ADVERTISEMENT

ಮುಕ್ತ ಮನಸ್ಸಿನಿಂದ ಸಭೆಗೆ ತೆರಳಲು ನಿರ್ಧಾರ

ಮಹಾದಾಯಿ: ನಿರ್ದಿಷ್ಟ ಬೇಡಿಕೆ ಮಂಡಿಸುವುದು ಬೇಡ * ಸರ್ವಪಕ್ಷ ಸಭೆಯಲ್ಲಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2016, 19:44 IST
Last Updated 19 ಅಕ್ಟೋಬರ್ 2016, 19:44 IST
ಮಹಾದಾಯಿ ಸಂಬಂಧ ವಿಧಾನಸೌಧದಲ್ಲಿ ಬುಧವಾರ ನಡೆದ ಸರ್ವಪಕ್ಷಗಳ ಸಭೆಗೆ ಪಾಲ್ಗೊಳ್ಳಲು ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉತ್ತರ ಕರ್ನಾಟಕ ಭಾಗದ ರೈತರು ಮನವಿ ಸಲ್ಲಿಸಿದರು. ಧಾರವಾಡದ ಹಿರಿಯ ವಕೀಲ ಬಿ.ಡಿ. ಹಿರೇಮಠ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ವೈ.ಎಸ್‌.ವಿ. ದತ್ತ ಹಾಜರಿದ್ದರು.   – ಪ್ರಜಾವಾಣಿ ಚಿತ್ರ
ಮಹಾದಾಯಿ ಸಂಬಂಧ ವಿಧಾನಸೌಧದಲ್ಲಿ ಬುಧವಾರ ನಡೆದ ಸರ್ವಪಕ್ಷಗಳ ಸಭೆಗೆ ಪಾಲ್ಗೊಳ್ಳಲು ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉತ್ತರ ಕರ್ನಾಟಕ ಭಾಗದ ರೈತರು ಮನವಿ ಸಲ್ಲಿಸಿದರು. ಧಾರವಾಡದ ಹಿರಿಯ ವಕೀಲ ಬಿ.ಡಿ. ಹಿರೇಮಠ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ವೈ.ಎಸ್‌.ವಿ. ದತ್ತ ಹಾಜರಿದ್ದರು. – ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಹಾದಾಯಿ ವಿವಾದಕ್ಕೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು  ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ  ಫಡಣವೀಸ್‌  ಕರೆದಿರುವ ಸಭೆಯಲ್ಲಿ ಮುಕ್ತ ಮನಸ್ಸಿನಿಂದ ಪಾಲ್ಗೊಳ್ಳಬೇಕು ಎಂಬ ನಿರ್ಣಯವನ್ನು ಬುಧವಾರ ನಡೆದ ಸರ್ವಪಕ್ಷಗಳ ಸಭೆ ಕೈಗೊಂಡಿದೆ.

ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಕರ್ನಾಟಕ ಯಾವುದೇ ನಿರ್ದಿಷ್ಟ ಬೇಡಿಕೆಗಳನ್ನು ಮಂಡಿಸುವುದು ಬೇಡ. ಚರ್ಚೆಯಲ್ಲಿ ಸ್ವಲ್ಪಮಟ್ಟಿನ ಕೊಡುಕೊಳ್ಳುವಿಕೆ ಇರುತ್ತದೆ. ಅದಕ್ಕೂ ಸಿದ್ಧರಾಗಿರಬೇಕು ಎಂಬ ಒಮ್ಮತದ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ಮಹಾದಾಯಿ ನ್ಯಾಯಮಂಡಳಿ ಹೊರಗೆ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥ ಪಡಿಸುವ ಸಂಬಂಧ ಮಹಾರಾಷ್ಟ್ರ ಮುಖ್ಯಮಂತ್ರಿ ಕರೆದಿರುವ ಸಭೆಯಲ್ಲಿ ರಾಜ್ಯದ ನಿಲುವು  ಏನಿರಬೇಕು ಎಂಬುದರ ಕುರಿತು ಚರ್ಚಿಸಲು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ಸರ್ವಪಕ್ಷಗಳ ಸಭೆ ನಡೆಯಿತು.

ಅನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಮಹಾದಾಯಿ ನದಿ ನೀರಿನ ಹಂಚಿಕೆಯನ್ನು ಮಾತುಕತೆ ಮೂಲಕವೇ ಪರಿಹರಿಸಿಕೊಳ್ಳಬೇಕು ಎಂಬುದು ರಾಜ್ಯ ಸರ್ಕಾರದ ನಿಲುವೂ ಹೌದು. ಮುಕ್ತ ಮನಸ್ಸಿನಿಂದ ಚರ್ಚೆಗೆ ತೆರಳುತ್ತೇನೆ’ ಎಂದರು.

‘ಮಹಾದಾಯಿ ಕಣಿವೆಯಲ್ಲಿ ಒಟ್ಟು 199.6 ಟಿಎಂಸಿ ಅಡಿ ನೀರು ಲಭ್ಯವಿದೆ. ಇದರಲ್ಲಿ  ಕುಡಿಯುವ ನೀರು, ಕೃಷಿ ಮತ್ತು ವಿದ್ಯುತ್‌ ಉತ್ಪಾದನೆ ಸೇರಿ ರಾಜ್ಯದ ಪಾಲು  36.55 ಟಿಎಂಸಿ ಅಡಿ ಎಂದು ಈಗಾಗಲೇ ನ್ಯಾಯಮಂಡಳಿಗೆ ಮನವಿ ಸಲ್ಲಿಸಿದ್ದೇವೆ’ ಎಂದು ವಿವರಿಸಿದರು.

‘ಕುಡಿಯುವ ನೀರಿನ ಉದ್ದೇಶದ ಕಳಸಾ–ಬಂಡೂರಿ ಯೋಜನೆಗಾಗಿ 7.56 ಟಿಎಂಸಿ ಅಡಿ ನೀರಿಗೆ ಮಾತ್ರ  ಸಭೆಯಲ್ಲಿ  ಬೇಡಿಕೆ ಇಡದೆ ಒಟ್ಟು ರಾಜ್ಯದ ಪಾಲಿನ ಬಗ್ಗೆ ಚರ್ಚೆ ನಡೆಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ರಾಜ್ಯದ ಜಲಾನಯನ ಪ್ರದೇಶದಲ್ಲಿ ವಾರ್ಷಿಕ 44.15 ಟಿಎಂಸಿ ಅಡಿ ನೀರು  ಸಂಗ್ರಹವಾಗಿ ಮಹಾದಾಯಿಗೆ ಸೇರುತ್ತದೆ. ಹೀಗಾಗಿ ರಾಜ್ಯಕ್ಕೆ ಅವಶ್ಯವಿರುವ ನೀರನ್ನು ಒದಗಿಸಬೇಕು ಎಂದು ಸ್ಪಷ್ಟಪಡಿಸಲಾಗುವುದು ಎಂದರು.

ಸಭೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಜಗದೀಶ ಶೆಟ್ಟರ್‌, ಕೆ.ಎಸ್‌. ಈಶ್ವರಪ್ಪ, ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ, ರಮೇಶ್‌ ಜಿಗಜಿಣಗಿ, ಲೋಕಸಭೆ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದರಾದ ಬಿ.ಎಸ್‌. ಯಡಿಯೂರಪ್ಪ, ವೀರಪ್ಪ ಮೊಯಿಲಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಸೇರಿ ಧಾರವಾಡ, ಗದಗ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.