ADVERTISEMENT

ಮೈತ್ರಿ ಏರ್ಪಟ್ಟರೆ ಯಾರು ಮೇಯರ್‌?

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 6:09 IST
Last Updated 3 ಸೆಪ್ಟೆಂಬರ್ 2015, 6:09 IST

ಬೆಂಗಳೂರು: ಬಿಬಿಎಂಪಿಯಲ್ಲಿ ಕಾಂಗ್ರೆಸ್– ಜೆಡಿಎಸ್ ಮೈತ್ರಿಗೆ ವೇದಿಕೆ ಸಿದ್ಧವಾಗುತ್ತಿರುವ ಸೂಚನೆ ಸಿಗುತ್ತಿದ್ದಂತೆಯೇ ಕಾಂಗ್ರೆಸ್‌ ಬಣದಲ್ಲಿ ಮೇಯರ್‌ ಹುದ್ದೆಗೆ ಪೈಪೋಟಿ ಶುರುವಾಗಿದೆ.

ಮೇಯರ್‌ ಹುದ್ದೆ ಸಾಮಾನ್ಯ ವರ್ಗಕ್ಕೆ ನಿಗದಿ ಆಗಿದ್ದರಿಂದ ಕಾಂಗ್ರೆಸ್‌ನ ಬಿ.ಎನ್‌. ಮಂಜುನಾಥ್‌ರೆಡ್ಡಿ (ಮಡಿವಾಳ ವಾರ್ಡ್‌), ಎಸ್‌. ಉದಯಕುಮಾರ್‌ (ಹಗದೂರು) ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಚುನಾವಣೆಗೆ ಇನ್ನೂ 8 ದಿನ ಬಾಕಿ ಇರುವುದರಿಂದ ಏನೆಲ್ಲ ಬದಲಾವಣೆಗಳು ಸಂಭವಿಸಲಿವೆಯೋ ಎಂಬ ಆತಂಕ ಕಾಂಗ್ರೆಸ್‌ ಪಾಳೆಯದಲ್ಲಿ ಎದ್ದು ಕಾಣುತ್ತಿದೆ.

ಮೇಯರ್‌ ಪೀಠದ ಮೇಲೆ ಕಣ್ಣಿಟ್ಟಿದ್ದ ಎಂ. ನಾಗರಾಜ್‌ (ನಂದಿನಿ ಲೇಔಟ್‌ ವಾರ್ಡ್‌), ಎಂ.ಉದಯಶಂಕರ್‌ (ಸಿದ್ದಾಪುರ) ಪರಾಭವಗೊಂಡಿದ್ದಾರೆ. ಹೀಗಾಗಿ ಮೇಯರ್‌ ಹುದ್ದೆ ಆಕಾಂಕ್ಷಿಗಳ ಸದಸ್ಯರ ಸಂಖ್ಯೆಯಲ್ಲಿ ಇಳಿಮುಖ ಆಗಿದೆ. ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದ ಎಂ.ಕೆ. ಗುಣಶೇಖರ್‌ (ಜಯಮಹಲ್‌) ಮತ್ತು ಆರ್‌. ಸಂಪತ್‌ರಾಜ್‌ (ದೇವರಜೀವನಹಳ್ಳಿ) ಸಹ ಮೇಯರ್‌ ಹುದ್ದೆಗೆ ಆಕಾಂಕ್ಷಿಗಳಾಗಿದ್ದಾರೆ.

ಇಬ್ಬರೂ ಕ್ರಮವಾಗಿ ಹಿಂದುಳಿದ ವರ್ಗ ‘ಎ’ ಮತ್ತು ಪರಿಶಿಷ್ಟ ಜಾತಿಗೆ ಸೇರಿದ್ದಾರೆ. ಮುಂದಿನ ನಾಲ್ಕು ವರ್ಷಗಳಲ್ಲಿ ಮೀಸಲಾತಿ ಆಧಾರದ ಮೇಲೆ ಇಬ್ಬರಿಗೂ ಅವಕಾಶ ಇರುವುದರಿಂದ ಈ ಸಲ ಸಾಮಾನ್ಯ ವರ್ಗದವರಿಗೆ ಆ ಸ್ಥಾನ ನೀಡಬೇಕು ಎನ್ನುವುದು ಮುಖಂಡರ ತರ್ಕವಾಗಿದೆ.

ಮೂರು ಸಲ ಪಾಲಿಕೆ ಸದಸ್ಯರಾಗಿ, ಎರಡು ಬಾರಿ ವಿರೋಧ ಪಕ್ಷದ ನಾಯಕರಾಗಿ ಅನುಭವ ಹೊಂದಿರುವ ಮಂಜುನಾಥ್‌ ರೆಡ್ಡಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರ ಪೂರ್ಣ ಬೆಂಬಲ ಇದೆ. ಸಚಿವರ ಪರಮಾಪ್ತ ಎಂದೇ ಅವರು ಗುರುತಿಸಿಕೊಂಡಿದ್ದಾರೆ.

ಮೇಯರ್‌ ಹುದ್ದೆಗೆ ಕೇಳಿಬರುತ್ತಿರುವ ಮತ್ತೊಂದು ಪ್ರಮುಖ ಹೆಸರು ಉದಯಕುಮಾರ್‌ ಅವರದು. ಎರಡು ಸಲ ಪಾಲಿಕೆ ಸದಸ್ಯರಾಗಿರುವ ಅವರೂ ತೀವ್ರ ಪ್ರಯತ್ನ ನಡೆಸಿದ್ದಾರೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ. ರಾಮಲಿಂಗಾ ರೆಡ್ಡಿ ಅವರ ಬೆಂಬಲಿಗರಿಗೆ ಸದ್ಯ ಇರುವ ಏಕೈಕ ಭಯವೆಂದರೆ ಅದು ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್‌ ಅವರದು. ಸಚಿವರು ಮಾಡಿದ ಪ್ರಸ್ತಾವಕ್ಕೆ ಅವರಿಂದ ಎಲ್ಲಿ ವಿರೋಧ ಬರುವುದೋ ಎಂಬ ಚಿಂತೆ ಅವರನ್ನು ಕಾಡುತ್ತಿದೆ.

ಈ ನಡುವೆ ಮೈತ್ರಿ ಮಾತುಕತೆ ಮುಂದುವರಿದಾಗ ಜೆಡಿಎಸ್‌ನಿಂದ ಏನೆಲ್ಲ ಪ್ರಸ್ತಾವಗಳು ಬರಬಹುದು ಎಂಬ ಲೆಕ್ಕಾಚಾರ ಸಹ ಪಾಲಿಕೆ ಕಾಂಗ್ರೆಸ್‌ ಸದಸ್ಯರಲ್ಲಿ ನಡೆಯುತ್ತಿದೆ. ಉಪಮೇಯರ್‌ ಹುದ್ದೆಯನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಕಾಂಗ್ರೆಸ್‌ ಈಗಾಗಲೇ ತಾತ್ವಿಕವಾಗಿ ಒಪ್ಪಿಕೊಂಡಿದೆ ಎಂಬ ಸುದ್ದಿ ಹರಡಿದೆ. ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಏರ್ಪಡಿಸುವ ಯತ್ನದಲ್ಲಿ ಮುಂಚೂಣಿಯಲ್ಲಿದ್ದು, ಪಕ್ಷದ ಪಾಲಿಕೆ ಸದಸ್ಯರನ್ನು ಕೇರಳದ ರೆಸಾರ್ಟ್‌ನಲ್ಲಿ ಒಟ್ಟಾಗಿ ಹಿಡಿದಿಟ್ಟುಕೊಂಡಿದ್ದಾರೆ.

ಮಹಾಲಕ್ಷ್ಮಿ ಲೇಔಟ್‌ ಶಾಸಕ ಕೆ.ಗೋಪಾಲಯ್ಯ. ಹೀಗಾಗಿ ಗೋಪಾಲಯ್ಯ ಅವರ ಪತ್ನಿ ಹೇಮಲತಾ ಅವರಿಗೆ ಉಪಮೇಯರ್‌ ಸ್ಥಾನ ‘ಕಾಣಿಕೆ’ಯಾಗಿ ದೊರೆಯಲಿದೆ ಎಂದು ಹೇಳಲಾಗಿದೆ. ಹೀಗಾಗಿ ಮೊದಲ ಅವಧಿಯಲ್ಲಿ ಈ ಹುದ್ದೆಗೆ ಜೆಡಿಎಸ್‌ನಲ್ಲಿ ಯಾವುದೇ ಪೈಪೋಟಿ ಇಲ್ಲ ಎನ್ನಲಾಗಿದೆ.
*

ADVERTISEMENT

ಮೇಯರ್‌ ಸ್ಥಾನಕ್ಕೆ 11ರಂದು ಚುನಾವಣೆ
ನಗರದ ಮೇಯರ್‌, ಉಪಮೇಯರ್‌ ಹಾಗೂ ಪಾಲಿಕೆ 12 ಸ್ಥಾಯಿ ಸಮಿತಿಗಳ ಸದಸ್ಯರ ಸ್ಥಾನಗಳಿಗೆ ಸೆ. 11ರಂದು ಚುನಾವಣೆ ನಡೆಸಲು ಪ್ರಾದೇಶಿಕ ಆಯುಕ್ತರು ನಿರ್ಧರಿಸಿದ್ದಾರೆ.ಈ ಸಂಬಂಧ ಬುಧವಾರ ಅಧಿಸೂಚನೆ ಹೊರಡಿಸಲಾಗಿದೆ. ಎಲ್ಲ ಹೊಸ ಸದಸ್ಯರು ಹಾಗೂ ಮತಾಧಿಕಾರ ಹೊಂದಿರುವ ಪಾಲಿಕೇತರ ಸದಸ್ಯರಿಗೆ ಬುಧವಾರವೇ ನೋಟಿಸ್‌ ಕಳುಹಿಸಿ ಕೊಡಲಾಗಿದೆ. ಮೇಯರ್‌ ಹುದ್ದೆ ಸಾಮಾನ್ಯ ವರ್ಗಕ್ಕೆ ನಿಗದಿಯಾದರೆ ಉಪಮೇಯರ್‌ ಹುದ್ದೆ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.