ADVERTISEMENT

ಬೆಂಕಿ ಪೊಟ್ಟಣಕ್ಕೆ ಪರದಾಡಿದ ಸಚಿವ!

ಹೇಳಿದ್ದು ಒಬ್ಬರ ಹೆಸರು, ಹೂಗೂಚ್ಛ ಇನ್ನೊಬ್ಬರಿಗೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 19:55 IST
Last Updated 21 ಜುಲೈ 2017, 19:55 IST
ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣ ಮಾಡುತ್ತಿದ್ದಾಗ ವೇದಿಕೆಗೆ ನುಗ್ಗಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಕರೆದೊಯ್ದರು
ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣ ಮಾಡುತ್ತಿದ್ದಾಗ ವೇದಿಕೆಗೆ ನುಗ್ಗಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಕರೆದೊಯ್ದರು   

ಬೆಂಗಳೂರು: ಅಂಬೇಡ್ಕರ್‌ ಅಂತರರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮ ಅನೇಕ ಗೊಂದಲಗಳಿಗೆ ಸಾಕ್ಷಿಯಾಯಿತು. ಇದರಿಂದಾಗಿ ವೇದಿಕೆಯಲ್ಲಿದ್ದ ಅತಿಥಿಗಳು ಮತ್ತು ಸಭಿಕರು ಪರದಾಡಬೇಕಾಯಿತು.

ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಿಕೊಂಡು ಮೊದಲೇ ಪಾಸ್‌ ಪಡೆದವರು ಸಭಾಂಗಣದೊಳಗೆ ಪ್ರವೇಶಿಸಲು ಪರದಾಡಬೇಕಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವರು, ಉನ್ನತಾಧಿಕಾರಿಗಳು, ಆಹ್ವಾನಿತರಿಗೂ ಕುರ್ಚಿಗಳು ಇಲ್ಲವಾಗಿತ್ತು. ಆಹಾರ ಸಚಿವ ಯು.ಟಿ. ಖಾದರ್  ಬೇರೆಯವರು ಕುಳಿತಿದ್ದ ಕುರ್ಚಿಯ ಕಂಬಿ ಮೇಲೆ ಕುಳಿತು ಕಾರ್ಯಕ್ರಮ ವೀಕ್ಷಿಸಿದರು.

ADVERTISEMENT

ಸ್ವಾಗತ ಮಾಡುವಾಗ ನಿರೂಪಕಿ ಒಬ್ಬರ ಹೆಸರು ಹೇಳಿದರೆ, ಹೂಗುಚ್ಛ ಹಿಡಿದಿದ್ದವರು ಮತ್ತೊಬ್ಬರಿಗೆ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಸಭಿಕರು  ‘ಅವರಲ್ಲ, ಇವರು’ ಎಂದು ಕೂಗಿದರು. ‘ನಾನು ಸ್ಕ್ರಿಪ್ಟ್‌ನಲ್ಲಿ ಇರುವಂತೆ  ಹೇಳುತ್ತಿದ್ದೇನೆ. ಅವರು ತಪ್ಪು ಮಾಡಿದರೆ ನಾನೇನು ಮಾಡಲಿ’ ಎಂದು ನಿರೂಪಕಿ ನಂದಿತಾ ದಾಸ್‌ ತಮ್ಮದೇನೂ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರು.

ಉದ್ಘಾಟನೆಗಾಗಿ ದೀಪ ಬೆಳಗಿಸುವ ಸಂದರ್ಭದಲ್ಲಿ ಬೆಂಕಿಪೊಟ್ಟಣ ಸಿಗದ ಸಚಿವ ಎಚ್. ಆಂಜನೇಯ ಪರದಾಡಿದರು. ಕೊನೆಗೂ ಅವರೇ ಹುಡುಕಿ ಮೇಣದ ಬತ್ತಿ  ಹೊತ್ತಿಸಿಕೊಂಡು ತಂದು ಗಣ್ಯರ ಕೈಗೆ ಕೊಟ್ಟರು.

ಕಾರ್ಯಕ್ರಮ ಕುರಿತು 5 ನಿಮಿಷದ ವಿಡಿಯೊ ಪ್ರಸಾರ ಮಾಡಲಾಯಿತು. ಈ ಸಂದರ್ಭದಲ್ಲಿ ವೇದಿಕೆ ಮೇಲಿದ್ದವರು ಕುರ್ಚಿಯ ಹಿಂದೆ ತಿರುಗಿ ನೋಡಬೇಕಾಯಿತು. ಇದರಿಂದ ಗರಂ ಆದ  ಸಚಿವ ಕೃಷ್ಣ ಬೈರೇಗೌಡ ಆಯೋಜಕರನ್ನು ತರಾಟೆಗೆ ತೆಗೆದುಕೊಂಡರು.

ನ್ಯಾಯ ಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತು ಆರಂಭಿಸುತ್ತಿದ್ದಂತೆ ಯುವಕನೊಬ್ಬ ‘ನ್ಯಾಯ ಬೇಕು’ ಎಂದು ಕೂಗಾಡಿದ ಪ್ರಸಂಗ ನಡೆಯಿತು.  ‘ದಲಿತರಿಗೆ ನ್ಯಾಯ ಬೇಕು, ಪೊಲೀಸ್ ವರದಿ ಜಾರಿಯಾಗಬೇಕು’ ಎಂದು ವೇದಿಕೆ ಏರಲು ಯತ್ನಿಸಿದ. ಪೊಲೀಸರು ಅವರನ್ನು ಹೊರಕ್ಕೆ ಕಳುಹಿಸಿದರು. ಕೂಗಾಡಿದ ಆ ವ್ಯಕ್ತಿ ಯಾರು, ಬೇಡಿಕೆ ಏನು ಎಂಬುದು ಯಾರಿಗೂ ಅರ್ಥವಾಗಲಿಲ್ಲ.

ನೀಲಿಮಯವಾದ ಜಿಕೆವಿಕೆ: ಸಮ್ಮೇಳನ ನಡೆಯುತ್ತಿರುವ  ಜಿಕೆವಿಕೆ ಆವರಣ ಸಂಪೂರ್ಣ ನೀಲಿಮಯವಾಗಿದೆ.

ಆವರಣದ ಪ್ರವೇಶದ್ವಾರದಿಂದ ಸಮ್ಮೇಳನ ನಡೆಯುತ್ತಿರುವ ಸಭಾಂಗಣದ ತನಕ ರಸ್ತೆಯ ಎರಡೂ ಬದಿಯಲ್ಲಿ ಕಟೌಟ್‌ಗಳು ರಾರಾಜಿಸುತ್ತಿವೆ.  ಮಾರ್ಟಿನ್‌ ಲೂಥರ್‌ ಕಿಂಗ್‌–3 ಹಾಗೂ ಇನ್ನಿತರ ಅಂತರರಾಷ್ಟ್ರೀಯ ಚಿಂತಕರ ಭಾವಚಿತ್ರಗಳು ಎಲ್ಲಿಯೂ ಕಾಣಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.