ADVERTISEMENT

ಬೇಡಿಕೆ ಆಧರಿಸಿ ಮೆಟ್ರೊ ಟ್ರಿಪ್‌ ಹೆಚ್ಚಳಕ್ಕೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2016, 19:47 IST
Last Updated 24 ಜುಲೈ 2016, 19:47 IST
ಬೇಡಿಕೆ ಆಧರಿಸಿ ಮೆಟ್ರೊ ಟ್ರಿಪ್‌ ಹೆಚ್ಚಳಕ್ಕೆ ಚಿಂತನೆ
ಬೇಡಿಕೆ ಆಧರಿಸಿ ಮೆಟ್ರೊ ಟ್ರಿಪ್‌ ಹೆಚ್ಚಳಕ್ಕೆ ಚಿಂತನೆ   

ಬೆಂಗಳೂರು: ಸಾರಿಗೆ ನಿಗಮಗಳ ನೌಕರರ ಮುಷ್ಕರದಿಂದ ಮೆಟ್ರೊ ರೈಲುಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಪ್ರಯಾಣಿಕರಿಂದ ಬರುವ ಬೇಡಿಕೆಯನ್ನು ಆಧರಿಸಿ ಮೆಟ್ರೊ ರೈಲುಗಳ ಟ್ರಿಪ್‌ ಸಂಖ್ಯೆ ಹೆಚ್ಚಿಸಲು ಬೆಂಗಳೂರು ಮೆಟ್ರೊ ರೈಲು ನಿಗಮವು ನಿರ್ಧರಿಸಿದೆ.

‘ಮೆಟ್ರೊ ಸಂಚಾರ ಬೆಳಿಗ್ಗೆ 6 ಗಂಟೆ ಯಿಂದ ಆರಂಭವಾಗಲಿದೆ. ಪ್ರಯಾಣಿಕರಿಂದ ಬೇಡಿಕೆ ಬಂದರೆ ಬೆಳಿಗ್ಗೆ ಮತ್ತು ಸಂಜೆ ಟ್ರಿಪ್‌ಗಳ ಸಂಖ್ಯೆ ಹೆಚ್ಚಿಸುತ್ತೇವೆ.  ಅಗತ್ಯಬಿದ್ದರೆ,   ಪ್ರತೀ ಆರು ನಿಮಿಷಕ್ಕೊಂದು  ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಲಿದ್ದೇವೆ. ನೇರಳೆ ಮಾರ್ಗದಲ್ಲೂ ರಾತ್ರಿ 11 ಗಂಟೆಯವರೆಗೆ ಪ್ರಯಾಣದ ಅವಧಿಯನ್ನು ವಿಸ್ತರಿಸುತ್ತೇವೆ’ ಎಂದು ನಿಗಮದ ವಕ್ತಾರ ವಸಂತ ರಾವ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೆಟ್ರೊ ಪ್ರಯಾಣ ಬಸ್‌ ಪ್ರಯಾಣಕ್ಕಿಂತ ಭಿನ್ನ. ನಿಲ್ದಾಣದಲ್ಲಿ ರೈಲು  30 ಸೆಕೆಂಡ್‌ಗಿಂತ ಹೆಚ್ಚು ಹೊತ್ತು ನಿಲ್ಲುವುದಿಲ್ಲ. ಪ್ರಯಾಣಿಕರು ಸಾಲಿನಲ್ಲಿ ನಿಂತು ರೈಲು ಪ್ರವೇಶಿಸುವ ಮೂಲಕ ಗೊಂದಲಕ್ಕೆ ಅವಕಾಶ ನೀಡಬಾರದು’ ಎಂದು ಅವರು ಮನವಿ ಮಾಡಿಕೊಂಡರು. 

ಬೈಕ್‌ ಸೇವೆ:  ‘ಬೈಯಪ್ಪನಹಳ್ಳಿ ನಿಲ್ದಾಣವೂ ಸೇರಿದಂತೆ ಐದು ನಿಲ್ದಾಣಗಳಲ್ಲಿ ಮೆಟ್ರೊ ಪ್ರಯಾಣಿಕರನ್ನು ಅವರು ಬಯಸಿದ ಸ್ಥಳಕ್ಕೆ ತಲುಪಿಸಲು ಖಾಸಗಿ ಬೈಕ್‌ ಸೇವೆ ಲಭ್ಯವಿದೆ. ಮುಷ್ಕರ ಇರುವ ದಿನಗಳಲ್ಲಿ ಇಲ್ಲಿ 80 ಬೈಕ್‌ಗಳನ್ನು  ಹೆಚ್ಚುವರಿಯಾಗಿ ಪೂರೈಸುವಂತೆ ಬೈಕ್‌ ಸೇವೆ ಒದಗಿಸುವ ವಿಕೆಡ್‌ ರೈಡ್‌ ಸಂಸ್ಥೆಯನ್ನು ಕೋರಿದ್ದೇವೆ’ ಎಂದರು.

‘ಪ್ರತಿಭಟನೆಯಿಂದಾಗಿ ಗೊಂದಲ ಉಂಟಾಗುವುದನ್ನು ತಡೆಯಲು ಮೆಟ್ರೊ ನಿಲ್ದಾಣಗಳಲ್ಲಿ ಹೆಚ್ಚುವರಿ ಭದ್ರತೆ ಒದಗಿಸಲಾಗುವುದು. ಪ್ರಯಾಣಿಕರ ಸಂಖ್ಯೆ ಹೆಚ್ಚು ಇರುವ ನಿರೀಕ್ಷೆ ಇದೆ. ಹಾಗಾಗಿ ಪ್ರತಿ ನಿಲ್ದಾಣದಲ್ಲಿ ನಿತ್ಯ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಸಹಕರಿಸಲು  ಅಧಿಕಾರಿಗಳನ್ನು  ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.