ADVERTISEMENT

ಮೊದಲ ದಿನ: 90 ಸಾವಿರ ಜನ

ಮೆಟ್ರೊ ಸುರಂಗ ಮಾರ್ಗ ಸಂಚಾರ ಪುಳಕ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2016, 19:52 IST
Last Updated 30 ಏಪ್ರಿಲ್ 2016, 19:52 IST
ಮೆಟ್ರೊ ರೈಲು ಸಂಚಾರವನ್ನು ಜನರು ಸಂಭ್ರಮಿಸಿದ ಪರಿ.  -ಪ್ರಜಾವಾಣಿ ಚಿತ್ರ
ಮೆಟ್ರೊ ರೈಲು ಸಂಚಾರವನ್ನು ಜನರು ಸಂಭ್ರಮಿಸಿದ ಪರಿ. -ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಾಗಡಿ ರಸ್ತೆ ಪ್ರವೇಶ ದ್ವಾರದವರೆಗಿನ ‘ನಮ್ಮ ಮೆಟ್ರೊ’ದ ಸುರಂಗ ಮಾರ್ಗದಲ್ಲಿ ಮೊದಲ ದಿನ ರೈಲು ಸಂಚಾರದ ಪುಳಕವನ್ನು ಅನುಭವಿಸಿದವರು 90,482 ಮಂದಿ.

ಶಿಳ್ಳೆಯಂತಹ ಸದ್ದು ಮೊಳಗಿಸುತ್ತಾ 60 ಅಡಿ ಆಳದ ಸುರಂಗದೊಳಗೆ ಪ್ರವೇಶಿಸಿದ ರೈಲು ಪೊಟರೆಯನ್ನು ಹೊಕ್ಕ ಹಾವಿನಂತೆ  ಸರಸರನೇ ಬಳುಕುತ್ತಾ ಸಾಗಿತು. ಇಡೀ ಸುರಂಗ ಸಂಚಾರಕ್ಕೆ ತೆಗೆದುಕೊಂಡಿದ್ದು 8ರಿಂದ 9 ನಿಮಿಷ ಮಾತ್ರ. ರೈಲು ಸಾಗುತ್ತಿದ್ದ ವೇಗಕ್ಕೆ 6.5 ಮೀಟರ್‌ ವ್ಯಾಸದ ಗುಹೆಯಂತಿರುವ ಸುರಂಗದಲ್ಲಿ ವಿದ್ಯುತ್‌ ದೀಪಗಳು ಮಿಂಚುಹುಳದಂತೆ ಮಿಂಚಿ ಮಾಯವಾಗುತ್ತಿದ್ದವು.

ಸುರಂಗದೊಳಗೆ  ಮೆಟ್ರೊ ಸಾಗಿಬಂದ ಪರಿಯೂ ಪ್ರಯಾಣಿಕರಿಗೆ ಅಚ್ಚರಿ ಮೂಡಿಸಿತು. ರೈಲು ಹತ್ತಿ ಕಣ್ತೆರೆಯುವಷ್ಟರಲ್ಲಿ ಮಾಗಡಿ ರಸ್ತೆ ನಿಲ್ದಾಣ, ಅದಾದ ಆರೆಕ್ಷಣದಲ್ಲಿ ರೈಲ್ವೆ ನಿಲ್ದಾಣ, ಬಳಿಕ ಕೆಂಪೇಗೌಡ ನಿಲ್ದಾಣ, ಹೀಗೆ ಒಂದರ ಬಳಿಕ ಒಂದು ನಿಲ್ದಾಣಗಳು ಸಾಗಿ ಹೋಗಿದ್ದೇ ಪ್ರಯಾಣಿಕರಿಗೆ ತಿಳಿಯಲಿಲ್ಲ. ಮೆಟ್ರೊ ರೈಲುಗಳು ಶನಿವಾರ ಪ್ರವಾಸಿ ತಾಣವಾಗಿ ಪರಿವರ್ತನೆ ಹೊಂದಿದ್ದವು. ಕುಟುಂಬ ಸಮೇತ ಬಂದು ಜನರು ಸವಿ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.