ADVERTISEMENT

ಮೋಡಿ ಮಾಡಿದ ತರಾವರಿ ಯಂತ್ರಗಳ ಸಂತೆ

ವಿಜಯಕುಮಾರ್ ಸಿಗರನಹಳ್ಳಿ
Published 17 ನವೆಂಬರ್ 2017, 20:52 IST
Last Updated 17 ನವೆಂಬರ್ 2017, 20:52 IST
ಮಲ್ಟಿಪರ್ಪಸ್ ಕಲ್ಟಿವೇಟರ್ ಬಳಕೆ ಬಗ್ಗೆ ರೈತರಿಗೆ ಪ್ರಾತ್ಯಕ್ಷಿಕೆ ನೀಡುತ್ತಿರುವ ಮಾರುತಿ ಕೃಷಿ ಉದ್ಯೋಗ್ ಸಂಸ್ಥೆಯ ಸಿಬ್ಬಂದಿ
ಮಲ್ಟಿಪರ್ಪಸ್ ಕಲ್ಟಿವೇಟರ್ ಬಳಕೆ ಬಗ್ಗೆ ರೈತರಿಗೆ ಪ್ರಾತ್ಯಕ್ಷಿಕೆ ನೀಡುತ್ತಿರುವ ಮಾರುತಿ ಕೃಷಿ ಉದ್ಯೋಗ್ ಸಂಸ್ಥೆಯ ಸಿಬ್ಬಂದಿ   

ಬೆಂಗಳೂರು: ರೈತರ ಕೃಷಿ ಚಟುವಟಿಕೆಗೆ ಅನುಕೂಲವಾಗುವ ಯಂತ್ರೋಪಕರಣಗಳ ಸಂತೆಯೇ ಕೃಷಿ ಮೇಳದಲ್ಲಿ ಇತ್ತು.

ಉಳುಮೆ, ಬಿತ್ತನೆ, ಕಳೆ ತೆಗೆಯುವುದು, ಔಷಧಿ ಸಿಂಪರಣೆ, ಬೆಳೆ ಕಟಾವು ಮಾಡುವ, ಮೇವು ಕತ್ತರಿಸುವ, ಹಾಲು ಕರೆಯುವ... ಹೀಗೆ ಬಗೆ ಬಗೆ ಮಾದರಿಯ ಯಂತ್ರಗಳು ಇವೆ.

ತರಹೇವಾರಿ ಯಂತ್ರಗಳನ್ನು ಕುತೂಹಲದಿಂದ ವೀಕ್ಷಿಸಿದ ರೈತರು, ಅವುಗಳ ಬೆಲೆ, ಸರ್ಕಾರ ನೀಡುವ ಸಹಾಯಧನದ ಮಾಹಿತಿ ಪಡೆದುಕೊಂಡರು.

ADVERTISEMENT

ಒಂದೇ ಯಂತ್ರ ಹಲವು ಉಪಯೋಗ: ಮಾರುತಿ ಕೃಷಿ ಉದ್ಯೋಗ್ ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಮಲ್ಟಿಪರ್ಪಸ್ ಇಂಟರ್ ಕಲ್ಟಿವೇಟರ್’ ಯಂತ್ರ ರೈತರಲ್ಲಿ ಕುತೂಹಲ ಮೂಡಿಸಿತ್ತು.

‘ಟ್ರ್ಯಾಕ್ಟರ್, ಟಿಲ್ಲರ್ ಹಾಗೂ ಎತ್ತುಗಳು ಮಾಡುವ ಎಲ್ಲ ಕೆಲಸವನ್ನು ಒಂದೇ ಯಂತ್ರ ಮಾಡಲಿದೆ. ಉಳುಮೆ, ಬಿತ್ತನೆ, ಕಳೆ ತೆಗೆಯುವುದು, ಔಷಧಿ ಸಿಂಪರಣೆ, ಅಂತರ್‌ ಬೇಸಾಯ ಮಾಡಲು, ನೀರು ಮೇಲೆತ್ತಲು ಈ ಬಳಕೆಯಾಗಲಿದೆ. ಟ್ರಾಲಿ ಅಳವಡಿಸಿಕೊಂಡರೆ ಸರಕು ಸಾಗಣೆಗೂ ರೈತರಿಗೆ ಅನುಕೂಲ ಆಗಲಿದೆ’ ಎಂದು ಸಂಸ್ಥೆಯ ಮುಖ್ಯಸ್ಥ ಪಿ. ನಾಗರಾಜ್ ತಿಳಿಸಿದರು.

‘ಎರಡೂವರೆ ಲೀಟರ್ ಡೀಸೆಲ್‌ನಲ್ಲಿ ಒಂದು ಎಕರೆ ಉಳುಮೆ ಮಾಡಬಹುದು ಮತ್ತು ಮೂರು ಎಕರೆಯಲ್ಲಿ ಅಂತರ್ ಬೇಸಾಯ ಮಾಡಬಹುದು’ ಎಂದೂ ಅವರು ಹೇಳಿದರು.

‘ಯಂತ್ರಕ್ಕೆ ₹ 86,000 ನಿಗದಿ ಮಾಡಿದ್ದು, ಸಾಮಾನ್ಯ ವರ್ಗದ ರೈತರಿಗೆ ₹ 33,200, ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ₹ 60,000 ಸಹಾಯಧನವನ್ನು ಸರ್ಕಾರ ನೀಡಲಿದೆ’  ಎಂದು ವಿವರಿಸಿದರು.

ಯಂತ್ರವನ್ನು ಬಳಕೆ ಮಾಡುವ ವಿಧಾನವನ್ನು ಮೇಳದ ಆವರಣದಲ್ಲೇ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ವಿವರಿಸಲಾಯಿತು. ಕೆಲ ರೈತರು ಪ್ರಾಯೋಗಿಕವಾಗಿ ತಾವೇ ಉಳುಮೆ ಮಾಡಿ ಪರೀಕ್ಷೆಯನ್ನೂ ಮಾಡಿದರು.

ಔಷಧಿ ಸಿಂಪರಣೆ ಯಂತ್ರ: ಮಿತ್ರ ಕಂಪೆನಿ ಅಭಿವೃದ್ಧಿಪಡಿಸಿರುವ ಔಷಧಿ ಸಿಂಪರಣೆ ಯಂತ್ರವೂ ಜನಾಕರ್ಷಣೆಯ ಕೇಂದ್ರವಾಗಿತ್ತು. ‘ಗ್ರೇಪ್ ಮಾಸ್ಟರ್ ಬ್ಲಾಸ್ಟ್ ಪ್ಲಸ್’ ಎಂಬ ಈ ಯಂತ್ರದಲ್ಲಿ 700 ಲೀಟರ್‌ ಔಷಧಿ ಮಿಶ್ರಿತ ನೀರನ್ನು ಸಂಗ್ರಹ ಮಾಡಿಕೊಳ್ಳಲು ಸಾಧ್ಯವಿದೆ.

ದ್ರಾಕ್ಷಿ, ದಾಳಿಂಬೆ, ಸಪೋಟ, ನಿಂಬೆ, ಬಾಳೆ ತೋಟಗಳಿಗೆ ಸುಲಭವಾಗಿ ಔಷಧಿ ಸಿಂಪರಣೆ ಮಾಡಬಹುದು.

‘ಪೋಮ್ ಮಾಸ್ಟರ್’ ಎಂಬ ಯಂತ್ರವನ್ನೂ ಅಭಿವೃದ್ಧಿಪಡಿಸಿದ್ದು, ಇದು 200 ಲೀಟರ್ ಸಾಮರ್ಥ್ಯ ಹೊಂದಿದೆ.

700 ಲೀಟರ್ ಸಾಮರ್ಥ್ಯದ ಯಂತ್ರಕ್ಕೆ ₹ 4.10 ಲಕ್ಷ ಮತ್ತು 200 ಲೀಟರ್ ಸಾಮರ್ಥ್ಯದ ಯಂತ್ರಕ್ಕೆ ₹ 2.25 ಲಕ್ಷ ನಿಗದಿ ಮಾಡಲಾಗಿದೆ. ಸಾಮಾನ್ಯ ವರ್ಗದ ರೈತರಿಗೆ ₹ 50,000, ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ₹1.12 ಲಕ್ಷ ಸಹಾಯಧನ ದೊರೆಯಲಿದೆ ಎಂದು ಕಂಪೆನಿಯ ಅಧಿಕಾರಿಗಳು ರೈತರಿಗೆ ವಿವರಿಸಿದರು.

**

ಸೂರ್ಯಕಾಂತಿ– ಹೊಸ ತಳಿ ಅಭಿವೃದ್ಧಿ

ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸೂರ್ಯಕಾಂತಿ ಬೆಳೆಯ ಹೊಸ ತಳಿಯೊಂದನ್ನು ಅಭಿವೃದ್ಧಿಪಡಿಸಿದ್ದು, ಸದ್ಯದಲ್ಲೇ ಬಿತ್ತನೆಗೆ ಅನುಮತಿ ದೊರೆಯುವ ವಿಶ್ವಾಸದಲ್ಲಿದ್ದಾರೆ.

‘ಕರ್ನಾಟಕ ಬೆಂಗಳೂರು ಸೂರ್ಯಕಾಂತಿ ಹೈಬ್ರೀಡ್(ಕೆಬಿಎಸ್‌ಎಚ್‌)–80 ಎಂಬ ತಳಿ ಅಭಿವೃದ್ಧಿಪಡಿಸಲಾಗಿದೆ. ಬಿತ್ತನೆ ಮಾಡಿದ 87ರಿಂದ 90 ದಿನದಲ್ಲಿ ಬೆಳೆ ಕೈ ಸೇರಲಿದೆ. ಮಳೆಯಾಶ್ರಿತ ಜಮೀನಿನಲ್ಲಿ ಹೆಕ್ಟೇರ್‌ಗೆ 10 ರಿಂದ 11 ಕ್ವಿಂಟಲ್ ಮತ್ತು ನೀರಾವರಿ ಜಮೀನಿನಲ್ಲಿ 16 ರಿಂದ 25 ಕ್ವಿಂಟಲ್ ಬೆಳೆಯಲು ಸಾಧ್ಯವಿದೆ. ಶೇ 38ರಿಂದ ಶೇ 40ರಷ್ಟು ಎಣ್ಣೆ ಅಂಶ ಇದೆ’ ಎಂದು ತಳಿ ವಿಜ್ಞಾನಿ ಪುಟ್ಟರಂಗಯ್ಯ ಮಾಹಿತಿ ನೀಡಿದರು.

‘1973ರಿಂದ ಸೂರ್ಯಕಾಂತಿ ಬೆಳೆಯ ಹೊಸ ಹೊಸ ತಳಿಗಳನ್ನು ವಿಶ್ವವಿದ್ಯಾಲಯ ವಿಜ್ಞಾನಿಗಳ ಅಭಿವೃದ್ಧಿಪಡಿಸುತ್ತಿದ್ದಾರೆ’ ಎಂದೂ ವಿವರಿಸಿದರು.

ಮೇಳಕ್ಕೆ ಬರುವ ಜನರಿಗೆ ಈ ಎಲ್ಲಾ ತಳಿಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ರೈತರು ಹೊಸ ತಳಿಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದರೆ, ಯುವಕ–ಯುವತಿಯರು ಸೂರ್ಯಕಾಂತಿ ಹೂಗಳ ನಡುವೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದರು.

**

₹ 3.50 ಲಕ್ಷದ ಜೋಡೆತ್ತು

ಮಂಡ್ಯ ಜಿಲ್ಲೆ ಕಲ್ಲಹಳ್ಳಿಯ ಪಟೇಲ್ ಶಿವರುದ್ರೇಗೌಡ ಕಟ್ಟಿರುವ ₹ 3.50 ಲಕ್ಷ ಬೆಲೆಯ ‘ಹಳ್ಳಿಕಾರ್’ ತಳಿಯ ಜೋಡೆತ್ತುಗಳು ರೈತರ ಆಕರ್ಷಣೆಯ ಕೇಂದ್ರವಾಗಿದೆ.

ಎರಡು ವರ್ಷ ವಯಸ್ಸಿನ ಈ ಎತ್ತುಗಳ ಮುಂದೆ ನಿಂತು ಮೊಬೈಲ್‌ನಲ್ಲಿ ಪೋಟೋ ತೆಗೆದುಕೊಳ್ಳಲು ಜನ ಮುಗಿಬಿದ್ದಿದ್ದರು.

‘ಹಳ್ಳಿಕಾರ್ ತಳಿಯ ಎತ್ತುಗಳನ್ನು ಸಾಕುವುದು ನಮ್ಮ ಹವ್ಯಾಸವಾಗಿದ್ದು, ಮಂಡ್ಯ ಜಿಲ್ಲೆಯ ಹಲವು ದನಗಳ ಜಾತ್ರೆಯಲ್ಲಿ ಈ ಎತ್ತುಗಳು ಬಹುಮಾನ ಪಡೆದಿವೆ’ ಎಂದು ಶಿವರುದ್ರೇಗೌಡರ ಮಗ ಕಿರಣ್ ತಿಳಿಸಿದರು.

**
ಮೇಳಕ್ಕೆ ಬಂದು ಮಡಕೆ ಮಾಡಿದರು

ಮೇಳಕ್ಕೆ ಬಂದು ವಿದ್ಯಾರ್ಥಿಗಳು ಕೃಷಿ ಚಟುವಟಿಕೆ ಬಗ್ಗೆ ಮಾಹಿತಿ ಪಡೆಯುವುದಷ್ಟೇ ಅಲ್ಲದೇ ಮಡಕೆಯನ್ನೂ ಮಾಡಿ ಮನೆಗೆ ಕೊಂಡೊಯ್ದರು.

ಕುಶಲಕರ್ಮಿಗಳು ಸ್ಥಳದಲ್ಲೇ ಮಡಕೆ, ಕುಡಿಕೆ, ಹೂಗಳನ್ನು ಇಡುವ ಮಣ್ಣಿನ ಕುಂಡಗಳನ್ನು ತಯಾರಿಸುತ್ತಿದ್ದರು. ಇದನ್ನು ನೋಡಲು ವಿದ್ಯಾರ್ಥಿಗಳ ಉತ್ಸಾಹದಿಂದ ಜಮಾಯಿಸಿದ್ದರು.

ಕುಶಲಕರ್ಮಿಗಳು ಅವರಿಗೆ ಮಡಕೆ ತಯಾರಿಸುವ ಕಲೆ ಹೇಳಿಕೊಡುವುದಲ್ಲದೇ, ಅವರಿಂದಲೇ ಸಣ್ಣ–ಸಣ್ಣ ಕುಡಿಕೆ, ಹೂಕುಂಡಗಳನ್ನು ತಯಾರು ಮಾಡಿಸಿದರು. ಬಳಿಕ ₹ 10 ಪಡೆದು ಅವುಗಳನ್ನು ಅವರಿಗೆ ಕೊಟ್ಟು ಕಳುಹಿಸಿದರು. ಮಡಕೆ ಮಾಡಲು ವಿದ್ಯಾರ್ಥಿಗಳು ನಾಮುಂದು, ತಾಮುಂದು ಎಂದು ಮುಗಿಬಿದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.