುಂದಿನ ವಿಚಾರಣೆ ಕಾಲಕ್ಕೆ ಈ ಕುರಿತು ವರದಿ ನೀಡಬೇಕು’ ಎಂದು ನ್ಯಾಯಮೂರ್ತಿ ಅಡಿ ನಿರ್ದೇ-ಶನ ನೀಡಿದರು.

‘ಅ. 20ರಂದು ವಿಚಾರಣೆಗೆ ಬರು-ವಾಗ ಎಲ್ಲ ದಾಖಲೆಗಳನ್ನೂ ಜತೆಗೆ ತರಬೇಕು. ಕೆರೆ ಪ್ರದೇಶ ತೆರವು ಮಾಡು-ವುದು ಮತ್ತು ಪರ್ಯಾಯ ವ್ಯವಸ್ಥೆ ಕಲ್ಪಿಸುವ ಸಂಬಂಧ ಬಿಡಿಎ ಮಾಡಿ-ಕೊಂಡ ಯೋಜನೆಯನ್ನೂ ತಿಳಿಸಬೇಕು’ ಎಂದು ಆದೇಶಿಸಿದರು.
ಅತಿಕ್ರಮಣ ತೆರವುಗೊಳಿಸಲು ಮುಂದಾಗಿದ್ದ ಬಿಡಿಎ ಎಂಜಿನಿಯರ್‌ ವಿಶ್ವನಾಥ್‌ ಅವರಿಗೆ ವಿಧಾನ ಪರಿಷತ್‌ ಸದಸ್ಯ ಡಿ.ಯು. ಮಲ್ಲಿಕಾರ್ಜುನ ಬೆದರಿಕೆ ಹಾಕಿದ ಪ್ರಕರಣ ದಾಖಲಿಸಿ-ಕೊಳ್ಳಲು ಹಿಂದೇಟು ಹಾಕಿದ್ದ ಬನಶಂಕರಿ ಪೊಲೀಸ್‌ ಠಾಣೆ ಅಧಿಕಾರಿ-ಯನ್ನೂ ಉಪ ಲೋಕಾಯುಕ್ತರು ತರಾಟೆಗೆ ತೆಗೆದುಕೊಂಡರು.

‘ಸರ್ಕಾರಿ ಅಧಿಕಾರಿಯನ್ನು ಇನ್ನೊಬ್ಬ ಸರ್ಕಾರಿ ಅಧಿಕಾರಿಯಲ್ಲದೆ ಬೇರೆ ಯಾರು ರಕ್ಷಿಸಬೇಕು? ಪೊಲೀಸ್‌ ಠಾಣೆಯಲ್ಲೇ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದರೆ ಎಲ್ಲಿಗೆ ಹೋಗಬೇಕು? ರಕ್ಷಣೆ ಕೊಡುವವರು ಯಾರು’ ಎಂದು ಪ್ರಶ್ನಿಸಿದರು. ಬುಧವಾರವೇ ಪ್ರಕರಣ ದಾಖಲಿಸಿಕೊಂಡು ವರದಿ ನೀಡಬೇಕು ಎಂದು ಆದೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.