ADVERTISEMENT

ಮೇಲ್ಮನೆಯಲ್ಲಿ ಅಪರೂಪದ ಪ್ರಕರಣ

ಗಮನ ಸೆಳೆಯುವ ಸೂಚನೆ ಮೇಲಿನ ಚರ್ಚೆ ಮುಂದುವರಿಸಬೇಕೇ ಬೇಡವೇ?

​ಪ್ರಜಾವಾಣಿ ವಾರ್ತೆ
Published 30 ಜೂನ್ 2015, 19:31 IST
Last Updated 30 ಜೂನ್ 2015, 19:31 IST

ಸುವರ್ಣ ವಿಧಾನಸೌಧ: ರಾಜ್ಯದ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಕಾಯಂ ಹಕ್ಕು ಪತ್ರ ನೀಡುವ ಸಂಬಂಧ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಮತ್ತು ಅರುಣ ಶಹಾಪುರ  ಗಮನ ಸೆಳೆಯುವ ಸೂಚನೆ ವೇಳೆಯಲ್ಲಿ ಪ್ರಸ್ತಾಪಿಸಿದ ವಿಚಾರದ ಮೇಲಿನ ಚರ್ಚೆ ವಿಧಾನಪರಿಷತ್ತಿನಲ್ಲಿ ಮಂಗಳವಾರ ಅಪರೂಪದ ಸನ್ನಿವೇಶವನ್ನು ಸೃಷ್ಟಿಸಿತು.

ಗಮನ ಸೆಳೆಯುವ ಸೂಚನೆ ಅಡಿಯಲ್ಲಿ ಶ್ರೀನಿವಾಸ ಪೂಜಾರಿ ಬೆಳಿಗ್ಗೆ ಈ ವಿಚಾರವನ್ನು ಪ್ರಸ್ತಾಪಿಸಿದರು. ವಸತಿ ಸಚಿವ ಅಂಬರೀಷ್‌ ಲಿಖಿತ ಉತ್ತರವನ್ನು ಸದನದಲ್ಲಿ ಮಂಡಿಸಿದರು. ಆದರೆ, ಇದರಿಂದ ಸಮಾಧಾನಗೊಳ್ಳದ ಪ್ರತಿಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ, ಬಿಜೆಪಿ ಸದಸ್ಯ ಬಿ.ಜೆ. ಪುಟ್ಟಸ್ವಾಮಿ, ಶ್ರೀನಿವಾಸ ಪೂಜಾರಿ ವಿವರವಾದ ಉತ್ತರವನ್ನು ಸಚಿವರು ನೀಡಬೇಕು ಎಂದು ಬೇಡಿಕೆ ಇಟ್ಟರು.

ಇವರ ಮಾತಿಗೆ ದನಿಗೂಡಿಸಿದ ಆಡಳಿತ ಪಕ್ಷದ ಸದಸ್ಯ ವಿ.ಎಸ್‌. ಉಗ್ರಪ್ಪ, ಕೊಳಚೆ ಪ್ರದೇಶದ ನಿವಾಸಿಗಳಿಗೆ ಕಾಯಂ ಹಕ್ಕು ಪತ್ರ ವಿತರಿಸಲು ವಸತಿ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಚರ್ಚೆಯ ಕೊನೆಗೆ ಸಚಿವ ಅಂಬರೀಷ್‌ ಉತ್ತರ ನೀಡಲು ಮುಂದಾಗುತ್ತಿದ್ದಂತೆಯೇ ಎದ್ದು ನಿಂತ ಜೆಡಿಎಸ್‌ನ ಮರಿತಿಬ್ಬೇಗೌಡ, ‘ಉಗ್ರಪ್ಪ ಕಾಂಗ್ರೆಸ್‌ ಪಕ್ಷ ಬಿಡಲು ಯೋಜನೆ ರೂಪಿಸಿದಂತೆ ಇದೆ’ ಎಂದರು. ಇದಕ್ಕೆ ಪ್ರತಿಕ್ರಿಯಿಸಲು ಉಗ್ರಪ್ಪ ಮುಂದಾದಾಗ ಜೆಡಿಎಸ್‌ ಸದಸ್ಯರು ವಿರೋಧಿಸಿದ್ದರಿಂದ ಗದ್ದಲ ಉಂಟಾಯಿತು. ಆ ಸಂದರ್ಭದಲ್ಲಿ ಸಭಾಪತಿ ಪೀಠದಲ್ಲಿದ್ದ ರಾಮಚಂದ್ರೇಗೌಡ ಗದ್ದಲ ನಿಯಂತ್ರಣಕ್ಕೆ ಬಾರದ ಕಾರಣ ಸದನವನ್ನು ಭೋಜನ ವಿರಾಮಕ್ಕಾಗಿ ಮುಂದೂಡಿದರು.

ನಂತರ ಕಲಾಪ ಆರಂಭಗೊಂಡಾಗ ಈಶ್ವರಪ್ಪ ಅವರು, ‘ಅಂಬರೀಷ್‌ ಪೂರ್ಣ ಉತ್ತರ ನೀಡಿಲ್ಲ. ಹಾಗಾಗಿ ಅದೇ ವಿಚಾರವನ್ನು ಮತ್ತೆ ಚರ್ಚೆಗೆ ಕೈಗೆತ್ತಿಕೊಳ್ಳಬೇಕು’ ಎಂದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ವಿರೋಧಿಸಿದರು. ಸಭಾನಾಯಕ ಎಸ್‌.ಆರ್‌. ಪಾಟೀಲ ಮಾತನಾಡಿ, ‘ಸದನದ ಸಂಪ್ರದಾಯದಂತೆ ಒಮ್ಮೆ ಚರ್ಚೆ ನಡೆದು ಸದನ ಮುಂದೂಡಿದ ನಂತರ, ಆ ವಿಚಾರದ ಚರ್ಚೆ ಮುಗಿದಂತೆ. ಇಲ್ಲಿ ಸಚಿವರು ಉತ್ತರವನ್ನು ಮಂಡಿಸಿದ್ದಾರೆ. ಹಾಗಾಗಿ ಗಮನ ಸೆಳೆಯುವ ಸೂಚನೆಯ ಮೇಲಿನ ಚರ್ಚೆ ಮುಗಿದಿದೆ ಎಂಬುದು ನನ್ನ ನಿಲುವು. ಆದರೂ ಪೀಠದ ತೀರ್ಮಾನಕ್ಕೆ ಬಿಟ್ಟಿದ್ದು’ ಎಂದರು.

ಆಡಳಿತ ಪಕ್ಷದ ಮುಖ್ಯ ಸಚೇತಕ ಆರ್‌.ವಿ. ವೆಂಕಟೇಶ್‌, ‘ಬಿಬಿಎಂಪಿ ಚುನಾವಣೆ ಘೋಷಣೆಯಾಗಿರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿದೆ. ಬೆಂಗಳೂರಿನಲ್ಲೂ ಕೊಳಚೆ ಪ್ರದೇಶ ಇರುವುದರಿಂದ ಸಚಿವರು ಏನೂ ಘೋಷಣೆ ಮಾಡುವಂತಿಲ್ಲ’ ಎಂದರು. ಇದಕ್ಕೆ ಪ್ರತಿಪಕ್ಷಗಳ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಮತ್ತೆ ಗದ್ದಲ ಉಂಟಾಯಿತು. ಮಧ್ಯಪ್ರವೇಶಿಸಿದ ಜೆಡಿಎಸ್‌ನ ಬಸವರಾಜ ಹೊರಟ್ಟಿ, ‘ಇಂತಹ ಪರಿಸ್ಥಿತಿ ಈ ಹಿಂದೆ ಎದುರಾಗಿಲ್ಲ. ನಮ್ಮ ನಿಯಮಗಳಲ್ಲೂ ಈ ಬಗ್ಗೆ ಪ್ರಸ್ತಾಪವಿಲ್ಲ.

ಹಾಗಾಗಿ ಸಭಾಪತಿಗಳು ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು. ಅಂತಿಮವಾಗಿ ನಿರ್ಣಯ ಪ್ರಕಟಿಸಿದ ಸಭಾಪತಿ ಡಿ.ಎಚ್. ಶಂಕರಮೂರ್ತಿ, ‘ಇದೊಂದು ಅಪರೂಪದ ಪ್ರಕರಣ. ನನಗೆ ತಿಳಿದಂತೆ ಈ ಹಿಂದೆ ಇಂತಹ ಪರಿಸ್ಥಿತಿ ಎದುರಾಗಿಲ್ಲ. ಗದ್ದಲದ ಕಾರಣಕ್ಕೆ ಸಭಾಪತಿ ಪೀಠದಲ್ಲಿದ್ದವರು ಸದನವನ್ನು ಮುಂದೂಡಿದ್ದಾರೆ. ಇದು ಮಹತ್ವದ ವಿಚಾರವಾಗಿರುವುದರಿಂದ ಮತ್ತೆ ಚರ್ಚೆಗೆ ಅವಕಾಶ ಕೊಡುತ್ತೇನೆ’ ಎಂದು ಆ ಚರ್ಚೆಗೆ ಕೊನೆ ಎಳೆದರು.
*
ಲಿಖಿತ ಉತ್ತರ ಮಂಡಿಸುವಾಗ ಇಲ್ಲದ ನೀತಿ ಸಂಹಿತೆ ಬಡವರ ಬಗ್ಗೆ ಮಾತನಾಡುವಾಗ ಅಡ್ಡ ಬರುತ್ತದೆಯೇ? ಸರ್ಕಾರ ಮಲಗಿದೆಯೇ? ಅಧಿಕಾರಿಗಳು ಸತ್ತಿದ್ದಾರೆಯೇ?
-ಕೆ.ಎಸ್‌.ಈಶ್ವರಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.