ADVERTISEMENT

ಮಾವು, ಹಲಸು ಮೇಳಕ್ಕೆ ಸಿ.ಎಂ. ಚಾಲನೆ

ಬೋ ಚಂದಾಗದೆ , ನೀವು ರುಚಿ ನೋಡಿ

​ಪ್ರಜಾವಾಣಿ ವಾರ್ತೆ
Published 29 ಮೇ 2015, 20:21 IST
Last Updated 29 ಮೇ 2015, 20:21 IST

ಬೆಂಗಳೂರು: ಮಾವು, ಹಲಸು ಮಾರಾಟ ಮೇಳ ಹಾಗೂ ಪ್ರದರ್ಶನಕ್ಕೆ ನಗರದ ಲಾಲ್‌ಬಾಗ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಚಾಲನೆ ನೀಡಿದರು.

ಬಳಿಕ ಪತ್ರಕರ್ತರೊಂದಿಗೆ ಮಾತ­ನಾ­ಡಿದ ಅವರು, ‘ಈ ಮೇಳದಿಂದ ರೈತರು ಮತ್ತು ಗ್ರಾಹಕರಿಬ್ಬರಿಗೂ ಪ್ರಯೋಜನವಾಗಲಿದೆ. ರೈತರಿಗೆ ಮಾರು­ಕಟ್ಟೆ ದೊರೆತರೆ, ಜನರಿಗೆ ಕಾರ್ಬೈಡ್‌­ಮುಕ್ತ, ರುಚಿಯಾದ ಹಣ್ಣುಗಳು ಸಿಗಲಿವೆ’ ಎಂದರು.

‘ಆಯಾ ಸೀಸನ್‌ನಲ್ಲಿ ಬರುವ ಹಣ್ಣು­ಗಳನ್ನು ತಿನ್ನಬೇಕು. ಇದು ಆರೋಗ್ಯಕ್ಕೆ ಒಳ್ಳೆಯದು. ನನ್ನನ್ನೇ ನೋಡಿ, ನನಗೇ ಮಧುಮೇಹವಿದ್ದರೂ ಮಾವಿನ ಹಣ್ಣು ತಿನ್ನುತ್ತೇನೆ’ ಎಂದರು.

ಮಾವಿನ ಹಣ್ಣು  ಖರೀದಿಸಿದ ಸಿ.ಎಂ: ಈ ಮಧ್ಯೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಬಂಗಾರ ತಿರುಪತಿ

ಗುಟ್ಟಹಳ್ಳಿ ಗ್ರಾಮದ ಗೋಕುಲ್‌ ಆರ್ಚರ್ಡ್ಸ್‌ ಮಳಿಗೆಗೆ ಭೇಟಿ ನೀಡಿ ಬಾದಾಮಿ ಮಾವಿನ ಹಣ್ಣಿನ ರುಚಿ ನೋಡಿದರು.

‘ಹಣ್ಣು ಬಹಳ ರುಚಿಯಾಗಿದೆ. ನನಗೇ ಹತ್ತು ಕೆ.ಜಿ ಹಣ್ಣು ಕೊಡಿ’ ಎಂದು ಸಾವಿರ ರೂಪಾಯಿ ನೋಟು ನೀಡಿದರು. ಮಳಿಗೆಯಲ್ಲಿದ್ದ ಇಮ್ತಿಯಾಜ್‌ ಅವರು, ತಲಾ ಐದು ಕೆ.ಜಿ ದಶೇರಿ, ಬಾದಾಮಿ ಮಾವು ನೀಡಿ, ₨200 ರೂಪಾಯಿ  ಹಿಂತಿರುಗಿಸಿದರು.

ಮತ್ತೆ ಮಾತು ಮುಂದುವರಿಸಿದ ಸಿದ್ದರಾಮಯ್ಯ ಅವರು, ‘ನಮ್ಮ ತೋಟ­ದಲ್ಲಿ ನೀಲಂ, ರಸಪುರಿ, ತೋತಾಪುರಿ ಮಾವಿನ ಗಿಡಗಳಿದ್ದವು. ಚಿಕ್ಕವರಿದ್ದಾಗ ಆ ಗಿಡದ ಹಣ್ಣು  ತಿನ್ನುತ್ತಿದ್ದೆವು’ ಎಂದು ನೆನಪಿಸಿಕೊಂಡರು.

‘ಹಸಿವು ಆದಾಗ ಹಲಸಿನ ಹಣ್ಣು ತಿನ್ನಬೇಕು. ಏಕೆಂದರೆ ಅದು ಸ್ವಲ್ಪ ನಿಧಾನವಾಗಿ ಜೀರ್ಣವಾಗುತ್ತದೆ. ಆದರೆ, ಮಾವಿನಹಣ್ಣು ಬೇಗ ಜೀರ್ಣಗೊಳ್ಳುತ್ತದೆ.  ಈ ಕಾರಣದಿಂದಲೇ ಇದನ್ನು ಊಟದ ನಂತರ ತಿನ್ನುತ್ತಾರೆ. ಇದರ ಘಮಲು, ಬಣ್ಣ ಹಾಗೂ ರುಚಿಯ ಕಾರಣಕ್ಕಾಗಿ ಇದನ್ನು ಹಣ್ಣುಗಳ ರಾಜಾ ಎನ್ನುತ್ತಾರೆ’ ಎಂದು ಅದರ ವಿಶೇಷತೆ ವಿವರಿಸಿದರು.

‘ರಾಜ್ಯದಲ್ಲಿ 1.72 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ.  ವಿಶೇಷವಾಗಿ ಕೋಲಾರ, ರಾಮನಗರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಬೆಳೆಯುವ ಮಾವು ರಫ್ತು ಮಾಡುವ ಗುಣಮಟ್ಟ­ದ್ದಾಗಿರುತ್ತದೆ’ ಎಂದರು.

‘ಮೇಳದಲ್ಲಿ 105 ಮಾವಿನ ಹಾಗೂ 20 ಹಲಸಿನ ಹಣ್ಣಿನ ಮಳಿಗೆಗಳಿವೆ’ ಎಂದು ಮಾವು ತಳಿ ಅಭಿವೃದ್ಧಿ ಮತ್ತು ಮಾರಾಟ ಮಂಡಳಿ ಅಧ್ಯಕ್ಷೆ ಕಮಲಾಕ್ಷಿ ರಾಜಣ್ಣ ತಿಳಿಸಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಜರಿದ್ದರು. ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಜಂಟಿಯಾಗಿ ಮೇಳ ಆಯೋಜಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT