ADVERTISEMENT

ಮೂಲ ಒತ್ತುವರಿದಾರರ ಪತ್ತೆ ಕಾರ್ಯ ನನೆಗುದಿಗೆ

ಚಿಕ್ಕಕಲ್ಲಸಂದ್ರ ಕೆರೆ: ಕುರುಹು ಉಳಿಯದಂತೆ ಭೂಗಳ್ಳರಿಂದ ಸ್ವಾಹ

​ಪ್ರಜಾವಾಣಿ ವಾರ್ತೆ
Published 28 ಜುಲೈ 2015, 19:45 IST
Last Updated 28 ಜುಲೈ 2015, 19:45 IST

ಬೆಂಗಳೂರು: ನಗರದ ದಕ್ಷಿಣ ಭಾಗದ ನಾಲ್ಕು ಕೆರೆಗಳ ಮೂಲ ಒತ್ತುವರಿದಾರರನ್ನು ಪತ್ತೆ ಹಚ್ಚುವ ಕಾರ್ಯ ನನೆಗುದಿಗೆ ಬಿದ್ದಿದೆ.
ಸಾರಕ್ಕಿ ಕೆರೆಯಲ್ಲಿ ಶೇ 40ರಷ್ಟು ಭಾಗ ಒತ್ತುವರಿಯಾಗಿದೆ. ಯಾವುದೇ ಕುರುಹು ಉಳಿಸದ ರೀತಿಯಲ್ಲಿ ಭೂ ಗಳ್ಳರು ಚಿಕ್ಕಕಲ್ಲಸಂದ್ರ ಕೆರೆ ಜಾಗವನ್ನು ಸ್ವಾಹಾ ಮಾಡಿದ್ದಾರೆ. ಗೌಡನಪಾಳ್ಯ ಹಾಗೂ ಇಟ್ಟಮಡು ಕೆರೆಯ ಕಥೆಯೂ ಇದೇ ಆಗಿದೆ. ಈ ಪೈಕಿ ಏಪ್ರಿಲ್‌ ತಿಂಗಳಿನಲ್ಲಿ ಸಾರಕ್ಕಿ ಕೆರೆಯ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.

‘ವಿನಿವಿಂಕ್‌ ಆಸ್ತಿ ವಶಪಡಿಸಿಕೊಂಡ ಮಾದರಿಯಲ್ಲೇ ಈ ನಾಲ್ಕು ಕೆರೆಗಳ ಮೂಲ ಒತ್ತುವರಿದಾರರನ್ನು ಪತ್ತೆ ಹಚ್ಚಲಾಗುವುದು. ಅವರ ಆಸ್ತಿಯನ್ನು ವಶಪಡಿಸಿಕೊಂಡು ಸಂತ್ರಸ್ತರಿಗೆ ಪರಿಹಾರ ಒದಗಿಸುವ ಕೆಲಸ ಮಾಡಲಾಗುವುದು. ಪ್ರಾಯೋಗಿಕವಾಗಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ’ ಎಂದು ಜಿಲ್ಲಾಡಳಿತ  ಘೋಷಿಸಿತ್ತು. ಇದಕ್ಕಾಗಿ ಜಿಲ್ಲಾಡಳಿತ ಏಳು ಅಧಿಕಾರಿಗಳ ವಿಶೇಷ ತಂಡವೊಂದನ್ನು ರಚಿಸಿ ಮಾಹಿತಿ ಕಲೆ ಹಾಕುವ ಕೆಲಸವನ್ನೂ ಮಾಡಿತು. ಇದೀಗ ಈ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿದೆ.

‘ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ಒತ್ತುವರಿದಾರರನ್ನು ಪತ್ತೆ ಹಚ್ಚುವ ಕೆಲಸ ಮಾಡಲಿದೆ ಎಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ನಿರ್ದೇಶನ ನೀಡಿದರು. ಹೀಗಾಗಿ ಜಿಲ್ಲಾಡಳಿತ ಈ ಕಾರ್ಯ ಸ್ಥಗಿತಗೊಳಿಸಿತು’ ಎಂದು ಹಿರಿಯ ಅಧಿಕಾರಿಯೊಬ್ಬರು ಸಮಜಾಯಿಷಿ ನೀಡಿದರು.

‘ಸಾರ್ವಜನಿಕ ಜಮೀನುಗಳ ನಿಗಮದಲ್ಲಿ ಒತ್ತುವರಿದಾರರ ಪತ್ತೆಗಾಗಿಯೇ ಜಾರಿ ದಳ ಇದೆ. ಅಲ್ಲಿ ಸಾಕಷ್ಟು ಸಿಬ್ಬಂದಿ ಇದ್ದಾರೆ. ಜಿಲ್ಲಾಡಳಿತದಲ್ಲಿ ಸಿಬ್ಬಂದಿ ಕೊರತೆಯೂ ಇದೆ. ಗ್ರಾಮ ಪಂಚಾಯ್ತಿ ಚುನಾವಣೆಯಿಂದಾಗಿ ಕೆಲಸದ ಒತ್ತಡ ಜಾಸ್ತಿಯಾಯಿತು. ಪ್ರಕ್ರಿಯೆ ಸ್ಥಗಿತಗೊಳ್ಳಲು ಇದು ಒಂದು ಕಾರಣ’ ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು.

ಸಬ್‌ ರಿಜಿಸ್ಟ್ರಾರ್‌ಗಳಿಂದ ದಾಖಲೆ ಲಭ್ಯ: ಮೂಲ ಒತ್ತುವರಿದಾರರ ಪತ್ತೆಗೆ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಜಿಲ್ಲಾಡಳಿತವು ಸಬ್‌ ರಿಜಿಸ್ಟ್ರಾರ್‌ ಕಚೇರಿಗಳು, ಬಿಬಿಎಂಪಿ ಹಾಗೂ ಬಿಡಿಎಗೆ ಪತ್ರ ಬರೆದಿತ್ತು. ಸಬ್‌ ರಿಜಿಸ್ಟ್ರಾರ್‌ಗಳು ಅಗತ್ಯ ದಾಖಲೆಗಳನ್ನು ಒದಗಿಸಿದ್ದರು. ಬಿಬಿಎಂಪಿ ಹಾಗೂ ಬಿಡಿಎಯಿಂದ ಉತ್ತರ ಬಂದಿರಲಿಲ್ಲ.

‘ಸಾರಕ್ಕಿ ಕೆರೆಯ ಜಾಗವನ್ನು 1858ರಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಬಳಿಕ ಸಮೀಕ್ಷೆ ನಡೆದದ್ದು 1959ರಲ್ಲಿ. ಈ ಅವಧಿಯಲ್ಲಿ ಕೆರೆಯ ಜಾಗ ಒತ್ತುವರಿ ಆಗಿರಲಿಲ್ಲ. 1959ರ ಬಳಿಕವೇ ಕೆರೆಯ ಜಾಗ ಒತ್ತುವರಿ ಆಗಿದೆ. ಇದನ್ನು ಪತ್ತೆ ಹಚ್ಚಲು ಮಾಹಿತಿ ಕೋರಿ ಸಬ್‌ ರಿಜಿಸ್ಟ್ರಾರ್‌ಗೆ ಪತ್ರ ಬರೆಯಲಾಗಿತ್ತು’ ಎಂದು ಅವರು ತಿಳಿಸಿದರು.

‘ಕೆರೆಯ ಸರ್ವೆ ಸಂಖ್ಯೆ, ಈ ಜಾಗ ಯಾರ ಹೆಸರಿಗೆ ನೋಂದಣಿ ಆಗಿದೆ, ಕೆರೆಯ ಸುತ್ತಲಿನ ಜಾಗದ ಸರ್ವೆ ಸಂಖ್ಯೆಯ ಮಾಹಿತಿಯನ್ನು ಕೇಳಲಾಗಿತ್ತು. ಸಬ್‌ ರಿಜಿಸ್ಟ್ರಾರ್‌ ಕಚೇರಿ ಒದಗಿಸಿತ್ತು. ಖಾತಾ ಬಗ್ಗೆ ಬಿಬಿಎಂಪಿ ಹಾಗೂ ಬಿಡಿಎ ಮಾಹಿತಿ ನೀಡಿರಲಿಲ್ಲ. ಮತ್ತೊಮ್ಮೆ ಪತ್ರ ಬರೆಯಲಾಗಿತ್ತು. ಅದೇ ಹೊತ್ತಿಗೆ ಕಾರ್ಯಾಚರಣೆ ಸ್ಥಗಿತಗೊಂಡಿತ್ತು’ ಎಂದು ಅವರು ಹೇಳಿದರು.

‘ಕೆರೆ ಒತ್ತುವರಿ ತೆರವಿನ ಸಂತ್ರಸ್ತರಲ್ಲಿ ಶೇ 50ರಷ್ಟು ಮಂದಿ ಅಮಾಯಕರು. ಭೂಗಳ್ಳರು ಕೆಲವು ಅಧಿಕಾರಿಗಳ ಜತೆಗೆ ಶಾಮೀಲಾಗಿ ದಾಖಲೆ ಸೃಷ್ಟಿಸಿ ಜಾಗ ಕಬಳಿಸಿದ್ದಾರೆ. ಬಳಿಕ ಅಮಾಯಕರಿಗೆ ಮಾರಾಟ ಮಾಡಿದ್ದಾರೆ. ಅವರನ್ನು ಪತ್ತೆ ಹಚ್ಚಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು’ ಎಂದು ಅವರು ಹೇಳುತ್ತಾರೆ.

ಸಾರಕ್ಕಿ ಕೆರೆ ಒತ್ತುವರಿ ತೆರವಿನಿಂದಾಗಿ    ಸುಮಾರು 200 ಕುಟುಂಬಗಳು ನೆಲೆ ಕಳೆದುಕೊಂಡಿದ್ದವು. ಅದೇ ಮಾದರಿಯಲ್ಲಿ ಇಟ್ಟಮಡು ಹಾಗೂ ಚಿಕ್ಕಕಲ್ಲಸಂದ್ರ ಕೆರೆಯಂಗಳದಲ್ಲೂ ಕಾರ್ಯಾಚರಣೆ ನಡೆಸಲು ಜಿಲ್ಲಾಡಳಿತ ಉದ್ದೇಶಿಸಿತ್ತು. ಈ ಕಾರ್ಯಾಚರಣೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.