ADVERTISEMENT

ಭವಿಷ್ಯ ನಿಧಿ ಕರಡು ಸಲ್ಲಿಕೆ

ಕಾರ್ಮಿಕ ಉಪ ಆಯುಕ್ತ ಬಿ.ಎಸ್‌. ಶ್ರೀಪಾದ್‌

​ಪ್ರಜಾವಾಣಿ ವಾರ್ತೆ
Published 28 ಜೂನ್ 2016, 19:30 IST
Last Updated 28 ಜೂನ್ 2016, 19:30 IST
ಕೆ.ಎನ್‌. ಉಮೇಶ್‌ ಹಾಗೂ ಬಿ.ಎಸ್‌.ಶ್ರೀಪಾದ್‌ ಅವರು ಪರಸ್ಪರ ಮಾತುಕತೆ ನಡೆಸಿದರು. ಸಿಐಟಿಯು ಬೆಂಗಳೂರು ದಕ್ಷಿಣ ಘಟಕದ ಉಪಾಧ್ಯಕ್ಷ ಕೆ.ಪ್ರಕಾಶ್‌ ಇದ್ದಾರೆ –ಪ್ರಜಾವಾಣಿ ಚಿತ್ರ
ಕೆ.ಎನ್‌. ಉಮೇಶ್‌ ಹಾಗೂ ಬಿ.ಎಸ್‌.ಶ್ರೀಪಾದ್‌ ಅವರು ಪರಸ್ಪರ ಮಾತುಕತೆ ನಡೆಸಿದರು. ಸಿಐಟಿಯು ಬೆಂಗಳೂರು ದಕ್ಷಿಣ ಘಟಕದ ಉಪಾಧ್ಯಕ್ಷ ಕೆ.ಪ್ರಕಾಶ್‌ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಅಸಂಘಟಿತ ಕಾರ್ಮಿಕರಿ ಗಾಗಿ ರೂಪಿಸಿರುವ ಭವಿಷ್ಯ ನಿಧಿ ಯೋಜನೆಯ ಕರಡನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ’ ಎಂದು ಕಾರ್ಮಿಕ ಇಲಾಖೆಯ ಉಪ  ಆಯುಕ್ತ ಬಿ.ಎಸ್‌. ಶ್ರೀಪಾದ್‌ ಹೇಳಿದರು. ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಸಂಘಟಿತ ಕಾರ್ಮಿಕರಿಗೆ ಭವಿಷ್ಯ ನಿಧಿ ಯೋಜನೆ ಜಾರಿಗೊಳಿಸಬೇಕೆಂಬ ಕೂಗು ಸಿಐಟಿಯು ಸೇರಿದಂತೆ ಹಲವು ಕಾರ್ಮಿಕ ಸಂಘಟನೆಗಳಿಂದ ಕೇಳಿಬಂದಿತ್ತು. ಪಶ್ಚಿಮ ಬಂಗಾಳದಲ್ಲಿ 2001 ರಲ್ಲೇ ಅಸಂಘಟಿತ ಕಾರ್ಮಿಕರ ಭವಿಷ್ಯ ನಿಧಿ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಮಧ್ಯ ಪ್ರದೇಶದಲ್ಲೂ ಭವಿಷ್ಯ ನಿಧಿ ಯೋಜನೆ ಜಾರಿಯಲ್ಲಿದೆ. ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ ಯೋಜನೆಯ ಸಾಧಕ–ಬಾಧಕಗಳನ್ನು ಅಧ್ಯಯನ ಮಾಡಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ’ ಎಂದು ಹೇಳಿದರು.

‘2008ರಲ್ಲಿ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ ಜಾರಿಗೆ ಬಂದಿದೆ. ಕೇಂದ್ರ, ರಾಜ್ಯ ಸರ್ಕಾರಗಳು ಸಾಮಾಜಿಕ ಸುರಕ್ಷತಾ ನಿಧಿ ಸ್ಥಾಪಿಸಿ ಅದಕ್ಕೆ ಅಗತ್ಯವಾದ ಅನುದಾನ ಬಿಡುಗಡೆ ಮಾಡಬೇಕು ಎಂದು ಕಾಯ್ದೆ ಹೇಳುತ್ತದೆ. ಜತೆಗೆ, ಭವಿಷ್ಯ ನಿಧಿ, ಅನಾರೋಗ್ಯ ಭತ್ಯೆ, ಪಿಂಚಣಿ, ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ, ಮದುವೆಗೆ ಸಹಾಯಧನ, ಮನೆಗೆ ಸಾಲ ನೀಡಬೇಕೆಂದೂ ಕಾಯ್ದೆ ಹೇಳುತ್ತದೆ’ ಎಂದರು.

‘ರಾಜ್ಯ ಸರ್ಕಾರ 2009ರಲ್ಲಿ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸ್ಥಾಪಿಸಲಾಗಿದ್ದು, ಇದರಡಿಯಲ್ಲಿ ಭವಿಷ್ಯ ನಿಧಿ ಯೋಜನೆ ಜಾರಿಗೆ ತರುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು’ ಎಂದು ಹೇಳಿದರು. 

‘ಕಾರ್ಮಿಕರಿಗಾಗಿ ಹಲವು ಯೋಜನೆ ಜಾರಿಗೊಳಿಸಿದ್ದು,  ಇವು ಗಳಿಗೆ ಅನ್ವಯವಾಗುವ ಬಹೋಪ ಯೋಗಿ ಸ್ಮಾರ್ಟ್‌ಕಾರ್ಡ್‌ ನೀಡುವ ಕುರಿತು ಹಿರಿಯ ಅಧಿಕಾರಿಗಳ ಗಮನ ಸೆಳೆದಿದ್ದೇನೆ’ ಎಂದು ಹೇಳಿದರು.ಸಿಐಟಿಯು ಬೆಂಗಳೂರು ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎನ್‌. ಉಮೇಶ್‌ ಅವರು ಮಾತನಾಡಿದರು.

ಯೋಜನೆಯ ಮುಖ್ಯಾಂಶಗಳು

* 18ರಿಂದ 60 ವರ್ಷದೊಳಗಿನ ಕಾರ್ಮಿಕರು ಈ ಯೋಜನೆಯ ಅನುಕೂಲ ಪಡೆಯಬಹುದು.
* ಕಾರ್ಮಿಕರು ಪ್ರತಿ ತಿಂಗಳು ₹ 50 ಪಾವತಿಸಿದರೆ, ಇದಕ್ಕೆ ಸರ್ಕಾರ   ₹50 ನೀಡುತ್ತದೆ.
* 18ರಿಂದ 60 ವರ್ಷದವರೆಗೆ ಒಟ್ಟು ₹  25,200 ಪಾವತಿಸಬೇಕಾಗಿದ್ದು, ಸರ್ಕಾರದ ಪಾಲು ಹಾಗೂ ಬಡ್ಡಿ ಸೇರಿ  ₹4.27 ಲಕ್ಷ ಸಿಗಲಿದೆ.
*  5 ವರ್ಷದೊಳಗೆ ಹಣ ತೆಗೆದುಕೊಳ್ಳಲು ಅವಕಾಶವಿಲ್ಲ.
*  ₹ 2 ಸಾವಿರದವರೆಗೆ ಸಾಲ ಪಡೆಯಬಹುದು.
* ಕಾರ್ಮಿಕರು ಮೃತಪಟ್ಟರೆ ಅವರು ನಾಮನಿರ್ದೇಶಿಸಿದ ವ್ಯಕ್ತಿಗೆ ಹಣ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT