ADVERTISEMENT

ಬೆಟ್ಟಿಂಗ್ ದಂಧೆ: ಇಬ್ಬರ ಬಂಧನ

ವಿಶ್ವಕಪ್‌ ಕ್ರಿಕೆಟ್: ಬುಕ್ಕಿಗಳ ಮೇಲೆ ತೀವ್ರ ನಿಗಾ

​ಪ್ರಜಾವಾಣಿ ವಾರ್ತೆ
Published 29 ಜನವರಿ 2015, 19:36 IST
Last Updated 29 ಜನವರಿ 2015, 19:36 IST

ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್‌ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು, ₨ 7 ಲಕ್ಷ ನಗದು, ಲ್ಯಾಪ್‌ಟಾಪ್ ಹಾಗೂ ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ.

‘ಶಾಂತಿನಗರದ ವಿನಯ್‌ ಹಾಗೂ ಬಾಣಸವಾಡಿಯ ಆನಂದ್‌ ಎಂಬು ವರನ್ನು ಬಂಧಿಸಲಾಗಿದೆ. ಆರೋಪಿಗಳು ಬಿಗ್‌ಬ್ಯಾಷ್‌ ಟೂರ್ನಿಯ ಸಿಡ್ನಿ ಸಿಕ್ಸರ್ ಮತ್ತು ಪರ್ತ್‌ ಸ್ಕ್ರಾಚರ್ಸ್‌ ತಂಡಗಳ ನಡುವಣ ಪಂದ್ಯಕ್ಕೆ ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿಯಿಂದ ಬುಧವಾರ ರಾತ್ರಿ ಅವರ ಮನೆಗಳ ಮೇಲೆ ದಾಳಿ ನಡೆಸಿ ಬಂಧಿಸಲಾಯಿತು’ ಎಂದು ಸಿಸಿಬಿ ಡಿಸಿಪಿ ಅಭಿಷೇಕ್ ಗೋಯಲ್ ತಿಳಿಸಿದರು.

‘ಮುಂಬೈ ಮತ್ತು ಬೆಂಗಳೂರಿನಲ್ಲಿ ಬೆಟ್ಟಿಂಗ್ ದಂಧೆಯಲ್ಲಿ ಸಕ್ರಿಯರಾಗಿರುವವರನ್ನು ಆನ್‌ಲೈನ್‌ ಮೂಲಕ ಸಂಪರ್ಕಿಸುತ್ತಿದ್ದ ಆರೋಪಿಗಳು, ಪ್ರತಿ ಟೂರ್ನಿಗೂ ಅವರಿಂದ ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದರು. ಪಂದ್ಯಗಳು ಮುಗಿದ ಬಳಿಕ ಪರಸ್ಪರರು ಬ್ಯಾಂಕ್‌ ಮೂಲಕ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು. ಬಂಧಿತರ ವಿರುದ್ಧ ಕಲಾಸಿಪಾಳ್ಯ ಹಾಗೂ ಬಾಣಸವಾಡಿ ಠಾಣೆಗಳಲ್ಲಿ ಪ್ರತ್ಯೇಕ ದೂರು ದಾಖಲಿಸಲಾಗಿದೆ. ಈ ಜಾಲದ ಇತರೆ ಆರೋಪಿಗಳ ಶೋಧ ಮುಂದುವರಿದಿದೆ’ ಎಂದರು.

ವಿಶ್ವಕಪ್‌ಗೆ ನಿಗಾ: ‘ಫೆಬ್ರುವರಿ ತಿಂಗಳಿನಿಂದ ವಿಶ್ವಕಪ್‌ ಕ್ರಿಕೆಟ್ ಆರಂಭವಾಗಲಿದೆ. ಈ ವೇಳೆ ಹೆಚ್ಚು ಬೆಟ್ಟಿಂಗ್ ದಂಧೆ ನಡೆಯುವ ಬಗ್ಗೆ ಮಾಹಿತಿ ಬಂದಿದೆ. ಹೀಗಾಗಿ, ಬೆಟ್ಟಿಂಗ್ ದಂಧೆಯಲ್ಲಿ ತೊಡುಗುವವರ ಪತ್ತೆಗಾಗಿಯೇ ವಿಶೇಷ ತನಿಖಾ ತಂಡ ರಚಿಸಲಾಗಿದೆ’ ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದರು.

‘ಇಂಥ ಪ್ರಕರಣದಲ್ಲಿ ಈ ಹಿಂದೆ ಬಂಧಿತರಾಗಿ, ಬಿಡುಗಡೆಯಾಗಿರುವ ಆರೋಪಿಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಟೂರ್ನಿಯ ವೇಳೆ ಅನುಮಾನಾಸ್ಪದ ವ್ಯಕ್ತಿಗಳ ಮೊಬೈಲ್‌ ಕರೆಗಳನ್ನು ಕಾಲ ಕಾಲಕ್ಕೆ ಪರಿಶೀಲಿಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.