ADVERTISEMENT

ಮಾತೃ ಇಲಾಖೆಗೆ ಸಿಸಿಎಫ್‌: ಮೇಯರ್‌

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2014, 19:30 IST
Last Updated 29 ಸೆಪ್ಟೆಂಬರ್ 2014, 19:30 IST

ಬೆಂಗಳೂರು: ‘ಬಿಬಿಎಂಪಿ ಮುಖ್ಯ ಅರಣ್ಯ ಸಂರಕ್ಷಣಾ­ಧಿಕಾರಿ (ಸಿಸಿಎಫ್‌) ಬ್ರಿಜೇಶ್‌ಕುಮಾರ್‌ ಅವರನ್ನು ಆ ಹೊಣೆಯಿಂದ ಬಿಡುಗಡೆ ಮಾಡಿ ಮಾತೃ ಇಲಾಖೆಗೆ ಕಳುಹಿಸಲು ಕ್ರಮ ಕೈಗೊಳ್ಳಬೇಕು’ ಎಂದು ಮೇಯರ್‌ ಎನ್‌.ಶಾಂತಕುಮಾರಿ ಆಯುಕ್ತರಿಗೆ ಸೂಚಿಸಿದರು.

ಸೋಮವಾರ ನಡೆದ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಸಿಸಿಎಫ್‌ ಹುದ್ದೆ ರದ್ದುಗೊಳಿಸಲು ಎಲ್ಲ ಸದಸ್ಯರಿಂದ ಒತ್ತಾಯ ಕೇಳಿಬಂದಾಗ ಅವರು ಈ ಸೂಚನೆ ನೀಡಿದರು.

‘ಬಿಬಿಎಂಪಿಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್‌) ಹುದ್ದೆ ಅಗತ್ಯವಿಲ್ಲ. ಹೀಗಾಗಿ ಆ ಹುದ್ದೆ­ಯಲ್ಲಿರುವ ಬ್ರಿಜೇಶ್‌ಕುಮಾರ್‌ ಅವರನ್ನು ಮಾತೃ ಇಲಾಖೆಗೆ ಕಳುಹಿಸಬೇಕು. ನಾಲ್ಕು ತಿಂಗಳ ಹಿಂದೆಯೇ ಈ ಕುರಿತು ನಿರ್ಣಯವಾಗಿದ್ದರೂ ಇದುವರೆಗೆ ಅನು­ಷ್ಠಾನಕ್ಕೆ ಬಂದಿಲ್ಲ’ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆಯಿಂದ ಹೈಕೋರ್ಟ್‌ಗೆ ನೀಡಿದ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಒದಗಿಸದೆ ಆ ವಿಷಯವನ್ನು ಕೌನ್ಸಿಲ್‌ ಒಪ್ಪಿಗೆಗೆ ಮಂಡಿಸಿದ ಪ್ರಸ್ತಾವಕ್ಕೂ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಪ್ರಕರಣಕ್ಕೆ ಸಂಬಂಧಿಸಿದ ಕಡತ­ದೊಂದಿಗೆ ಮುಂದಿನ ಸಭೆಗೆ ಮತ್ತೆ ಪ್ರಸ್ತಾವ ತರಲಾ­ಗುವುದು ಎಂದು ಆಯುಕ್ತರು ಸ್ಪಷ್ಟನೆ ನೀಡಿದರು.

ವಿಳಂಬವಾಗಿ ಆಸ್ತಿ ದಾಖಲೆ ಒದಗಿಸಿದ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಮಂಡಿಸಲಾಗಿದ್ದ ಪ್ರಸ್ತಾವಕ್ಕೆ ಕಾಂಗ್ರೆಸ್‌ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕಾನೂನು ಕೋಶದ ಅಧಿಕಾರಿಗಳು ಸಭೆಯನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ದೂರಿದರು. ಕೆಲವು ಕಡತಗಳನ್ನು ಇಂಗ್ಲಿಷ್‌ನಲ್ಲಿ ಮಂಡಿಸಿದ್ದಕ್ಕೂ ವಿರೋಧ ವ್ಯಕ್ತವಾಯಿತು. ‘ಇನ್ನು ಮುಂದೆ ಎಲ್ಲ ಕಡತಗಳನ್ನೂ ಕನ್ನಡದಲ್ಲೇ ಮಂಡಿಸಬೇಕು’ ಎಂದು ಮೇಯರ್‌ ಆದೇಶಿಸಿದರು.

ಇಸ್ರೊ ವಿಜ್ಞಾನಿಗಳಿಗೆ ಅಭಿನಂದನೆ: ಮಂಗಳ ಯಾನ ಯೋಜನೆಯನ್ನು ಯಶಸ್ವಿಗೊಳಿ­ಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ವಿಜ್ಞಾನಿಗ­ಳಿಗೆ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಸೋಮವಾರ ಸದಸ್ಯರು ಎದ್ದುನಿಂತು ಅಭಿನಂದನೆ ಸಲ್ಲಿಸಿದರು.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ರಾಜ್ಯದವರೇ ಆದ ನ್ಯಾ. ಎಚ್‌.ಎಲ್‌. ದತ್ತು ಅವರನ್ನೂ ಸಭೆ ಅಭಿನಂದಿಸಿತು. ಬಿಬಿಎಂಪಿ ಪರವಾಗಿ ಅವರಿಗೆ ಪೌರ ಸನ್ಮಾನ ಮಾಡಲು ಉದ್ದೇಶಿಸಲಾಗಿದೆ ಎಂದು ಆಡಳಿತ ಪಕ್ಷದ ನಾಯಕ ಅಶ್ವತ್ಥನಾರಾಯಣ ಗೌಡ ಹೇಳಿದರು.

ತೆರಿಗೆ ಹೆಚ್ಚಳ ಪ್ರಸ್ತಾವ ಮುಂದೂಡಿಕೆ
ಆಸ್ತಿ ತೆರಿಗೆ ದರ ಹೆಚ್ಚಳಕ್ಕೆ ಸಂಬಂಧಿ­ಸಿದ ಪ್ರಸ್ತಾವವನ್ನು ಬಿಬಿಎಂಪಿ ಕೌನ್ಸಿಲ್‌ ಸಭೆ ಸೋಮ­ವಾರ ಮುಂದೂಡಿತು. ನಗರಾಭಿ­ವೃದ್ಧಿ ಇಲಾಖೆ ಸೂಚನೆ ಮೇರೆಗೆ ಬಿಬಿಎಂಪಿ ಆಯುಕ್ತರು ಈ ಪ್ರಸ್ತಾವ­ವನ್ನು ಸಭೆ ಮುಂದೆ ಮಂಡಿಸಿದ್ದರು. ವಸತಿ ಕಟ್ಟಡಗಳಿಗೆ ಶೇ 20 ಹಾಗೂ ವಸತಿಯೇತರ ಕಟ್ಟಡಗಳಿಗೆ ಶೇ 25ರಷ್ಟು ತೆರಿಗೆ ಹೆಚ್ಚಿಸುವ ಪ್ರಸ್ತಾವ ಮಾಡಲಾ­ಗಿತ್ತು. ಈ ಪರಿಷ್ಕೃತ ದರಗಳು 2015 ಏಪ್ರಿಲ್‌ 1ರಿಂದ ಜಾರಿಗೆ ಬರಲಿವೆ ಎಂದು ಅದರಲ್ಲಿ ವಿವರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.