ADVERTISEMENT

ಬಿಬಿಎಂಪಿ ಸಭೆಯಲ್ಲಿ ಕೋಲಾಹಲ

ಗುತ್ತಿಗೆದಾರರಿಗೆ ವಿಶೇಷ ಎಲ್‌ಒಸಿಗೆ ಅಧಿಕಾರಿಗಳ ಶಿಫಾರಸು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2015, 20:18 IST
Last Updated 25 ಮಾರ್ಚ್ 2015, 20:18 IST

ಬೆಂಗಳೂರು: ಗುತ್ತಿಗೆದಾರರಿಗೆ ವಿಶೇಷ ಹಣ ಬಿಡುಗಡೆ ಪತ್ರ (ಎಲ್‌ಒಸಿ) ನೀಡಿದ ವಿಷಯವು ಬಿಬಿಎಂಪಿ ಸಭೆಯಲ್ಲಿ ಬುಧವಾರ ಕೋಲಾಹಲಕ್ಕೆ ಕಾರಣವಾಯಿತು. ಸಭೆ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಮಂಜುನಾಥ ರೆಡ್ಡಿ ವಿಷಯ ಪ್ರಸ್ತಾಪಿಸಿ, ‘ಮುಖ್ಯ ಲೆಕ್ಕಾಧಿಕಾರಿ ಕಚೇರಿಯ ಅಧಿಕಾರಿಗಳು ಲಂಚ ಪಡೆದು ಗುತ್ತಿಗೆದಾರರಿಗೆ ವಿಶೇಷ ಎಲ್‌ಒಸಿ ನೀಡುತ್ತಿದ್ದಾರೆ. ಯಾರ ಶಿಫಾರಸಿನ ಮೇರೆಗೆ ಎಷ್ಟು ಎಲ್‌ಒಸಿಗಳನ್ನು ನೀಡಲಾಗಿದೆ ಎಂಬುದನ್ನು ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದರು.

‘ಮೇಯರ್ ಅವರೇ ಕೆಟ್ಟ ಅಧಿಕಾರಿಗೆ ಸಹಕಾರ ನೀಡುತ್ತಿದ್ದಾರೆ’ ಎಂದು ಅವರು ಗಂಭೀರ ಆರೋಪ ಮಾಡಿದರು. ‘ವಿಶೇಷ ಎಲ್‌ಒಸಿಗೆ ಶಿಫಾರಸು ಮಾಡಿದವರ ಹೆಸರು ಬಹಿರಂಗ ಮಾಡುವಂತೆ ಮೂರು ದಿನಗಳಿಂದ ಒತ್ತಾಯ ಮಾಡುತ್ತಿದ್ದೇವೆ. ಆದರೂ ಸಕಾರಾತ್ಮಕ ಉತ್ತರ ನೀಡಿಲ್ಲ’ ಎಂದು ಆರೋಪಿಸಿ ಕಾಂಗ್ರೆಸ್‌ ಸದಸ್ಯರು ಮೇಯರ್‌ ಪೀಠದ ಎದುರು ಧರಣಿ ಆರಂಭಿಸಿದರು.  ಮೇಯರ್‌ ಅವರ ವಿರುದ್ಧ ಕಾಂಗ್ರೆಸ್‌ ಸದಸ್ಯರು ಧಿಕ್ಕಾರ ಕೂಗಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ಸಹ ‘ಕಾಂಗ್ರೆಸ್‌ಗೆ ಧಿಕ್ಕಾರ’ ಎಂದು ಘೋಷಣೆ ಕೂಗಿದರು. ಸಭೆಯಲ್ಲಿ ಕೋಲಾಹಲ ಉಂಟಾಯಿತು.

‘ಮುಖ್ಯ ಲೆಕ್ಕಾಧಿಕಾರಿ ಅವರು ಸಭೆಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಅವರು ಕೆಟ್ಟ ಹುಳ. ಅವರನ್ನು ಕೂಡಲೇ ಅಮಾನತು ಮಾಡಿ ಪ್ರಕರಣವನ್ನು ಲೋಕಾಯುಕ್ತಕ್ಕೆ ಒಪ್ಪಿಸಬೇಕು’ ಎಂದು ಮಂಜುನಾಥ ರೆಡ್ಡಿ ಆಗ್ರಹಿಸಿದರು. ಬಿಜೆಪಿಯ ಗಂಗಬೈರಯ್ಯ ಮಾತನಾಡಿ, ‘ಮುಖ್ಯ ಲೆಕ್ಕಾಧಿಕಾರಿ ಕಚೇರಿಯಲ್ಲಿರುವ ಡಾಟಾ ಎಂಟ್ರಿ ಆಪರೇಟರ್‌ ಆಗಿರುವ ಲೋಕೇಶ್‌ ಎಂಬಾತ ಗುತ್ತಿಗೆದಾರರೊಂದಿಗೆ ವ್ಯಾಪಾರಕ್ಕೆ ಇಳಿದಿದ್ದಾನೆ’ ಎಂದು ಆರೋಪಿಸಿದರು. 

ಬಿಜೆಪಿಯ ಎಸ್‌.ಹರೀಶ್‌ ಮಾತನಾಡಿ, ‘ಮೇಯರ್ ಅವರ ಶಿಫಾರಸಿನ ಎಲ್‌ಒಸಿ ನೀಡಲಾಗಿದೆ ಎಂದು ಮುಖ್ಯ ಲೆಕ್ಕಾಧಿಕಾರಿ ಕಚೇರಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ ಎಂದಷ್ಟೇ ಹೇಳಿದ್ದೇನೆ. ಮೇಯರ್ ಶಿಫಾರಸು ಮಾಡಿದ್ದಾರೆ ಎಂದು ಆರೋಪ ಮಾಡಿಲ್ಲ’ ಎಂದು ಸ್ಪಷ್ಟನೆ ನೀಡಿದರು. ಗಲಾಟೆ ಹೆಚ್ಚಾದ ಕಾರಣ ಮೇಯರ್‌ ಅವರು ಸಭೆಯನ್ನು 10 ನಿಮಿಷ ಮುಂದೂಡಿದರು.

ಸಭೆ ಮತ್ತೆ ಆರಂಭವಾಗುತ್ತಿದ್ದಂತೆ ಕಾಚರಕನಹಳ್ಳಿ ವಾರ್ಡ್‌ ಸದಸ್ಯ ಪದ್ಮನಾಭ ರೆಡ್ಡಿ ಮಾತನಾಡಿ, ‘ಒಂದು ಕಡೆಯಲ್ಲಿ ಬಿಲ್‌ ಪಾವತಿಗೆ ಆಗ್ರಹಿಸಿ ಗುತ್ತಿಗೆದಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೊಂದು ಕಡೆಯಲ್ಲಿ ವಿಶೇಷ ಎಲ್‌ಒಸಿಗಳ ಮಾರಾಟ ಆಗುತ್ತಿದೆ. ಕಳೆದ ಒಂದೂವರೆ ವರ್ಷದಲ್ಲಿ ಮಾಡಲಾದ ವಿಶೇಷ ಎಲ್‌ಒಸಿ ಶಿಫಾರಸುಗಳ ಮಾಹಿತಿ ನೀಡಬೇಕು’ ಎಂದು ಒತ್ತಾಯಿಸಿದರು.

‘ಐದು ವರ್ಷಗಳ ಮಾಹಿತಿ ನೀಡಬೇಕು’ ಎಂದು ಕಾಂಗ್ರೆಸ್‌ನ ಎಂ.ಕೆ. ಗುಣಶೇಖರ್‌ ಆಗ್ರಹಿಸಿದರು. ‘ಸಮಸ್ಯೆ ಇರುವ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುವಂತೆ ನಾನು ಶಿಫಾರಸು ಮಾಡಿದ್ದೆ. ಹಣ ಬಿಡುಗಡೆ ಮಾಡುವಂತೆ ಆಯುಕ್ತರು ಮೂರು ಸಲ ಪತ್ರ ನೀಡಿದ್ದರು. ಆದರೂ, ಹಣ ಬಿಡುಗಡೆ ಮಾಡಿರಲಿಲ್ಲ. ಗುತ್ತಿಗೆದಾರರಿಗೆ ಬಿಲ್‌ ಪಾವತಿಗೆ ಆನ್‌ಲೈನ್‌ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಆಡಳಿತ ಪಕ್ಷದ ನಾಯಕ ಎನ್‌.ಆರ್‌.ರಮೇಶ್‌ ಪ್ರಚಾರ ಮಾಡಿದ್ದೇ ಬಂತು. ಯಾವ ಲೈನೂ ಬರಲಿಲ್ಲ’ ಎಂದು ಜೆಡಿಎಸ್‌ ನಾಯಕ ಪ್ರಕಾಶ್‌ ವ್ಯಂಗ್ಯವಾಡಿದರು.

ಮುಖ್ಯ ಲೆಕ್ಕಾಧಿಕಾರಿ ಕನಕರಾಜು ಅವರು ಉತ್ತರ ನೀಡಲು ಮುಂದಾದರು. ‘ಈಗಲೂ ಸರಿಯಾದ ಮಾಹಿತಿ ನೀಡುತ್ತಿಲ್ಲ’ ಎಂದು ಆರೋಪಿಸಿ ಕಾಂಗ್ರೆಸ್‌ ಸದಸ್ಯರು ಧರಣಿ ಆರಂಭಿಸಿದರು. ಮೇಯರ್‌ ಅವರು ಸದಸ್ಯರನ್ನು ಸಮಾಧಾನಿಸಿದರು.

‘ಕಳೆದ ಮೂರು ತಿಂಗಳಲ್ಲಿ ನೀಡಿದ ಎಲ್‌ಒಸಿ ಹಾಗೂ ವಿಶೇಷ ಎಲ್‌ಒಸಿಗಳ ಮಾಹಿತಿ ನೀಡುತ್ತಿದ್ದಾರೆ. ಅವರು ಸಭೆಯ ದಿಕ್ಕು ತಪ್ಪಿಸುತ್ತಿದ್ದಾರೆ. ಮೇಯರ್‌ ಹಾಗೂ ಆಯುಕ್ತರನ್ನು ಕಟಕಟೆಯಲ್ಲಿ ನಿಲ್ಲಿಸಿ ಸಾಕ್ಷಿ ಹೇಳುತ್ತಿದ್ದಾರೆ’ ಎಂದು ಮಂಜುನಾಥ ರೆಡ್ಡಿ ಚುಚ್ಚಿದರು.

ಬಿಬಿಎಂಪಿ ಸದಸ್ಯರ ಶಿಫಾರಸಿನ ಮೇರೆಗೆ ಶೇ 95ರಷ್ಟು ವಿಶೇಷ ಎಲ್‌ಒಸಿಗಳನ್ನು ನೀಡಲಾಗಿದೆ ಎಂದು ಆಯುಕ್ತ  ಎಂ.ಲಕ್ಷ್ಮಿನಾರಾಯಣ ಹೇಳಿದರು.
ಕನಕರಾಜು ಅವರು ಜನವರಿ ತಿಂಗಳಲ್ಲಿ ನೀಡಿದ ವಿಶೇಷ ಎಲ್‌ಒಸಿಗಳ ಮಾಹಿತಿ ಓದಿ ಹೇಳಿದರು. ಆಗ ಬಿಜೆಪಿ ಸದಸ್ಯರು, ‘₨82 ಕೋಟಿ ಬಿಡುಗಡೆ ಮಾಡುವಂತೆ ಮೇಯರ್  ಶಿಫಾರಸು ಮಾಡಿಲ್ಲ ಎಂಬುದು ಸಾಬೀತಾಗಿದೆ. ಎಲ್ಲವನ್ನೂ ಓದುವ ಅಗತ್ಯ ಇಲ್ಲ. ಪ್ರತಿಗಳು ಎಲ್ಲ ಸದಸ್ಯರಲ್ಲಿ ಇದೆ’ ಎಂದು ಗಮನ ಸೆಳೆದರು.

‘ಅನಾರೋಗ್ಯಪೀಡಿತರಾಗಿರುವ ಗುತ್ತಿಗೆದಾರರ ವಿನಂತಿಯ ಮೇರೆಗೆ ಎಲ್ಒಸಿ ನೀಡುವಂತೆ ಶಿಫಾರಸು ಮಾಡಿದ್ದೆ. ಇದರಲ್ಲಿ ನನ್ನ ವೈಯಕ್ತಿಕ ಹಿತಾಸಕ್ತಿ ಇಲ್ಲ. ನನ್ನ ಹೆಸರನ್ನು ಕೈಬಿಡಬೇಕು’ ಎಂದು ಎನ್‌.ಆರ್‌.ರಮೇಶ್‌ ಮನವಿ ಮಾಡಿದರು.

‘ಎಲ್ಲ ಸದಸ್ಯರ ಕಥೆಯೂ ಅದೇ’ ಎಂದು ಕಾಂಗ್ರೆಸ್‌ ಸದಸ್ಯರು ತಿರುಗೇಟು ನೀಡಿದರು. ‘ಎಲ್‌ಒಸಿ ನೀಡುವ ವಿಷಯದಲ್ಲಿ ನನ್ನ ಪಾತ್ರ ಇಲ್ಲ’ ಎಂದು ಸಮಜಾಯಿಷಿ ನೀಡಿ ಮೇಯರ್‌ ಸಭೆಯನ್ನು ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.