ADVERTISEMENT

ಬ್ರಿಗೇಡ್ ರಸ್ತೆಯಲ್ಲಿ ಪೊಲೀಸ್ ಕಣ್ಗಾವಲು

ಹೊಸ ವರ್ಷದ ಸಂಭ್ರಮಾಚರಣೆ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2015, 20:11 IST
Last Updated 30 ಡಿಸೆಂಬರ್ 2015, 20:11 IST

ಬೆಂಗಳೂರು: ಹೊಸ ವರ್ಷದ ಆಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸ­ಲಾಗಿದೆ. ಅಲ್ಲದೆ, ಸಂಭ್ರಮಾಚರಣೆ ಕಾರಣದಿಂದ ಗುರುವಾರ (ಡಿ.31) ರಾತ್ರಿ ನಗರದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ಸುತ್ತಮುತ್ತಲ ರಸ್ತೆ­ಗಳಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ ನಗರ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ.

19 ಸಾವಿರ ಪೊಲೀಸರು, ರಾಜ್ಯ ಮೀಸಲು ಪೊಲೀಸ್‌ ಪಡೆಯ (ಕೆಎಸ್‌­ಆರ್‌ಪಿ) 26  ತುಕಡಿ­ಗಳು ಹಾಗೂ ನಗರ ಮೀಸಲು ಪೊಲೀಸ್‌ ಪಡೆಯ (ಸಿಎಆರ್) 15 ತುಕಡಿಗಳನ್ನು ಭದ್ರತೆಗೆ ನಿಯೋ­ಜಿಸ­ಲಾಗಿದೆ.

ಬ್ರಿಗೇಡ್ ಕೇಂದ್ರಬಿಂದು: ‘ನಗರದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಸಂಭ್ರಮಾ­ಚರಣೆಗೆ ಹೆಚ್ಚಿನ ಜನ ಸೇರುವುದರಿಂದ ಈ ಸ್ಥಳಗಳಲ್ಲಿ ಹದ್ದಿನ ಕಣ್ಣಿಡಲಾಗಿದೆ. 12 ಅಡಿ ಎತ್ತರದ 10 ವೀಕ್ಷಣಾ ಗೋಪುರಗಳನ್ನು (ವಾಚ್ ಟವರ್‌) ನಿರ್ಮಿಸಲಾಗಿದ್ದು, ಸಿಬ್ಬಂದಿ ಅದರ ಮೇಲೆ ನಿಂತು ಸಂಭ್ರಮಾಚರಣೆಯ ದೃಶ್ಯಗಳನ್ನು ಸೆರೆ ಹಿಡಿಯುತ್ತಾರೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

‘ಈ ಪ್ರದೇಶಗಳಲ್ಲಿ 103 ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವ­ಡಿ­ಸಿದ್ದು, 10 ಎಸಿಪಿ, 24 ಇನ್‌ಸ್ಪೆಕ್ಟರ್, 65 ಎಸ್‌ಐ, 67 ಎಎಸ್‌ಐ, 252 ಎಚ್‌ಸಿ, 503 ಕಾನ್‌ಸ್ಟೆಬಲ್‌, 46 ಮಹಿಳಾ ಕಾನ್‌ಸ್ಟೆಬಲ್, 12 ಕೆಎಸ್‌ಆರ್‌ಪಿ ಹಾಗೂ ಎರಡು ಕ್ರಿಪ್ರ ಪ್ರತಿಕ್ರಿಯಾ ತಂಡಗಳು (ಕ್ಯೂಆರ್‌ಟಿ) ಭದ್ರತೆ ಒದಗಿಸಲಿವೆ.

‘ಕುಂಬ್ಳೆ ವೃತ್ತ ಹಾಗೂ ಕಾವೇರಿ ಎಂಪೋರಿಯಂ ಬಳಿ ಲೋಹ ಶೋಧಕ ಉಪಕರಣಗಳನ್ನು ಹಾಕಲಾಗಿದೆ. ಅಲ್ಲಿ ತಪಾಸಣೆಗೆ ಒಳಪಡಿಸಿದ ಬಳಿಕವೇ ಜನರನ್ನು ಮುಂದೆ ಬಿಡಲಾಗುವುದು. ಈ ಭಾಗದ ಕ್ಲಬ್‌, ರೆಸ್ಟೋರೆಂಟ್‌, ಹೋಟೆಲ್‌ಗಳ ಮಾಲೀಕರ ಜತೆ ಈಗಾಗಲೇ ಸಭೆ ನಡೆಸಲಾಗಿದ್ದು, ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ಭದ್ರತೆಯಲ್ಲಿ ವಹಿವಾಟು ನಡೆಸುವಂತೆ ಸೂಚಿಸಲಾಗಿದೆ’ ಎಂದು ಸಂದೀಪ್ ಪಾಟೀಲ್‌ ಹೇಳಿದ್ದಾರೆ.

ಸಂಚಾರ ಬದಲು: ಬ್ರಿಗೇಡ್ ಜಂಕ್ಷನ್‌ ಸುತ್ತಮುತ್ತಲ ರಸ್ತೆಗಳ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಅನಿಲ್ ಕುಂಬ್ಳೆ ವೃತ್ತ­ದಿಂದ ಮೆಯೋಹಾಲ್, ಬ್ರಿಗೇಡ್ ರಸ್ತೆಯಿಂದ ಒಪೆರಾ ಜಂಕ್ಷನ್, ಚರ್ಚ್‌ಸ್ಟ್ರೀಟ್‌ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್, ಎಂ.ಜಿ.ರಸ್ತೆಯಿಂದ ಹಳೆ ಮದ್ರಾಸ್ ರಸ್ತೆ, ರೆಸ್ಟ್ ಹೌಸ್ ಜಂಕ್ಷನ್‌­ನಿಂದ ಮ್ಯೂಸಿಯಂ ಜಂಕ್ಷನ್, ಕಾಮ­ರಾಜ ರಸ್ತೆಯಿಂದ ಕಬ್ಬನ್ ರಸ್ತೆ, ರೆಸಿಡೆನ್ಸಿ ರಸ್ತೆಯಿಂದ ಎಂ.ಜಿ.ರಸ್ತೆ­ವರೆಗೆ ವಾಹನಗಳ ಓಡಾಟವನ್ನು ಗುರುವಾರ (ಡಿ.31) ರಾತ್ರಿ 8 ಗಂಟೆ­ಯಿಂದ ಮಧ್ಯರಾತ್ರಿ ಒಂದು ಗಂಟೆವರೆಗೆ ನಿಷೇಧಿಸ­ಲಾಗಿದೆ.

ಎಲ್ಲೆಲ್ಲಿ ಮಾರ್ಗ ಬದಲು:  ರಾತ್ರಿ 8 ಗಂಟೆ ನಂತರ ಕ್ವೀನ್ಸ್ ಪ್ರತಿಮೆ ಜಂಕ್ಷನ್ ಮೂಲಕ ಎಂ.ಜಿ.ರಸ್ತೆ ಹಾಗೂ ಹಲ­ಸೂರು ಕಡೆ ಸಾಗುವ ವಾಹನಗಳು, ಅನಿಲ್ ಕುಂಬ್ಳೆ ವೃತ್ತದ ಬಿಆರ್‌ವಿ ಜಂಕ್ಷನ್‌­ನಲ್ಲಿ ಎಡ ತಿರುವು ಪಡೆದು, ಬಳಿಕ ಕಬ್ಬನ್ ರಸ್ತೆಯಲ್ಲಿ ಬಲತಿರುವು ಪಡೆದುಕೊಳ್ಳುವ ಮೂಲಕ ಎಂ.ಜಿ.­ರಸ್ತೆ ಸೇರಬಹುದು.

ಹಲಸೂರು ಕಡೆಯಿಂದ ದಂಡು ರೈಲು ನಿಲ್ದಾ­ಣದ ಕಡೆ ಹೋಗುವ ವಾಹನಗಳು, ಟ್ರಿನಿಟಿ ವೃತ್ತ­ದಲ್ಲಿ ಬಲ ತಿರುವು ಪಡೆದು ಹಲಸೂರು ರಸ್ತೆ ಸೇರಬೇಕು. ಬಳಿಕ, ಎಡತಿರುವು ಪಡೆದು ಡಿಕೆ­ನ್ಶನ್ ರಸ್ತೆ ಮೂಲಕ ಕಬ್ಬನ್ ರಸ್ತೆಗೆ ಹೋಗ­ಬಹುದು.

ನಿಲುಗಡೆ ನಿಷೇಧ: ಅನಿಲ್ ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತ, ಬ್ರಿಗೇಡ್ ರಸ್ತೆಯಿಂದ ಒಪೆರಾ ಜಂಕ್ಷನ್, ಬ್ರಿಗೇಡ್ ರಸ್ತೆಯಿಂದ ಸೇಂಟ್ ಮಾರ್ಕ್ಸ್ ರಸ್ತೆ, ರೆಸ್ಟ್ ಹೌಸ್ ರಸ್ತೆ ಜಂಕ್ಷನ್‌ನಿಂದ ಮ್ಯೂಸಿಯಂ ರಸ್ತೆ, ಎಂ.ಜಿ.ರಸ್ತೆಯಿಂದ ಹಳೆ ಮದ್ರಾಸ್ ರಸ್ತೆವರೆಗೆ ಸಂಜೆ 4 ಗಂಟೆಯಿಂದ ಬೆಳಗಿನ ಜಾವ 3 ಗಂಟೆವರೆಗೆ ವಾಹನ ನಿಲುಗಡೆ ನಿಷೇಧಿಸ­ಲಾಗಿದೆ. ಸಂಜೆ 4 ಗಂಟೆ ಒಳಗೆ ವಾಹನ ತೆರವುಗೊಳಿಸದಿದ್ದರೆ ಟೋ ಮಾಡಿ ದಂಡ ವಿಧಿಸಲಾಗುವುದು ಎಂದು ಸಂಚಾರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ನಿಲುಗಡೆ ಎಲ್ಲೆಲ್ಲಿ: ಕಾಮರಾಜ ರಸ್ತೆ ಜಂಕ್ಷನ್‌ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್‌ನವರೆಗೆ ರಸ್ತೆಯ ಎರಡೂ ಬದಿ­ಯಲ್ಲೂ ವಾಹನ ನಿಲುಗಡೆ ಮಾಡ­­ಬಹುದು. ಶಿವಾಜಿನಗರ ಬಸ್ ನಿಲ್ದಾಣ­ದಲ್ಲಿರುವ ಬಿಎಂಟಿಸಿ ಶಾಪಿಂಗ್ ಕಾಂಪ್ಲೆಕ್ಸ್‌ನ ಒಂದನೇ ಮಹಡಿಯಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ‘ಹೊಸ ವರ್ಷದ ಸಂಭ್ರಮಾಚರಣೆ ನಂತರ ಮೇಲ್ಸೇತುವೆಗಳಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸಿರುವುದು ಹಿಂದಿನ ದಾಖಲೆಗಳಿಂದ ಗೊತ್ತಾಗಿದೆ. ಹೀಗಾಗಿ ಡಿ.31ರ ರಾತ್ರಿ 9 ಗಂಟೆಯಿಂದ ಜ.1ರ ಬೆಳಗಿನ ಜಾವ ಆರು ಗಂಟೆವರೆಗೆ ಮೇಲ್ಸೇತುವೆಗಳಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ’ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

‘ಕಾರು ಚಾಲನೆ ಮಾಡುವ ವ್ಯಕ್ತಿ ಮದ್ಯಪಾನ ಮಾಡದಂತೆ ನೋಡಿಕೊಳ್ಳ­ಬೇಕು. ಇದರಿಂದ ಚಾಲಕ,  ಪಾನಮತ್ತ ಸ್ನೇಹಿತರನ್ನು ಅವರವರ ಮನೆಗಳಿಗೆ ಸುರಕ್ಷಿತ­ವಾಗಿ ತಲುಪಿಸಬಹುದು. ಜತೆಗೆ, ಇತರೆ ವಾಹನ ಸವಾರರ ಹಾಗೂ ಪಾದಚಾರಿ­ಗಳ ಸುರಕ್ಷತೆ ಕಾಪಾಡುವ ಮೂಲಕ ಹೊಸ ವರ್ಷವನ್ನು ಅಪ­ಘಾತ ಮುಕ್ತವಾಗಿ ಸ್ವಾಗತಿಸಬೇಕು’ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ರೆವರೆಂಡ್ ಪಾಲ್  ಭಾಷಣ: ಹೊಸ ವರ್ಷದ ಅಂಗವಾಗಿ ಅರಮನೆ ಮೈದಾನ ತ್ರಿಪುರಾ ವಾಸಿನಿ ಪ್ರವೇಶದ್ವಾರದಲ್ಲಿ ಗುರುವಾರ (31) ರಾತ್ರಿ 10 ರಿಂದ 12.30ರವರೆಗೆ  ಮೆರವಣಿಗೆಯನ್ನು  ಹಮ್ಮಿಕೊಳ್ಳಲಾಗಿದೆ.

ಮೆರವಣಿಗೆಯಲ್ಲಿ ಮೂವತ್ತು ಸಾವಿರ ಜನ ಪಾಲ್ಗೊಳ್ಳಲಿದ್ದಾರೆ. ಪಾಸ್ಟರ್  ರೆವರೆಂಡ್ ಪಾಲ್ ತಂಗಯ್ಯ  ಭಾಷಣ ಮಾಡಲಿದ್ದಾರೆ.

ಆಸಕ್ತರು ಭಾಗವಹಿಸಬಹುದು. ಪ್ರವೇಶ ಮತ್ತು  ವಾಹನ ನಿಲುಗಡೆ  ಉಚಿತವಾಗಿದೆ. ಸಂಪರ್ಕಕ್ಕೆ: ದೂರವಾಣಿ 080–4511 1777
***

ಡ್ರ್ಯಾಗ್‌ ರೇಸ್‌ ಮಾಡುವ ವಿರುದ್ಧ ಕ್ರಮ ಕೈಗೊಳ್ಳಲಾಗು­ವುದು. ಅಂಥ ಘಟನೆ ಕಂಡು ಬಂದಲ್ಲಿ ನಿಯಂತ್ರಣ ಕೊಠಡಿ 100 ಹಾಗೂ ಸಹಾಯವಾಣಿ 103 ಸಂಖ್ಯೆಗೆ ಕರೆ ಮಾಡಿ.
-ಎನ್.ಎಸ್.ಮೇಘರಿಕ್, ಪೊಲೀಸ್ ಕಮಿಷನರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.