ADVERTISEMENT

ಯುಟಿಎಸ್‌ ಆ್ಯಪ್‌ ಬಳಸಿದರೆ ಶೇ 5ರಷ್ಟು ಬೋನಸ್‌

ರೈಲ್ವೆ ಟಿಕೆಟ್‌ ಮುಂಗಡ ಕಾಯ್ದಿರಿಸುವಿಕೆ

​ಪ್ರಜಾವಾಣಿ ವಾರ್ತೆ
Published 24 ಮೇ 2018, 20:06 IST
Last Updated 24 ಮೇ 2018, 20:06 IST
ಯುಟಿಎಸ್‌ ಆ್ಯಪ್‌ ಬಳಸಿದರೆ ಶೇ 5ರಷ್ಟು ಬೋನಸ್‌
ಯುಟಿಎಸ್‌ ಆ್ಯಪ್‌ ಬಳಸಿದರೆ ಶೇ 5ರಷ್ಟು ಬೋನಸ್‌   

ಬೆಂಗಳೂರು: ಕಾಯ್ದಿರಿಸದ ಟಿಕೆಟ್‌ ಮಾರಾಟ ವ್ಯವಸ್ಥೆ (ಯುಟಿಎಸ್‌) ಆ್ಯಪ್‌ ಬಳಸಿ ರೈಲ್ವೆ ಟಿಕೆಟ್‌ ಮುಂಗಡ ಕಾಯ್ದಿರಿಸುವವರು ಇನ್ನು ಪ್ರತಿ ರೀಚಾರ್ಜ್‌ಗೆ ಶೇ 5ರಷ್ಟು ಬೋನಸ್‌ ಪಡೆಯಬಹುದು.

ಈ ಆ್ಯಪ್‌ಗೆ ರೀಚಾರ್ಜ್ ಮಾಡುವ ಮೊತ್ತದ ಮಿತಿಯನ್ನೂ ನೈರುತ್ಯ ರೈಲ್ವೆ ಇಲಾಖೆ ಹೆಚ್ಚಿಸಿದೆ. ಈ ಹಿಂದೆ ಈ ಆ್ಯಪ್‌ ಮೂಲಕ ₹ 5 ಸಾವಿರದವರೆಗೆ ಮಾತ್ರ ರಿಚಾರ್ಜ್‌ ಮಾಡಲು ಅವಕಾಶ ಇತ್ತು. ಇದನ್ನು ಈಗ ₹ 10 ಸಾವಿರಕ್ಕೆ ಹೆಚ್ಚಿಸಲಾಗಿದೆ.

ಯುಟಿಎಸ್‌ ಆ್ಯಪ್‌ ಮೂಲಕ ಒಬ್ಬ ಪ್ರಯಾಣಿಕ ತಾನಿರುವ ಸ್ಥಳದಿಂದ 5 ಕಿ.ಮೀ ವ್ಯಾಪ್ತಿಯ ನಿಲ್ದಾಣಗಳಲ್ಲಿ ಏಕಕಾಲಕ್ಕೆ ಗರಿಷ್ಠ ನಾಲ್ಕು ಟಿಕೆಟ್‌ಗಳನ್ನು ಕಾಯ್ದಿರಿಸಬಹುದು. ಆಯಾ ಋತುವಿನ ಟಿಕೆಟ್‌ ಖರೀದಿಗೆ ಹಾಗೂ ಅವುಗಳ ನವೀಕರಣಕ್ಕೂ ಈ ಆ್ಯಪ್‌ ಬಳಸಬಹುದು. ಪ್ಲ್ಯಾಟ್‌ಫಾರ್ಮ್‌ ಟಿಕೆಟ್‌ ಖರೀದಿಗೆ ಹಾಗೂ ಖರೀದಿಸಿರುವ ಟಿಕೆಟ್‌ಗಳನ್ನು ರದ್ದುಪಡಿಸುವುದಕ್ಕೂ ಈ ಆ್ಯಪ್‌ ನೆರವಾಗುತ್ತದೆ. ರೈಲ್ವೆ ವ್ಯಾಲೆಟ್‌ನಲ್ಲಿ ನಿರ್ದಿಷ್ಟ ಮೊತ್ತವನ್ನು ತುಂಬಿ ಅದನ್ನು ಟಿಕೆಟ್‌ ಖರೀದಿಗೆ ಬಳಸಬಹುದು.

ADVERTISEMENT

‘ಪ್ರಯಾಣಿಕರ ವಲಯದಲ್ಲಿ ಈ ಆ್ಯಪ್‌ ಬಳಕೆ ಜನಪ್ರಿಯವಾಗುತ್ತಿದೆ. ಇದನ್ನು ಬಿಡುಗಡೆ ಮಾಡಿದ ಬಳಿಕ 52,100 ಮಂದಿ ನೋಂದಾಯಿತ ಪ್ರಯಾಣಿಕರು ಇದನ್ನು ಬಳಸಿದ್ದಾರೆ’ ಎಂದು ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಇ.ವಿಜಯಾ ತಿಳಿಸಿದರು.

‘ನಗರದಲ್ಲಿ ನಿತ್ಯವೂ 200ರಷ್ಟು ಮಂದಿ ಹೊಸತಾಗಿ ಈ ಆ್ಯಪ್‌ ಬಳಕೆ ಆರಂಭಿಸುತ್ತಿದ್ದಾರೆ. ಸಬ್‌ಅರ್ಬನ್ ರೈಲುಗಳಲ್ಲಿ ಪ್ರಯಾಣಿಸುವವರಿಗೆ ಇದು ತುಂಬಾ ಪ್ರಯೋಜನಕಾರಿ. ಪ್ರಯಾಣಿಕರು ಟಿಕೆಟ್‌ಗಾಗಿ ಸರದಿಯಲ್ಲಿ ನಿಂತು ಕಾಯಬೇಕಿಲ್ಲ. ರೈಲನ್ನು ಹತ್ತಿದ ಬಳಿಕವೂ, ಅಲ್ಲಿಂದಲೇ ಟಿಕೆಟ್‌ ಕಾಯ್ದಿರಿಸಬಹುದು’ ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಪ್ರಯಾಣಿಸುವವರು ಟಿಕೆಟ್‌ನ ಮುದ್ರಿತ ರಸೀದಿ ಹೊಂದಿರಬೇಕಾಗಿಲ್ಲ. ಟಿಕೆಟ್‌ ಪರಿಶೀಲನೆ ವೇಳೆ ಮೊಬೈಲ್‌ನಲ್ಲಿ ಡಿಜಿಟಲ್‌ ರೂಪದಲ್ಲಿರುವ ಟಿಕೆಟ್‌ ತೋರಿಸಿದರೂ ಸಾಕು.

ಅಂಕಿ–ಅಂಶ

1.5 ಲಕ್ಷ

ಪ್ರಯಾಣಿಕರು ಇದುವರೆಗೆ ಯುಟಿಎಸ್‌ ಆ್ಯಪ್‌ ಮೂಲಕ ಕಾಯ್ದಿರಿಸಿದ ಟಿಕೆಟ್‌

1,500

ದಿನವೊಂದಕ್ಕೆ ಯುಟಿಎಸ್ ಆ್ಯಪ್‌ ಬಳಸುವ ಸರಾಸರಿ ಪ್ರಯಾಣಿಕರು

₹ 12 ಲಕ್ಷ

ಈ ಆ್ಯಪ್‌ ಬಳಕೆಯಿಂದ ಬಂದ ಆದಾಯ (2018ರ ಫೆ.18ರ ಬಳಿಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.