ADVERTISEMENT

ಮುಂದುವರಿದ ಮಳೆ: ಜನಜೀವನ ಅಸ್ತವ್ಯಸ್ತ

ಮನೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 27 ಮೇ 2017, 19:52 IST
Last Updated 27 ಮೇ 2017, 19:52 IST
ಇಂದಿರಾನಗರದ ಬಿಡಿಎ ಕಾಂಪ್ಲೆಕ್ಸ್‌ ಬಳಿ ಶುಕ್ರವಾರ ರಾತ್ರಿ ನೆಲಕ್ಕುರುಳಿದ್ದ ಮರದ ಕೆಳಗೆಯೇ ಸವಾರರು ಬೈಕ್‌ ಚಲಾಯಿಸಿಕೊಂಡು ಹೋದರು.
ಇಂದಿರಾನಗರದ ಬಿಡಿಎ ಕಾಂಪ್ಲೆಕ್ಸ್‌ ಬಳಿ ಶುಕ್ರವಾರ ರಾತ್ರಿ ನೆಲಕ್ಕುರುಳಿದ್ದ ಮರದ ಕೆಳಗೆಯೇ ಸವಾರರು ಬೈಕ್‌ ಚಲಾಯಿಸಿಕೊಂಡು ಹೋದರು.   

ಬೆಂಗಳೂರು: ನಗರದಲ್ಲಿ ಶುಕ್ರವಾರ ರಾತ್ರಿಯಿಂದ ನಸುಕಿನವರೆಗೂ ಸುರಿದು ಬೆಳಿಗ್ಗೆ ಬಿಡುವು ಕೊಟ್ಟಿದ್ದ ಮಳೆಯು ಶನಿವಾರ ರಾತ್ರಿಯೂ ಧಾರಾಕಾರವಾಗಿ ಸುರಿಯಿತು.

ಮೈಸೂರು ರಸ್ತೆ, ಗುಟ್ಟಹಳ್ಳಿ, ಮಲ್ಲೇಶ್ವರ, ರಾಜಾಜಿನಗರ, ಬಸವೇಶ್ವರ ನಗರ, ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್‌ ಸಿಟಿ, ಕೆಂಗೇರಿ, ರಾಜರಾಜೇಶ್ವರಿನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆಯ ಆರ್ಭಟ ಜೋರಾಗಿತ್ತು.

ಸಿಡಿಲು– ಗುಡುಗು ಸಹಿತ ಸುರಿದ ಮಳೆಯ ವೇಳೆ ಗಾಳಿಯೂ ಜೋರಾಗಿ ಬೀಸಿದ್ದರಿಂದ 30 ಕಡೆಗಳಲ್ಲಿ ಮರಗಳು ಬಿದ್ದಿವೆ. ಗಣಪತಿಪುರ, ಅಮೂಲ್ಯ ಲೇಔಟ್‌, ಶಿವನಹಳ್ಳಿಯ ಕೆಂಪೇಗೌಡ ಲೇಔಟ್‌, ವಿಜಿನಾಪುರದ ಕೆಲ ಮನೆ ಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು  ಪರಿಪಾಟಲು ಅನುಭವಿಸಿದರು.
ಚಿಕ್ಕಲಸಂದ್ರದಲ್ಲಿ ರಸ್ತೆ ಮೇಲೆ ಹರಿಯುತ್ತಿದ್ದ ನೀರಿನಲ್ಲೇ ಸಂಚರಿಸಿದ ಪರಿಣಾಮ 6 ಕಾರುಗಳು ಕೆಟ್ಟು ನಿಂತವು.

ಶಿವಾನಂದ ವೃತ್ತದ ರೈಲ್ವೆ ಸೇತುವೆ ಕೆಳಭಾಗದ ರಸ್ತೆಯಲ್ಲಿ ನೀರು ಹರಿಯಿತು.  ಕಾರೊಂದು ಕೆಟ್ಟು ನಿಂತಿದ್ದರಿಂದ ಈ ಮಾರ್ಗದಲ್ಲಿ ವಾಹನಗಳ ಸಂಚಾರ ಕೆಲಕಾಲ ಸ್ಥಗಿತಗೊಂಡಿತು.



ಮೆಜೆಸ್ಟಿಕ್‌, ರೇಸ್‌ಕೋರ್ಸ್‌ ರಸ್ತೆ, ಓಕಳಿಪುರ, ನೃಪತುಂಗ ರಸ್ತೆ, ಮೈಸೂರು ರಸ್ತೆ ಹಾಗೂ ಸುತ್ತಮುತ್ತ ಸಂಚಾರ ದಟ್ಟಣೆಯೂ ಉಂಟಾಯಿತು.
ಹೆಸರುಘಟ್ಟದಲ್ಲಿ ವಿದ್ಯುತ್‌ ಕಂಬ ಬಿದ್ದಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಯಿತು. ವಿದ್ಯುತ್‌ ಸಂಬಂಧಿ ಸಮಸ್ಯೆಗಳ ಬಗ್ಗೆ ಬೆಸ್ಕಾಂ ಸಹಾಯ ವಾಣಿಗೆ 5,511 ದೂರುಗಳು ಬಂದಿವೆ.

ಉರುಳಿಬಿದ್ದ ಮರಗಳು: ನಗರದ ಪೂರ್ವ ವಿಭಾಗದಲ್ಲಿ 38, ಪಶ್ಚಿಮ ವಿಭಾಗದಲ್ಲಿ 12, ದಕ್ಷಿಣ ವಿಭಾಗದಲ್ಲಿ 13, ಬೊಮ್ಮಸಂದ್ರದಲ್ಲಿ 5, ದಲ್ಲಿ 3, ರಾಜರಾಜೇಶ್ವರಿನಗರದಲ್ಲಿ 2, ದಾಸರಹಳ್ಳಿಯಲ್ಲಿ 1 ಹಾಗೂ ಮಹ ದೇವಪುರದಲ್ಲಿ 2 ಮರಗಳು ಉರುಳಿ ಬಿದ್ದ ಬಗ್ಗೆ ಬಿಬಿಎಂಪಿಗೆ ದೂರುಗಳು ಬಂದಿದ್ದವು.  ರಾಜಭವನ ಎದುರು ಮರವೊಂದು ಉರುಳಿಬಿದ್ದಿತ್ತು.  

ಬಿಬಿಎಂಪಿ ಸಿಬ್ಬಂದಿ ಮರಗಳನ್ನು ತೆರವುಗೊಳಿಸಲು ಹೆಣಗಾಡಿದರು. ತೆರವು ಕಾರ್ಯಾಚರಣೆ ಶನಿವಾರ ಮಧ್ಯಾಹ್ನದವರೆಗೂ ನಡೆಯಿತು.  
ಬಸವೇಶ್ವರನಗರ, ರಾಜ ರಾಜೇಶ್ವರಿನಗರ, ಮಹಾಲಕ್ಷ್ಮಿ ಬಡಾ ವಣೆ, ಮಾಗಡಿ ರಸ್ತೆ, ಮಲ್ಲೇಶ್ವರ, ಯಲ ಹಂಕ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆ ಜೋರಾಗಿತ್ತು. ಅಲ್ಲಿನ ಪ್ರಮುಖ ರಸ್ತೆಗಳಲ್ಲೇ ಸುಮಾರು ಮೂರು ಅಡಿಗಳಷ್ಟು ನೀರು ಹರಿಯಿತು. ರಸ್ತೆಗಳು ಹೊಳೆಯಂತಾಗಿದ್ದವು. 

ಯಲಹಂಕದ ಸುರಭಿ ಬಡಾವಣೆ ಸಂಪೂರ್ಣವಾಗಿ ನೀರಿನಿಂದ ಆವರಿಸಿಕೊಂಡಿತ್ತು. ರಾತ್ರಿ ಮನೆ ತಲುಪಲು ನಿವಾಸಿಗಳು  ಸಂಕಷ್ಟ ಅನುಭವಿಸಿದರು. 

ಉರುಳಿಬಿದ್ದ ಆಟೊ: ಮೇಯರ್ ಜಿ. ಪದ್ಮಾವತಿ ಅವರು ಶುಕ್ರವಾರ ರಾತ್ರಿ ಮಳೆಯಿಂದ ಹಾನಿ ಉಂಟಾದ  ಪ್ರದೇಶಗಳಿಗೆ ಭೇಟಿ ನೀಡಿದರು. ರಾತ್ರಿ 11 ಗಂಟೆಗೆ ಖೋಡೆ ವೃತ್ತಕ್ಕೆ ಬಂದಿದ್ದ ಮೇಯರ್‌, ಅಲ್ಲಿಂದ ಸಹಾಯವಾಣಿ ಕೇಂದ್ರಕ್ಕೆ ಭೇಟಿ ನೀಡಿದರು.

ಇಂದಿರಾನಗರದಲ್ಲಿ ಮರ ಬಿದ್ದಿದ್ದ ಸ್ಥಳದ ವೀಕ್ಷಣೆಗೆ ಮೇಯರ್‌ ಬಂದಿದ್ದರು. ಅದೇ ಸ್ಥಳದ ರಸ್ತೆಯ ತಗ್ಗುಗಳಲ್ಲಿ ನೀರು ತುಂಬಿಕೊಂಡಿತ್ತು. ಈ ಮಾರ್ಗದಲ್ಲಿ  ಬರುತ್ತಿದ್ದ ಆಟೊರಿಕ್ಷಾವೊಂದು ಮೇಯರ್‌ ಎದುರೇ ಉರುಳಿಬಿತ್ತು.  ಚಾಲಕ ಹಾಗೂ ಮಹಿಳೆ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಹಲೊ... ಮೇಯರ್‌
ಶನಿವಾರ ಮಳೆ ಆರಂಭವಾಗುತ್ತಿದ್ದಂತೆಯೇ ಮೇಯರ್ ಜಿ. ಪದ್ಮಾವತಿ ಅವರು ಬಿಬಿಎಂಪಿ ಸಹಾಯವಾಣಿ ಕಚೇರಿಗೆ ಬಂದರು. ಸಾರ್ವಜನಿಕರ ಕರೆಗಳು ಅವರೇ ಸ್ವತಃ ಸ್ವೀಕರಿಸಿ, ‘ಹಲೊ... ಮೇಯರ್‌ ಮಾತಾಡೋದು. ನಿಮ್ಮ ಸಮಸ್ಯೆ ಏನು ತಿಳಿಸಿ’ ಎನ್ನುತ್ತಾ ಅಹವಾಲು ಆಲಿಸಿದರು. ಸಮಸ್ಯೆಗೆ ಪರಿಹಾರ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT